

ಬೆಂಗಳೂರು: ಭ್ರಷ್ಟಾಚಾರದಿಂದ ದೇಶದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಸರ್ಕಾರಿ ನೌಕರರು ಭ್ರಷ್ಟಾಚಾರ ತೊರೆದು ಪ್ರಾಮಾಣಿಕ ಹಾದಿಯಲ್ಲಿ ನಡೆದು, ತಮ್ಮ ಕರ್ತವ್ಯದಲ್ಲಿ ಸತ್ಯ, ನಿಷ್ಠೆ ಹಾಗೂ ಸಮಗ್ರತೆಯನ್ನು ಪ್ರದರ್ಶಿಸಿ ದೇಶದ ಅಭಿವೃದ್ಧಿಗೆ ಪೂರಕವಾಗಬೇಕು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಹೇಳಿದರು.
ಯಲಹಂಕ ಉಪ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಗುರುವಾರ ಲೋಕಾಯುಕ್ತ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಮತ್ತು ಬೆಂಗಳೂರು ಪೂರ್ವ ತಾಲೂಕುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆ, ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ನೀಡುವ ಸವಲತ್ತುಗಳನ್ನು ಪಡೆಯುವ ಹಕ್ಕು ಎಲ್ಲ ನಾಗರಿಕರಿಗೆ ಇದೆ. ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶೋತ್ತರದ ಅಡಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಜನರಿಗೆ ಸರ್ಕಾರದ ಸೌಕರ್ಯಗಳು ಸಿಗದೇ ಇದ್ದಲ್ಲಿ, ಆ ಸೌಲಭ್ಯಗಳನ್ನು ಕೊಡಿಸುವ ಕೆಲಸವನ್ನು ಸಂಸ್ಥೆ ಮಾಡುತ್ತದೆ ಎಂದು ತಿಳಿಸಿದರು.
ಜನರ ಕುಂದುಕೊರತೆಗಳನ್ನು ಬಗೆಹರಿಸುವುದು, ಭ್ರಷ್ಟಾಚಾರ ನಿರ್ಮೂಲನೆ, ನಿಗ್ರಹ ಮಾಡುವುದು ಲೋಕಾಯುಕ್ತ ಸಂಸ್ಥೆಯ ಕಾರ್ಯೋದ್ದೇಶ. ಸರ್ಕಾರದ ಸವಲತ್ತುಗಳು ಜನರಿಗೆ ತಲುಪುತ್ತಿದೆಯೇ? ಎಲ್ಲಿ ಕೆಲಸ ಆಗುತ್ತಿಲ್ಲ? ಯಾವ ಕೆಲಸ ವಿಳಂಬವಾಗುತ್ತಿದೆ ಎಂಬುದನ್ನು ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳ ಮೂಲಕ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವನ್ನು ನಾವು ಮಾಡುತ್ತೇವೆ. ಒಂದು ವೇಳೆ ಸೌಕರ್ಯ ನೀಡುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ, ದುರ್ನಡತೆ ಪ್ರದರ್ಶಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಕಾಯ್ದೆ ಅಡಿಯಲ್ಲಿ ದೂರು ಸಲ್ಲಿಸಿದ ಕೂಡಲೆ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವುದಿಲ್ಲ. ಸೂಕ್ತ ವಿಚಾರಣೆಯನ್ನು ನಡೆಸಿ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಅಧಿಕಾರಿಗಳಿಗೆ ಸಾಕಷ್ಟು ಅವಕಾಶವನ್ನು ನೀಡಲಾಗುವುದು. ಅಲ್ಲದೆ ದೂರುದಾರರು ಸುಳ್ಳು ಆರೋಪವನ್ನು ನೀಡಿದಲ್ಲಿ ಅಂತಹ ಪ್ರಕರಣಗಳಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನೂ ಸಹ ಜರುಗಿಸಲಾಗುವುದು ಎಂದರು.
ಹಲವಾರು ವಲಯಗಳಲ್ಲಿ ಸಾರ್ವಜನಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವ ಕಾರಣ ಇಂತಹ ಕುಂದು ಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮಗಳು ಅವಶ್ಯಕವಾಗಿವೆ. ಇದರ ಸಂಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉಪಲೋಕಾಯುಕ್ತ-೨ ಬಿ.ವೀರಪ್ಪ ಅವರು ಮಾತನಾಡಿ, ರಾಷ್ಟ್ರದ ನಾಲ್ಕನೇ ಸ್ತಂಭವಾಗಿರುವ ಮಾಧ್ಯಮಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದಲ್ಲಿ ಸಮಾಜದ ತಪ್ಪುಗಳನ್ನು ತಿದ್ದಲು ಸಾಧ್ಯ. ತನ್ಮೂಲಕ ಪ್ರಾಮಾಣಿಕ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಜಿ. ಜಗದೀಶ, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ಲತಾ ಕುಮಾರಿ, ಈಶಾನ್ಯ ವಿಭಾಗದ ಡಿಸಿಪಿ ಆಯುಕ್ತ ಸಜೀತ್ ವಿ.ಜೆ, ಯಲಹಂಕ ವಲಯದ ಬಿಬಿಎಂಪಿ ವಲಯ ಆಯುಕ್ತ ಕರೀಗೌಡ ಮತ್ತು ಲೋಕಯುಕ್ತದ ಕಾನೂನು ಅಭಿಪ್ರಾಯ ವಿಭಾಗದ ಸಹಾಯಕ ನಿಬಂಧಕರಾದ ಬಿ.ಶುಭವೀರ ಸೇರಿ ಮತ್ತಿತರರು ಉಪಸ್ಥಿತರಿದ್ದರು.