34 ಶಾಸಕರಿಗೆ ನಿಗಮಭಾಗ್ಯ; ಸಿಎಂ ಸಿದ್ದರಾಮಯ್ಯ ಮೇಲುಗೈ

Siddu Dk
Published on

ಬೆಂಗಳೂರು: ಗಣರಾಜ್ಯ ದಿನದ ಸಂದರ್ಭದಲ್ಲಿ ಆಡಳಿತ ಪಕ್ಷದ ಮೂವತ್ನಾಲ್ಕು ಶಾಸಕರಿಗೆ ನಿಗಮ, ಮಂಡಳಿಯ ಜವಾಬ್ದಾರಿ ದೊರೆತಿದೆ. ಅಳೆದು ತೂಗಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿರುವ ಸರ್ಕಾರ, ಇವರೆಲ್ಲರಿಗೂ ಸಂಪುಟ ದರ್ಜೆ ಸ್ಥಾನಮಾನದ ಜತೆಗೆ ಎರಡು ವರ್ಷದ ಕಾಲಾವಧಿಯ ಅವಕಾಶ ನೀಡಿದೆ. ನಾಲ್ಕಾರು ತಿಂಗಳಿನಿಂದಲೂ ನಿಗಮ, ಮಂಡಳಿ ನೇಮಕಕ್ಕೆ ಕಸರತ್ತು ನಡೆದೇ ಇತ್ತು. ಅನೇಕ ಬಾರಿ ಪಟ್ಟಿ ಪರಿಷ್ಕರಣೆ ಗೊಂಡಿತ್ತು. ಶುಕ್ರವಾರವೂ ಕೊನೆಯ ಹಂತದಲ್ಲಿ ಸಣ್ಣಪುಟ್ಟ ಬದಲಾವಣೆಗಳಾದವು.

ಕಾರ್ಯಕರ್ತರ ಪಟ್ಟಿ ಅಂತಿಮ: ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡುವ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಕೊನೆ ಹಂತದಲ್ಲಿ ಸೇರ್ಪಡೆಗೊಂಡ ಕಲಬುರಗಿ ಭಾಗದ ಮುಖಂಡರನ್ನು ಸೇರಿಸುವ ವಿಚಾರದಲ್ಲಿ ಸ್ಪಷ್ಟತೆ ತಂದುಕೊಂಡು ಆದೇಶ ಹೊರಡಿಸಲು ಸಿಎಂ ನಿರ್ಧರಿಸಿ ದ್ದಾರೆ. ಖರ್ಗೆಯವರ ಶಿಫಾರಸು ಮಾಡಿದ್ದಾರೆಂದು ಕೆಲವು ಹೆಸರುಗಳು ಸಾರ್ವಜನಿಕ ವಾಗಿತ್ತು, ಹೀಗಾಗಿ ಆ ಹೆಸರನ್ನು ಕೈಬಿಟ್ಟರೆ ಬೇರೆ ಸಂದೇಶ ಹೋಗಲಿದೆ ಎಂಬ ಅಳುಕಿದೆ. ಇದೇ ಕಾರಣಕ್ಕೆ ಇನ್ನು ಎರಡು ಮೂರು ದಿನಗಳಲ್ಲೇ ಅಂತಿಮಗೊಳಿಸಿ ಇನ್ನೊಂದು ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ನೇಮಕದ ಹಿಂದಿನ ಬೆಳವಣಿಗೆ: ಐದಾರು ತಿಂಗಳ ಸರ್ಕಸ್ ಬಳಿಕ ನಿಗಮ, ಮಂಡಳಿ ನೇಮಕ ಪಟ್ಟಿ ಪ್ರಕಟಗೊಂಡಿದೆ. ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಆದ್ಯತೆ ನೀಡಿದ್ದು, ಕಾರ್ಯಕರ್ತರಿಗೆ ಅವಕಾಶ ನೀಡುವ ಪಟ್ಟಿಯ ಗೊಂದಲ ಇನ್ನೂ ಪರಿಹಾರವಾದಂತಿಲ್ಲ. ಹಾಗೆಯೇ ಶಾಸಕರು ಹಾಗೂ ಕಾರ್ಯಕರ್ತರಿಗೆ ಏಕಕಾಲದಲ್ಲಿ ನಿಗಮ, ಮಂಡಳಿ ಘೋಷಿಸಬೇಕೆಂಬ ಪಕ್ಷದ ನಾಯಕ ರಾಹುಲ್ ಗಾಂಧಿ ಸೂಚನೆಯನ್ನು ಪಾಲಿಸಲಾಗಿಲ್ಲ. ಎಐಸಿಸಿ ಅಧ್ಯಕ್ಷರ ಮಧ್ಯಪ್ರವೇಶದ ಬಳಿಕ ಶಾಸಕರಿಗೆ ಅವಕಾಶ ಕೊಡುವ ಮೂಲಕ ಉಳಿದವರಲ್ಲಿ ಭರವಸೆ ಮೂಡಿಸುವ ಕೆಲಸ ನಡೆದಿದೆ. ಅಷ್ಟೇ ಅಲ್ಲದೇ, ಶಾಸಕರಿಗೆ ಮೊದಲ ಆದ್ಯತೆ ಕೊಡಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯತ್ನಕ್ಕೆ ಯಶ ಸಿಕ್ಕಿದೆ. ಕಾರ್ಯಕರ್ತರಿಗೆ ಅವಕಾಶ ಕೊಡಿಸುವ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಯತ್ನಕ್ಕೆ ಅಡೆತಡೆ ಹಾಗೇ ಬಾಕಿಯಾಗಿದೆ.

ವಲಸಿಗರಿಗೂ ಸ್ಥಾನ: ಪಟ್ಟಿ ಮೇಲು ನೋಟಕ್ಕೆ ಸಮತೋಲನ ಕಾಪಾಡುವಂತೆ ಕಂಡು ಬಂದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಮೇಲಾಗಿರುವುದು ಸ್ಪಷ್ಟವಾಗಿದೆ. ಪಕ್ಷದವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬೆಂಬಲಿಗರಿಗೆ ಅವಕಾಶ ನೀಡಲಾಗಿದೆ. ಅದರಲ್ಲಿ ಸಿದ್ದರಾಮಯ್ಯ ಬೆಂಬಲಿತ ಶಾಸಕರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ಚುನಾವಣೆಯ ಸಂದರ್ಭದಲ್ಲಿ ವಲಸೆ ಬಂದ ಶಿವಲಿಂಗೇಗೌಡ, ಎಸ್.ಆರ್. ಶ್ರೀನಿವಾಸ್ ಅವರಿಗೆ ಅವಕಾಶ ಸಿಕ್ಕಿದೆ.

ಸಚಿವಾಕಾಂಕ್ಷಿಗಳ ಅಸಮಾಧಾನ: ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಮೂರ್ನಾಲ್ಕು ಶಾಸಕರು ನಿಗಮ ಹುದ್ದೆ ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿತನ ಸಹಿತ ಬೇರೆಬೇರೆ ಕಾರಣಕ್ಕೆ ಸಚಿವ ಸ್ಥಾನವೇ ಬೇಕೆಂದು ಪಟ್ಟು ಹಿಡಿದಿದ್ದ ಕೆಲವು ಶಾಸಕರು ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಒಪ್ಪಿಕೊಂಡರೆ ಮುಂದೆ ಸಚಿವ ಸ್ಥಾನ ಸಿಗುವುದು ಅನುಮಾನ ಎಂಬ ಕಾರಣಕ್ಕೆ ಹುದ್ದೆ ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ. ಒಂದಿಬ್ಬರು ಶಾಸಕರು ಶುಕ್ರವಾರ ಸಂಜೆ ಬಳಿಕ ಫೋನ್  ಸ್ವಿಚ್ಡ್ ಆಫ್ ಮಾಡಿಕೊಂಡಿದ್ದು ಇದಕ್ಕೆ ಪುಷ್ಠಿ ನೀಡುವಂತಿದೆ.

ಸ್ಥಾನಮಾನ: ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಗಳಿಗೆ ನೇಮಕಗೊಂಡವರಿಗೆ ಸಂಪುಟ ದರ್ಜೆ ಸ್ಥಾನ ದೊರೆತಲ್ಲಿ ಮಾಸಿಕ 60 ಸಾವಿರ ವೇತನ, 1.50 ಲಕ್ಷ ರೂ. ಮನೆ ಬಾಡಿಗೆ ಹಾಗೂ ವಾರ್ಷಿಕ ಆತಿಥ್ಯ ಭತ್ಯೆ 4.50 ಲಕ್ಷ ರೂ. ದೊರೆಯಲಿದೆ. ಅಷ್ಟೇ ಅಲ್ಲದೆ ರಾಜ್ಯದೊಳಗೆ ಪ್ರವಾಸಕ್ಕೆ ಪ್ರತಿ ದಿನಕ್ಕೆ 2,500 ರೂ., ಇಂಧನ ಭತ್ಯೆ ಕಿಮೀಗೆ 40 ರೂ. ಲಭ್ಯವಾಗಲಿದೆ. ಇತರ ಸೌಲಭ್ಯಗಳೆಂದರೆ, 20 ಲಕ್ಷ ರೂ. ಒಳಗಿನ ವಾಹನ, ಆರು ಸಿಬ್ಬಂದಿ ಕೂಡ ಬಳಸಿಕೊಳ್ಳಬಹುದು.

ಜಾತಿ ಲೆಕ್ಕಾಚಾರ: ಲಿಂಗಾಯತ- 9, ಒಕ್ಕಲಿಗ- 7, ಎಸ್ಟಿ- 6, ಎಸ್ಸಿ- 4, ಒಬಿಸಿ 6

ವಿಶೇಷತೆಗಳು

  • 1 ಪಟ್ಟಿಯಲ್ಲಿ ನಾಲ್ವರು ಈ ಹಿಂದಿನ ಅವಧಿಗಳಲ್ಲಿ ಸಚಿವ ಸ್ಥಾನಮಾನ ಪಡೆದಿದ್ದವರಿದ್ದಾರೆ.
  • 2 ಒಟ್ಟಾರೆ ಎಂಟು ವಲಸಿಗರಿಗೂ ಅವಕಾಶ.
  • 3 ಐವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದರು.

ಪ್ರಮುಖರು

  • ಎನ್.ಎ. ಹ್ಯಾರಿಸ್ (ಶಾಂತಿನಗರ)- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
  • ಕೆ.ಎಂ.ಶಿವಲಿಂಗೇಗೌಡ (ಅರಸೀಕೆರೆ)- ಕರ್ನಾಟಕ ಗೃಹ ಮಂಡಳಿ
  • ವಿನಯ್ ಕುಲಕರ್ಣಿ (ಧಾರವಾಡ)- ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
  • ಶರತ್ ಕುಮಾರ್ ಬಚ್ಚೇಗೌಡ (ಹೊಸಕೋಟೆ)- ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ
  • ಜೆ.ಎನ್. ಗಣೇಶ್ (ಕಂಪ್ಲಿ)- ಕೈಮಗ್ಗ ಅಭಿವೃದ್ಧಿ ನಿಗಮ
  • ಸಿ. ಪುಟ್ಟರಂಗ ಶೆಟ್ಟಿ (ಚಾಮರಾಜನಗರ)- ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿ
  • ಹಂಪನಗೌಡ ಬಾರ್ದಲಿ (ಸಿಂಧನೂರು)- ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ
  • ಅಪ್ಪಾಜಿ ಸಿ.ಎಸ್.ನಾಡಗೌಡ (ಮುದ್ದೆಬಿಹಾಳ)- ಕರ್ನಾಟಕ ಸೋಪ್ಸ್, ಡಿಟರ್ಜೆಂಟ್ ನಿ.
  • ಭರಮಗೌಡ ಅಲಗೌಡ ಕಾಗೆ(ಕಾಗವಾಡ)- ವಾಯವ್ಯ ಸಾರಿಗೆ ನಿಗಮ
  • ಹುಲ್ಲಪ್ಪ ಯಮನಪ್ಪ (ಬಾಗಲಕೋಟೆ)- ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
  • ಎಸ್.ಆರ್. ಶ್ರೀನಿವಾಸ (ಗುಬ್ಬಿ)- ರಾಜ್ಯ ರಸ್ತೆ ಸಾರಿಗೆ ನಿಗಮ
  • ಬಸವರಾಜ ನೀಲಪ್ಪ ಶಿವಣ್ಣನವರ್ (ಬ್ಯಾಡಗಿ)- ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ
  • ಬಿ.ಜಿ .ಗೋವಿಂದಪ್ಪ (ಹೊಸದುರ್ಗ)- ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
  • ಎಚ್.ಸಿ. ಬಾಲಕೃಷ್ಣ (ಮಾಗಡಿ)- ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
  • ಜಿ.ಎಸ್. ಪಾಟೀಲ (ರೋಣ)- ಖನಿಜ ಅಭಿವೃದ್ಧಿ ನಿಗಮ
  • ಎನ್.ಎ ಹ್ಯಾರಿಸ್ (ಶಾಂತಿನಗರ)- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
  • ಕೌಜಲಗಿ ಮಹಂತೇಶ ಶಿವಾನಂದ (ಬೈಲಹೊಂಗಲ)- ರಾಜ್ಯ ಹಣಕಾಸು ಸಂಸ್ಥೆ
  • ಸಿ. ಪುಟ್ಟರಂಗ ಶೆಟ್ಟಿ (ಚಾಮರಾಜ ನಗರ)- ಮೈಸೂರು ಸೇಲ್ಸ್ ಇಂಟರ್​ನ್ಯಾಷನಲ್ ಲಿ.
  • ಜಿ.ಟಿ. ಪಾಟೀಲ್ (ಬೀಳಗಿ)- ಹಟ್ಟಿ ಚಿನ್ನದ ಗಣಿ ನಿಯಮಿತ
  • ರಾಜಾ ವೆಂಕಟಪ್ಪ ನಾಯಕ್ (ಶೋರಾಪುರ)- ರಾಜ್ಯ ಉಗ್ರಾಣ ನಿಗಮ
  • ಬಿ.ಕೆ. ಸಂಗಮೇಶ್ವರ (ಭದ್ರಾವತಿ)- ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮ/ಲ್ಯಾಂಡ್ ಆರ್ವಿು
  • ಕೆ.ಎಂ. ಶಿವಲಿಂಗೇಗೌಡ (ಅರಸೀಕೆರೆ)- ಕರ್ನಾಟಕ ಗೃಹ ಮಂಡಳಿ
  • ಅಬ್ಬಯ್ಯ ಪ್ರಸಾದ್ (ಹುಬ್ಬಳ್ಳಿ- ಧಾರವಾಡ ಪೂರ್ವ)- ಕೊಳಚೆ ಅಭಿವೃದ್ಧಿ ಮಂಡಳಿ
  • ಬಿ.ಕೆ. ಗೋಪಾಲಕೃಷ್ಣ (ಸಾಗರ)- ರಾಜ್ಯ ಅರಣ್ಯ ಕೈಗಾರಿಕೆ ನಿಗಮ
  • ಎಸ್.ಎನ್. ನಾರಾಯಣಸ್ವಾಮಿ (ಬಂಗಾರಪೇಟೆ)- ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಯಮಿತ
  • ಟಿ. ರಘುಮೂರ್ತಿ (ಚಳ್ಳಕೆರೆ)- ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
  • ಎ.ಬಿ. ರಮೇಶ್ ಬಂಡಿ ಸಿದ್ದೇಗೌಡ (ಶ್ರೀರಂಗಪಟ್ಟಣ) ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ
  • ಬಿ. ಶಿವಣ್ಣ (ಆನೇಕಲ್) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
  • ಎಸ್.ಎನ್.ಸುಬ್ಬಾರೆಡ್ಡಿ (ಬಾಗೇಪಲ್ಲಿ)- ರಾಜ್ಯ ಬೀಜ ನಿಗಮ ನಿಯಮಿತ
  • ವಿನಯ್ ಕುಲಕರ್ಣಿ (ಧಾರವಾಡ)-ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
  • ಅನಿಲ್ ಚಿಕ್ಕಮಾದು (ಹೆಗ್ಗಡ ದೇವನಕೋಟೆ)- ಜಂಗಲ್ ಲಾಡ್ಜಸ್
  • ಬಸವನಗೌಡ ದದ್ದಲ್ (ರಾಯಚೂರು ಗ್ರಾಮೀಣ)- ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ
  • ಕನೀಜ್ ಫಾತಿಮಾ (ಕಲಬುರಗಿ ಉತ್ತರ)- ರೇಷ್ಮೆ ಉದ್ದಿಮೆಗಳ ನಿಗಮ
  • ವಿಜಯಾನಂದ ಕಾಶಪ್ಪನವರ್ (ಹುನಗುಂದ)- ಕ್ರೀಡಾ ಪ್ರಾಧಿಕಾರ
  • ಟಿ.ಡಿ. ರಾಜೇಗೌಡ (ಶೃಂಗೇರಿ)- ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
  • ಎಂ. ರೂಪಕಲಾ (ಕೆಜಿಎಫ್), ಕರಕುಶಲ ಕೈಗಾರಿಕೆ ಅಭಿವೃದ್ಧಿ ನಿಗಮ
  • ಸತೀಶ್ ಕೃಷ್ಣ ಸೈಲ್ (ಕಾರವಾರ)- ಮಾರ್ಕೆಟಿಂಗ್ ಕನ್ಸಲ್ಟೆಂಟ್ ಆಂಡ್ ಏಜೆನ್ಸಿಸ್
  • ಶರತ್ ಕುಮಾರ್ ಬಚ್ಚೇಗೌಡ (ಹೊಸಕೋಟೆ)- ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ
  • ಜೆ.ಎಂ. ಗಣೇಶ್ (ಕಂಪ್ಲಿ)- ಕೈಮಗ್ಗ ಅಭಿವೃದ್ಧಿ ನಿಗಮ
  • ಬಸವನಗೌಡ ತುರುವಿಹಾಳ (ಮಸ್ಕಿ)- ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net