

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ನಿಗಮದ ಹಣಕಾಸು ಅವ್ಯವಹಾರ ಹಗರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕರ್ತವ್ಯ ಲೋಪ, ಆರ್ಥಿಕ ನಿಯಮ ಪಾಲಿಸದೇ ಇರುವ ಆರೋಪದ ಮೇಲೆ ನಿಗಮದ ಇಬ್ಬರು ಅಧಿಕಾರಿಗಳನ್ನು ಅಮಾನತು ಗೊಳಿಸಿ ಸರ್ಕಾರ ತಲೆದಂಡ ಪಡೆದಿದೆ. ಈ ಬೆಳವಣಿಗೆ ಬೆನ್ನಲ್ಲೇ ಯೂನಿಯನ್ ಬ್ಯಾಂಕ್ನ
6 ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮತ್ತೊಂದೆಡೆ ನಿಗಮದ ಹಣ ಅನ್ಯಖಾತೆಗೆ ವರ್ಗಾವಣೆಯಾಗಿದ್ದಕ್ಕೆ ಇಲಾಖಾ ಸಚಿವರ ಮೌಖಿಕ ಸೂಚನೆ ಇತ್ತೆಂಬ ಮಾತು ಕೇಳಿಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ನಿಗಮದ ಹಣ 14 ವರ್ಚುವಲ್ ಖಾತೆ ಮೂಲಕ ಐಟಿ ಕಂಪನಿಗಳಿಗೆ ಹಾಗೂಹೈದರಾಬಾದ್ನ ಸಹಕಾರ ಸಂಘದ ಖಾತೆಗೆ ವರ್ಗಾವಣೆ ಆಗಿರುವ ಸುಳಿವು ಸಿಕ್ಕಿದ್ದು ತೆಲಂಗಾಣ ಚುನಾವಣೆಗೆ ಫಂಡಿಂಗ್ ಆಗಿರುವ ಅನುಮಾನ ವ್ಯಕ್ತವಾಗಿದೆ.
ಚುನಾವಣೆ ಸಲುವಾಗಿ ಹಣ ಅನ್ಯಖಾತೆಗೆ ವರ್ಗಾವಣೆ ಆಗಿತ್ತೆಂಬ ವಿಚಾರ ಮುನ್ನೆಲೆಗೆ ಬರುತ್ತಲೇ ಗೃಹ ಸಚಿವ ಜಿ.ಪರಮೇಶ್ವರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸಚಿವ ನಾಗೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ. ತನಿಖೆ ನಂತರ ಎಲ್ಲ ಬಹಿರಂಗವಾಗುತ್ತದೆ ಎಂದಿದ್ದಾರೆ. ಇದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಮಾದರಿ ಪ್ರಕರಣವಲ್ಲ, ಹಾಗಾಗಿ ಸಚಿವರ ರಾಜೀನಾಮೆ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.
ಇಬ್ಬರು ಅಮಾನತು: ಕರ್ತವ್ಯ ಲೋಪ, ನಿರ್ಲಕ್ಷ್ಯ, ಆರ್ಥಿಕ ನಿಯಮ ಉಲ್ಲಂಘನೆ ಆರೋಪದ ಮೇಲೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ನಿಗಮದ ಬ್ಯಾಂಕ್ ಖಾತೆಯಿಂದ 2024ರ ಮಾರ್ಚ್ 5ರಿಂದ ಮೇ 23ರವರೆಗೂ ಸರ್ಕಾರದ ಅನುದಾನವನ್ನು ಅನಾಮಧೇಯ ವ್ಯಕ್ತಿಗಳು ಡ್ರಾ ಮಾಡಿಕೊಂಡಿದ್ದರೂ ಗಮನಿಸದೇ ಇರುವುದು ನಿಗಮದ ಜವಾಬ್ದಾರಿಯುತ ವ್ಯವಸ್ಥಾಪಕ ನಿರ್ದೇಶಕರಿಂದಾದ ಕರ್ತವ್ಯ ಲೋಪ, ನಿರ್ಲಕ್ಷ ಹಾಗೂ ಆರ್ಥಿಕ ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಕರ್ತವ್ಯ ಲೋಪ, ನಿರ್ಲಕ್ಷ್ಯದ ಕಾರಣಕ್ಕೆ ಅಕೌಂಟ್ ಆಫೀಸರ್ ಪರಶುರಾಮ್ ಜಿ.ದುರ್ಗಣ್ಣನವರ್ ಅವರನ್ನೂ ಸಹ ಅಮಾನತುಗೊಳಿಸಲಾಗಿದೆ.
ಆರು ಜನರ ವಿರುದ್ಧ ಎಫ್ಐಆರ್: ಅಕ್ರಮ ಹಣ ವರ್ಗಾವಣೆ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಿಗಮದ ಖಾತೆಯಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ 94.73 ಕೋಟಿ ರೂ. ವರ್ಗಾವಣೆ ಮಾಡಿದ ಆರೋಪದಡಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಿಇಓ ಸೇರಿ ಆರು ಮಂದಿ ವಿರುದ್ಧ ನಿಗಮದ ಪ್ರಧಾನ ವ್ಯವಸ್ಥಾಪಕ ಎ. ರಾಜಶೇಖರ್ ದೂರು ನೀಡಿದ್ದಾರೆ. ಬ್ಯಾಂಕ್ನ ಪ್ರಧಾನ ವ್ಯವಸ್ಥಾಪಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಣಿ ಮೇಖಲೈ, ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ನಿತೇಶ್ ರಂಜನ್, ರಾಮಸುಬ್ರಮಣ್ಯಂ, ಸಂಜಯ್ ರುದ್ರ, ಪಂಕಜ್ ದ್ವಿವೇದಿ ಹಾಗೂ ಬ್ಯಾಂಕಿನ ಮುಖ್ಯ ವ್ಯವಸ್ಥಾಪಕಿ ಸುಚಿಶಿತ ರೌಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
1. 88.62 ಕೋಟಿ ಹಣ ವಗಾವಣೆಗೆ ನನ್ನ ಸಹಿ ಫೋರ್ಜರಿ
2. ಲೆಕ್ಕಾಧಿಕಾರಿಯ ಸಹಿಯನ್ನೂ ನಕಲು ಮಾಡಲಾಗಿದೆ
3. ಸಹಿ ನಕಲಿ ಮಾಡಿಯೇ 14 ಬ್ಯಾಂಕ್ ಖಾತೆಗೆ ಹಣ ವರ್ಗ
4. ಮೇ 22ಕ್ಕೆ ಗಮನಕ್ಕೆ ಬಂದ ತಕ್ಷಣವೇ ಪರಿಶೀಲನೆ ನಡೆಸಿದ್ದೆ
5. ಅನಾಮಧೇಯ ಮೊಬೈಲ್ ಬಳಸಿ ಹಣ ವರ್ಗಾವಣೆ ದೃಢ
6. ದುರುಪಯೋಗದ ಹಣ ಖಾತೆಗೆ ಹಿಂದಿರಗಿಸಲು ಪತ್ರ ನೀಡಿದ್ದೆ
7. ಹಣ 14 ವರ್ಚುವಲ್ ಖಾತೆ ಮೂಲಕ ಐಟಿ ಕಂಪನಿಗಳಿಗೆ ವರ್ಗ
8. ಹೈದರಾಬಾದ್ನ ಸಹಕಾರ ಸಂಘದ ಖಾತೆಗೆ ಹಣ ವರ್ಗಾವಣೆ
9. ಪ್ರಸ್ತುತ ಈ ಎಲ್ಲ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ
10. ಖಾತೆಯಲ್ಲಿದ್ದ 5 ಕೋಟಿ ರೂ. ನಿಗಮದ ಖಾತೆಗೆ ಹಿಂತಿರುಗಿಸಲಾಗಿದೆ
11. ಉಳಿದ ಮೊತ್ತ ವಾಪಸ್ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ
ಚುನಾವಣೆ ಅನುಮಾನ: ಲೋಕಸಭೆ ಚುನಾವಣೆ ಆರಂಭವಾದ ಸಂದರ್ಭದಲ್ಲಿಯೇ ಈ ಹಣ ನೆರೆ ರಾಜ್ಯದ ಬೇನಾಮಿ ಖಾತೆಗೆ ವರ್ಗಾವಣೆಯಾಗಿರುವುದು ಸಾಕಷ್ಟು ಸಂಶಯ ಹುಟ್ಟುಹಾಕಿದೆ. ಈ ಹಣ ತಾತ್ಕಾಲಿಕ ವ್ಯವಸ್ಥೆ ರೂಪದಲ್ಲಿ ಚುನಾವಣೆ ಉದ್ದೇಶಕ್ಕಾಗಿ ಬಳಕೆಯಾಯಿತೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಹಣ ವರ್ಗಾವಣೆ ಮಾಡಿದ್ದಕ್ಕಾಗಿ ಬ್ಯಾಂಕ್ ಇಟ್ಟುಕೊಂಡಿರುವ ದಾಖಲೆಗಳು, ನಿಗಮದ ಬೋರ್ಡ್ ಮೀಟಿಂಗ್ ನಿರ್ಣಯವನ್ನು ಯಾರು ಕೈಗೊಂಡಿದ್ದರೆಂಬುದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.
2. ದಾಖಲಾತಿ, ಆರ್ಟಿಜಿಎಸ್, ಬೋರ್ಡ್ ನಿರ್ಣಯ ಜತೆಗೆ ಸಹಿಯನ್ನು ನಕಲು ಮಾಡಿ ಕಾನೂನು ಬಾಹಿರವಾಗಿ ಹಣ ವರ್ಗಾವಣೆ ಮಾಡಲಾಗಿದೆ 3. ಓವರ್ ಡ್ರಾಫ್ಟ್ ಸೌಲಭ್ಯ ಮತ್ತು ನಕಲಿ ದಾಖಲಾತಿ ಸೃಷ್ಟಿಸಿ ಅನಧಿಕೃತವಾಗಿ ಹೈದರಾಬಾದ್ನ ಐಟಿ ಕಂಪನಿ ಹೆಸರಿನ ಬೇರೆ ಬೇರೆ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು: ಹಣ ವರ್ಗಾವಣೆಯಲ್ಲಿ ಬ್ಯಾಂಕಿನ ಪಾತ್ರವೇ ದೊಡ್ಡದೆಂದು ಸರ್ಕಾರ ಬಿಂಬಿಸಲು ಹೊರಟಿದೆ ಮತ್ತು ಆ ನಿಟ್ಟಿನಲ್ಲಿ ಪೊಲೀಸರಿಗೆ ದೂರು ನೀಡಿದೆ. ಆದರೆ, ಹಣ ವರ್ಗಾವಣೆಗೆ ಮುನ್ನ ನಿಗಮದಲ್ಲಿ ನಡೆದಿರುವ ಚಟುವಟಿಕೆ ಸರ್ಕಾರದ ಹಂತದಲ್ಲಿಯೇ ಏನೋ ನಡೆದಿದೆ ಎಂಬ ಸಂಶಯ ಸೃಷ್ಟಿಸಿದೆ.
2. ಬೆಂಗಳೂರಿನ ವಸಂತನಗರ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದರೂ ಸರ್ಕಾರದ ಅನುಮತಿಇಲ್ಲದೆ ಎಂ.ಜಿ.ರಸ್ತೆಯ ಬ್ಯಾಂಕ್ನ ಶಾಖೆಯಲ್ಲಿ ಖಾತೆ ತೆರೆದಿರುವುದು ನಿಯಮಾವಳಿ ಪ್ರಕಾರ ಅಕ್ರಮ.ಮತ್ತೊಂದು ಖಾತೆ ತೆರೆಯಲು ಸಕಾರಣ ಇರಲಿಲ್ಲ. ಹಣ ವರ್ಗಾವಣೆಗೆ ಪೂರ್ವ ಪೀಠಿಕೆಯಾಗಿ ಈ ಖಾತೆ ತೆರೆಯಲಾಗಿತ್ತೇ ಎಂಬ ಅನುಮಾನವಿದೆ.
3. ವಸಂತ ನಗರ ಶಾಖೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಉಳಿತಾಯ ಖಾತೆಯಲ್ಲಿರುವ ಹಣವನ್ನು ಏಕಾಏಕಿ ಸರ್ಕಾರದ ಅನುಮತಿ ಇಲ್ಲದೆ ಹೊಸ ಖಾತೆ ತೆರೆದು ಎಂ.ಜಿ.ರಸ್ತೆ ಬ್ರಾಂಚ್ಗೆ ವರ್ಗಾಯಿಸಿರುವುದು ನಿಯಮ ಬಾಹಿರ. ಈ ಖಾತೆಗಳಿಂದ ವಿವಿಧ ದಿನಾಂಕಗಳಂದು ಒಟ್ಟು 187.33 ಕೋಟಿ ರೂ.ಗಳನ್ನು ಎಂ.ಜಿ.ರಸ್ತೆ ಬ್ರಾಂಚ್ಗೆ ವರ್ಗಾಯಿಸಿರುವುದು ಕಂಡುಬಂದಿದೆ.
4. 2024ರ ಮಾರ್ಚ್ 5ರಿಂದ ವಿವಿಧ ದಿನಾಂಕಗಳಂದು ಅನಾಮಧೇಯ ಬ್ಯಾಂಕ್ ಖಾತೆಗಳಿಗೆ ಕೋಟಿಗಟ್ಟಲೆ ಹಣವನ್ನು ವರ್ಗಾಯಿಸಲಾಗಿದೆ. ವಾಸ್ತವವಾಗಿ ಆರ್ಥಿಕ ವರ್ಷದ ಕೊನೆಯಲ್ಲಿ ಅನುದಾನವು ಉಳಿಕೆಯಾಗದಂತೆ ಸರ್ಕಾರದ ಯೋಜನೆ, ಕಾರ್ಯಕ್ರಮಗಳಿಗೆ ವಿನಿಯೋಗಿಸುವುದು ನಿಗಮದ ಮುಖ್ಯಸ್ಥರ ಕರ್ತವ್ಯ. ಅಲ್ಲದೆ ಅನುದಾನದ ವಿವರಗಳನ್ನು ಆರ್ಥಿಕ ವರ್ಷದ ಕೊನೆಯಲ್ಲಿ ವ್ಯವಸ್ಥಿತವಾಗಿ ಲೆಕ್ಕಪತ್ರ ಇಡುವುದು, ಉಳಿದ ಅನುದಾನವನ್ನು ಆರ್ಥಿಕ ಇಲಾಖೆಗೆ ಹಿಂದಿರುಗಿಸುವುದು ವ್ಯವಸ್ಥಾಪಕ ನಿರ್ದೇಶಕ ಕರ್ತವ್ಯವಾಗಿರುತ್ತದೆ. ಅಂದರೆ ಅಧಿಕಾರಿ ಮೇಲೆ ಕಾಣದ ಕೈಗಳು ಒತ್ತಡ ತಂದಿರುವ ಸಾಧ್ಯತೆ ಹೆಚ್ಚಿದೆ.
5. ವ್ಯವಸ್ಥಾಪಕ ನಿರ್ದೇಶಕರು ನಿಗಮದ 88.62 ಕೋಟಿ ರೂ. ಹಣವನ್ನು ಫೋರ್ಜರಿ ಮಾಡಿ 14 ಅನಾಮಧೇಯ ಖಾತೆಗೆ ವರ್ಗಾಯಿಸಿರುವುದು ಮೇ 22ರಂದು ಗಮನಕ್ಕೆ ಬಂದಿದ್ದರೂ ಸಹ ಈ ವಿಷಯ ಮರೆಮಾಚಿದ್ದರು. ಮೇ. 27ರಂದು ಮಾಧ್ಯಮಗಳಲ್ಲಿ ವಿಷಯ ಹೊರ ಬಂದ ನಂತರವಷ್ಟೇ ಸರ್ಕಾರದ ಗಮನಕ್ಕೆ ತಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರದ ಗಮನಕ್ಕೆ ಬಾರದಂತೆ ಅವರನ್ನು ತಡೆದ ಶಕ್ತಿ ಯಾವುದೆಂಬುದೂ ಸಹ ಬಹಿರಂಗವಾಗಬೇಕಾಗಿದೆ.
6. ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಅಧೀನದಲ್ಲಿ ಒಳಪಡುವ ಎಲ್ಲಾ 19 ನಿಗಮ, ಮಂಡಳಿಗಳ ಹೆಸರಿನಲ್ಲಿ ಹೊಸದಾಗಿ ಪ್ರತ್ಯೇಕವಾಗಿ ಠೇವಣಿ ಖಾತೆ ತೆರೆಯಲು ಸರ್ಕಾರ ಮಂಜೂರಾತಿ ನೀಡಿತ್ತು. ನಿಗಮಗಳ ಈ ಠೇವಣಿ ಖಾತೆಗಳಲ್ಲಿ ಸರ್ಕಾರ ಯೋಜನೆ, ಕಾಮಗಾರಿಗಳಿಗೆ ಸಂಬಂಧಿಸಿದ ಮೊತ್ತವನ್ನು ಹೊರತುಪಡಿಸಿ ಇನ್ನಿತರ ಯಾವುದೇ ಮೊತ್ತ ಜಮೆ ಮಾಡುವಂತಿಲ್ಲ. ಖಜಾನೆಯಲ್ಲಿ ನಿಗಮಗಳ ಹೆಸರಿನಲ್ಲಿ ಹೊಸದಾಗಿ ಠೇವಣಿ ಖಾತೆ ತೆರೆದಿರುವ ಬಗ್ಗೆ ಕೂಡಲೇ ಆರ್ಥಿಕ ಇಲಾಖೆಗೆ ವರದಿ ಸಲ್ಲಿಸುವುದು ಎಂದು ನಿರ್ದೇಶನ ಇದೆ. ಈ ನಿಯಮವಲ್ಲೂ ಇಲ್ಲಿ ಉಲ್ಲಂಘಿಸಲಾಗಿದೆ.
ವಾಲ್ಮಿಕಿ ನಿಗಮದ ಹಗರಣ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಹಣ ಬೇರೆಬೇರೆ ಐಟಿ ಕಂಪನಿಗಳಿಗೆ ವರ್ಗಾವಣೆಯಾಗಿರುವ ಆರೋಪದ ಸತ್ಯಾಂಶ ತನಿಖೆಯಿಂದ ಹೊರಬರುತ್ತದೆ.
| ಡಾ. ಜಿ.ಪರಮೇಶ್ವರ್ ಗೃಹ ಸಚಿವ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರ ಆತ್ಮಹತ್ಯೆ ದುರದೃಷ್ಟಕರ. ಡೆತ್ನೋಟ್ನಲ್ಲಿ ಉಲ್ಲೇಖವಾಗಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಸಚಿವ ಬಿ.ನಾಗೇಂದ್ರ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳುವುದು ಒಳ್ಳೆಯದು.
| ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ