ಜಾತಿಗಣತಿಯಲ್ಲಾದ ಅನ್ಯಾಯ ಸರಿಪಡಿಸಿ

cast census
Published on

ಶಿವಮೊಗ್ಗ: ಜಾತಿಗಣತಿ ಸಂದರ್ಭ ವನ್ನಿಯಕುಲ ಕ್ಷತ್ರಿಯ ಸಮಾಜವನ್ನು ತಪ್ಪಾಗಿ ತಿಗಳರ ಜಾತಿಗೆ ಸೇರಿಸಲಾಗಿದೆ. ನಮ್ಮ ಜಾತಿ ಮತ್ತು ತಿಗಳ ಜಾತಿಗೂ ಸಂಬಂಧವೇ ಇಲ್ಲ. ಗಣತಿಯಲ್ಲಿ ನಮ್ಮ ಜಾತಿಗೆ ಅನ್ಯಾಯವಾಗಿದೆ. ಲೋಪ ಸರಿಪಡಿಸದಿದ್ದರೆ ಹೋರಾಟ ರೂಪಿಸಲಾಗುವುದು ಎಂದು ವನ್ನಿಯಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ಆರ್.ಶ್ರೀನಿವಾಸ್ ಹೇಳಿದರು.

ತಿಗಳರು ಮತ್ತು ನಮ್ಮ ಆಚಾರ-ವಿಚಾರಗಳು ಬೇರೆ. ಆದರೆ ಹಿಂದುಳಿದ ವರ್ಗಗಳ ಜಾತಿ ಪಟ್ಟಿ ಕ್ರಮ ಸಂಖ್ಯೆ 10ರಲ್ಲಿ ತಿಗಳರನ್ನು ಪ್ರಮುಖ ಜಾತಿಯನ್ನಾಗಿ ಮಾಡಿ ವನ್ನಿಯಕುಲ ಕ್ಷತ್ರಿಯ ಮತ್ತು ಉಪಜಾತಿಗಳನ್ನು ಅದರಲ್ಲಿ ಸೇರಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ತಿಗಳರು ತಮಗೆ ಸಲ್ಲಬೇಕಾದ ಎಲ್ಲ ಸವಲತ್ತು ಪಡೆದಿದ್ದಾರೆ. ಸಂಶೋಧನೆ ಮಾಡಿ ಅನೇಕ ದಾಖಲೆಗಳೊಂದಿಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರಿಗೆ ಸಲ್ಲಿಸಲಾಗಿತ್ತು. ಆದರೂ ಹೊಸ ಗೊಂದಲ ಸೃಷ್ಟಿಯಾಗಿದೆ. ಜಾತಿಗಣತಿ ಪಟ್ಟಿಯಲ್ಲಿ ತಿಗಳರನ್ನು ಈಗ ವನ್ನಿಯಕುಲ ಕ್ಷತ್ರಿಯ ಅಂತ ಹೊಸದಾಗಿ ಬಿಂಬಿಸಿರುವುದು ಸರಿಯಲ್ಲ ಎಂದರು.

ನಮ್ಮ ಸಮಾಜದವರು ಜಿಲ್ಲೆಯಲ್ಲಿ 1.5 ಲಕ್ಷ, ರಾಜ್ಯದಲ್ಲಿ 25 ಲಕ್ಷ ಜನರಿದ್ದಾರೆ. ಚಿನ್ನಪ್ಪ ರೆಡ್ಡಿ ಆಯೋಗ ಮತ್ತು ಕಾಂತರಾಜ ಆಯೋಗದಲ್ಲಿ ನಮ್ಮ ಜನಸಂಖ್ಯೆಯನ್ನು ಕಡಿಮೆ ತೋರಿಸಿ ನಮ್ಮದಲ್ಲದ ತಿಗಳರ ಜಾತಿಯನ್ನು ಸೇರಿಸಿ ಅನ್ಯಾಯ ಮಾಡಲಾಗಿದೆ. ಈಗಲಾದರೂ ಸಿಎಂ ಸಿದ್ದರಾಮಯ್ಯ ನಮ್ಮ ಸಮುದಾಯದ ಮನವಿ ಪರಿಗಣಿಸಿ ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ, ಪ್ರಮುಖರಾದ ಕೃಷ್ಣರಾಜ, ಹರಿನಾಥ್, ರೇವಣಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net