ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಗಂಭೀರ ವಿಷಯ

Untitled design (2)
Published on

ನವದೆಹಲಿ: ಅಲಹಾಬಾದ್ ಹೈಕೋರ್ಟ್ ನ್ಯಾ.ಯಶವಂತ್ ವರ್ವ ಅವರನ್ನು ಪದಚ್ಯುತಿಗೊಳಿಸುವ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ತಮ್ಮಅಭಿಪ್ರಾಯ ವ್ಯಕ್ತಪಡಿಸಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಕಂಡುಬಂದಿರುವುದು ಗಂಭೀರ ವಿಚಾರ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

ನ್ಯಾಯಾಂಗದಲ್ಲಿ ಭ್ರಷ್ಟಾಚಾರವು ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಷಯವಾಗಿದೆ ಎಂದಿರುವ ಅವರು, ನ್ಯಾಯಾಂಗವು ಜನರಿಗೆ ನ್ಯಾಯ ಸಿಗುವ ಸ್ಥಳವಾಗಿದೆ. ಅಲ್ಲಿಯೇ ಭ್ರಷ್ಟಾಚಾರವಿದ್ದರೆ, ಅದು ಎಲ್ಲರಿಗೂ ಕಳವಳ ತರುವಂಥದ್ದಾಗಿರುತ್ತದೆ. ಅದಕ್ಕಾಗಿಯೇ ನ್ಯಾ.ಯಶವಂತ ವರ್ವ ಅವರನ್ನು ಪದಚ್ಯುತಗೊಳಿಸುವ ನಿರ್ಣಯಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸಹಿ ಹಾಕಬೇಕಿದೆ. ಪ್ರಮುಖ ವಿಪಕ್ಷವಾದ ಕಾಂಗ್ರೆಸ್, ಈ ವಿಷಯದ ಗಂಭೀರತೆ ಅರ್ಥಮಾಡಿಕೊಂಡಿದೆ ಮತ್ತು ಈ ವಿಷಯದ ಬಗ್ಗೆ ಮಾತನಾಡಲು ಒಪ್ಪಿದೆ ಎಂಬುದು ಸಂತೋಷಕರ ವಿಚಾರ. ಯಾವುದೇ ಪಕ್ಷವು ಭ್ರಷ್ಟ ನ್ಯಾಯಮೂರ್ತಿಗಳ ಪರವಾಗಿ ನಿಲ್ಲುವುದಿಲ್ಲ. ನ್ಯಾಯಾಂಗದಲ್ಲಿನ ಭ್ರಷ್ಟಾಚಾರದವಿಷಯಕ್ಕೆ ಬಂದಾಗ, ನಾವು ಒಟ್ಟಾಗಿ ನಿಲ್ಲಬೇಕು. ಯಾವುದೇ ಪಕ್ಷಪಾತದ ಮನೋಭಾವ ಇರಬಾರದು ಮತ್ತು ಅದನ್ನು ರಾಜಕೀಯ ವಿಷಯ ಆಗಿಸಬಾರದು ಎಂದಿದ್ದಾರೆ.

ಸಂಸದರಿಗೆ ಬಿಟ್ಟಿದ್ದು: ನ್ಯಾ.ಯಶವಂತ್ ವರ್ವ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ ನಿರ್ಣಯ ಮಂಡಿಸುವುದು ಸಂಪೂರ್ಣವಾಗಿ ಸಂಸದರ ವಿಷಯವಾಗಿದೆ. ಸಂಸದರು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಯನ್ನು ಪದಚ್ಯುತಗೊಳಿಸುವ ಹಕ್ಕು ಹೊಂದಿದ್ದಾರೆ. ನ್ಯಾಯಮೂರ್ತಿಯೊಬ್ಬರ ಮಹಾಭಿಯೋಗ ನಿರ್ಣಯ ಮಂಡಿಸಲು ಲೋಕಸಭೆಯಲ್ಲಿ ಕನಿಷ್ಠ 100 ಮತ್ತು ರಾಜ್ಯಸಭೆಯಲ್ಲಿ 50 ಸದಸ್ಯರ ಬೆಂಬಲ ಅಗತ್ಯ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್​ವಾಲ್ ಹೇಳಿದ್ದಾರೆ.

ವಿಶೇಷ ನ್ಯಾಯಾಲಯಗಳ ಸ್ಥಾಪನೆ ಅಗತ್ಯ

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ ಮತ್ತು ಇತರ ವಿಶೇಷ ಕಾನೂನುಗಳಡಿ ತ್ವರಿತ ವಿಚಾರಣೆ ನಡೆಸಲು ಅಗತ್ಯ ಮೂಲಸೌಕರ್ಯ ಹೊಂದಿರುವ ನ್ಯಾಯಾಲಯಗಳನ್ನು ಸ್ಥಾಪಿಸಲು ಸರ್ಕಾರ ವಿಫಲವಾದರೆ ಕಾಲಮಿತಿಯೊಳಗೆ ವಿಚಾರಣೆ ಮುಗಿಸಲು ಯಾವುದೇ ಪರಿಣಾಮಕಾರಿ ಕಾರ್ಯ ವಿಧಾನವಿಲ್ಲ. ಹೀಗಾಗಿ ನ್ಯಾಯಾಲಯವು ಆರೋಪಿಗಳನ್ನು ಜಾಮಿನಿನ ಮೇಲೆ ಬಿಡುಗಡೆ ಮಾಡುವ ಅನಿವಾರ್ಯತೆ ಉಂಟಾಗುತ್ತದೆ ಎಂದು ಕೇಂದ್ರಕ್ಕೆ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ

ಸುಪ್ರೀಂಕೋರ್ಟ್​ಗೆ ಮೊರೆ

ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ಅಪಾರ ಪ್ರಮಾಣದ ಸುಟ್ಟ ನೋಟುಗಳ ಕಂತೆಗಳು ಪತ್ತೆಯಾದ್ದರಿಂದ ತಮ್ಮ ವಿರುದ್ಧ ಆರೋಪ ಹೊರಿಸಿರುವ ಆಂತರಿಕ ಸಮಿತಿ ವರದಿಯನ್ನು ಪ್ರಶ್ನಿಸಿ ನ್ಯಾ.ಯಶವಂತ್ ವರ್ವ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಆಂತರಿಕ ಸಮಿತಿಯು ಪೂರ್ವ ನಿರ್ಧರಿತ ರೀತಿಯಲ್ಲಿ ವರ್ತಿಸಿದೆ. ತಮ್ಮನ್ನು ಸಮರ್ಥಿಸಿಕೊಳ್ಳಲು ನ್ಯಾಯಯುತ ಅವಕಾಶವನ್ನು ನಿರಾಕರಿಸಿದೆ ಎಂದು ನ್ಯಾ. ವರ್ವ ಅರ್ಜಿಯಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net