

ವಾಷಿಂಗ್ಟನ್: ಅಮೆರಿಕದಲ್ಲಿ ಕರೊನಾ ಭೀಕರತೆ ವಿಕೋಪಕ್ಕೆ ತಿರುಗುತ್ತಿದೆ. ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ವಿಶ್ವದಾದ್ಯಂತ ಸುಮಾರು 6 ಲಕ್ಷ ಜನರು ಕರೊನಾ ಸೋಂಕಿಗೆ ಒಳಗಾಗಿದ್ದು, ಅದರಲ್ಲಿ 1,04,256 ಜನರು ಅಮೆರಿಕವೊಂದರಲ್ಲೇ ಇದ್ದಾರೆ. ಇದರ ಜತೆಗೆ ಅಮೆರಿಕದಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ ಕೂಡ 1,700ರ ಗಡಿ ದಾಟಿದೆ. ನ್ಯೂಯಾರ್ಕ್ನಲ್ಲೇ ಸುಮಾರು 45 ಸಾವಿರ ಸೋಂಕಿತ ಪ್ರಕರಣಗಳು ವರದಿಯಾಗದ್ದು, 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕದ ನಂತರದ ಸ್ಥಾನಗಳಲ್ಲಿ ಇಟಲಿ-86,498, ಚೀನಾ-81,394, ಸ್ಪೇನ್ 65,719 ಹಾಗೂ ಜರ್ಮನಿ-53,340 ಇವೆ.
ಅಮೆರಿಕಕ್ಕೆ ಸದ್ಯ ಸಮಾಧಾನದ ಸಂಗತಿಯೆಂದರೆ ಇಟಲಿ ಮತ್ತು ಸ್ಪೇನ್ಗೆ ಹೋಲಿಸಿದರೆ ಅಲ್ಲಿ ಸಾವಿನ ಶೇಕಡಾವಾರು ಪ್ರಮಾಣ ಕಡಿಮೆ ಇದೆ. ಅಮೆರಿಕದಲ್ಲಿ ಸೋಂಕಿತರ ಮರಣ ಪ್ರಮಾಣ ಶೇಕಡಾ 1.5 ಇದ್ದರೆ, ಇಟಲಿಯಲ್ಲಿ ಶೇ.10 ಹಾಗೂ ಸ್ಪೇನ್ನಲ್ಲಿ ಶೇ.7.7 ಇದೆ. ಆದರೆ ಇದೇ ಅಂತಿಮವಲ್ಲ. ಅಮೆರಿಕದಲ್ಲಿ ಸಾವಿನ ಸಂಖ್ಯೆ ನಿಧಾನವಾಗಿ ಏರಿಕೆಯಾಗಬಹುದು ಎಂದು ಟೊರೊಂಟೊ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡೇವಿಡ್ ಫಿಸ್ಮನ್ ತಿಳಿಸಿದ್ದಾರೆ. ಬೇಸಿಗೆಯ ಉಷ್ಣತೆ ಪ್ರಮಾಣದಿಂದ ಕರೊನಾ ಸೋಂಕು ಸಮಯ ಕಳೆದಂತೆ ಕಡಿಮೆಯಾಗಬಹುದು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ತೀವ್ರತೆ ಹೆಚ್ಚಾಗಲೇನು ಕಾರಣ?
ಹುಬೇ ಪ್ರಾಂತ್ಯ ತೊರೆಯುತ್ತಿರುವ ಜನರು
ಕರೊನಾದಿಂದಾಗಿ ಕಳೆದ ಎರಡು ತಿಂಗಳಿನಿಂದ ಸಂಪೂರ್ಣ ಸ್ತಬ್ಧವಾಗಿದ್ದ ಹುಬೇ ಪ್ರಾಂತ್ಯದಲ್ಲಿನ ನಿರ್ಬಂಧವನ್ನು ಚೀನಾ ಸರ್ಕಾರ ಗುರುವಾರದಿಂದ ಹಿಂಪಡೆದಿದೆ. ಈ ಹಿನ್ನೆಲೆ ಹುಬೇಯಲ್ಲಿ ಗೃಹ ಬಂಧಿಯಾಗಿದ್ದ ಸಾವಿರಾರು ಜನರು ಒಮ್ಮೆಲೆ ರೈಲು, ಬಸ್ಸುಗಳ ಮೂಲಕ ಹುಬೇ ಪ್ರಾಂತ್ಯದಿಂದ ಬೇರೆಡೆ ತೆರಳಲು ಪ್ರಯತ್ನಿಸುತ್ತಿದ್ದು, ಈ ವೇಳೆ ಅನೇಕ ಘರ್ಷಣೆ, ಗಲಭೆಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಹುಬೇ ಪಕ್ಕದ ಪ್ರಾಂತ್ಯವಾದ ಜಿಯಾಂಕ್ಸಿಗೆ ಅತೀ ಹೆಚ್ಚು ಜನರು ತೆರಳುತ್ತಿದ್ದು, ಈ ವೇಳೆ ಅಲ್ಲಿನ ಪೊಲೀಸರು ನಿರ್ಬಂಧ ವಿಧಿಸಿದ್ದರಿಂದ ಘರ್ಷಣೆಗಳು ನಡೆಯುತ್ತಿವೆ. ಜಿಯಾಂಕ್ಸಿ ಸಂರ್ಪಸುವ ಸೇತುವೆ ಬಳಿ ಪೊಲೀಸರು ಸಾಲು ಗಟ್ಟಿ ನಿಂತು ಜನರನ್ನು ತಡೆಯುತ್ತಿರುವ ದೃಶ್ಯಗಳು ಅಲ್ಲಿನ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹುಬೇ ಪ್ರಾತ್ಯದಲ್ಲಿ ಕಳೆದೊಂದು ವಾರದಿಂದ ಹೊಸ ಸಾವು ಪ್ರಕರಣಗಳ ಸಂಖ್ಯೆ ಎರಡಂಕಿಗಿಂತ ಕಡಿಮೆ ಇದೆ. ಈ ಹಿನ್ನೆಲೆ ಚೀನಾ ನಿರ್ಬಂಧ ತೆರವುಗೊಳಿಸಿ ಪರಿಸ್ಥಿತಿಯನ್ನು ಸಾಮಾನ್ಯ ಸ್ಥಿತಿಗೆ ಮರಳಿಸಿದೆ.
ಇತರ ದೇಶಗಳಿಗೆ ಅಮೆರಿಕ ನೆರವು
ಕರೊನಾವೈರಸ್ ವಿರುದ್ಧ ಹೋರಾಡುವ ಸಲುವಾಗಿ ಭಾರತ ಸೇರಿದಂತೆ 64 ದೇಶಗಳಿಗೆ ಅಮೆರಿಕ 174 ಮಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ಫೆಬ್ರವರಿಯಲ್ಲಿ ಘೋಷಿಸಿದ 100 ಮಿಲಿಯನ್ ನೆರವಿನ ಹೊರತಾಗಿ ಇದು ಹೆಚ್ಚುವರಿ ಸಹಾಯಧನವಾಗಿದೆ. ನೆರವಿನಲ್ಲಿ ಭಾರತಕ್ಕೆ 2.9 ಮಿಲಿಯನ್ ದೊರೆಯಲಿದ್ದು, ಶ್ರೀಲಂಕಾಗೆ 1.3 ಮಿಲಿಯನ್, ನೇಪಾಳಕ್ಕೆ 1.8, ಬಾಂಗ್ಲಾದೇಶಕ್ಕೆ 3.4, ಅಫ್ಘಾನಿಸ್ತಾನಕ್ಕೆ 5 ಮಿಲಿಯನ್ ಡಾಲರ್ ದೊರೆಯಲಿದೆ. ಕಳೆದ 20 ವರ್ಷಗಳಲ್ಲಿ ಆರೋಗ್ಯ ಸೇವೆಗಳಿಗಾಗಿ 1.4 ಬಿಲಿಯನ್ ಸೇರಿದಂತೆ ಭಾರತಕ್ಕೆ ಅಮೆರಿಕ ಈವರೆಗೆ 2.8 ಬಿಲಿಯನ್ನಷ್ಟು ಆರ್ಥಿಕ ನೆರವು ನೀಡಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಚೀನಾ ನಕಲಿ ಉಪಕರಣ ಮಾರಾಟ?
ಜಗತ್ತಿಗೆ ವೈರಸ್ ಹರಡಿ ಭೀತಿ ಸೃಷ್ಟಿಸಿರುವ ಚೀನಾ ಈಗ ಪರಿಸ್ಥಿತಿ ಲಾಭ ಪಡೆದುಕೊಂಡು ವಿವಿಧ ದೇಶಗಳಿಗೆ ನಕಲಿ ವೈದ್ಯಕೀಯ ಉಪಕರಣಗಳನ್ನು ಮಾರಾಟ ಮಾಡುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಮಾಸ್ಕ್ಗಳು, ಪರೀಕ್ಷೆ ಕಿಟ್ಗಳು ಹಾಗೂ ವೆಂಟಿಲೇಟರ್ಗಳು ಸೇರಿ ವಿವಿಧ ವೈದ್ಯಕೀಯ ಉಪಕರಣಗಳ ಕೊರತೆ ಅನುಭವಿಸುತ್ತಿರುವ ದೇಶಗಳಿಗೆ ಚೀನಾ ಅಂತಹ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಆದರೆ ಇವುಗಳಿಗೆ ಯಾವುದೇ ಮಾನದಂಡಗಳನ್ನು ವಿಧಿಸದೇ ಆರೋಗ್ಯ ಇಲಾಖೆಯ ಮಾನ್ಯತೆ ಪಡೆಯದೇ ರಫ್ತು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಚೀನಾದ ಕಂಪನಿಯಿಂದ ಖರೀದಿಸಿದ ಪರೀಕ್ಷಾ ಕಿಟ್ಗಳು ತಾವು ನಿರೀಕ್ಷಿಸಿದ್ದ ಶೇ. 80 ಫಲಿತಾಂಶಕ್ಕಿಂತ ಕೇವಲ ಶೇ.30 ಫಲಿತಾಂಶ ಹೊಂದಿವೆ ಎಂದು ಸ್ಪೇನ್ನ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಪೇನ್ನಲ್ಲಿನ ಚೀನಾ ರಾಯಭಾರ ಕಚೇರಿ ಅಧಿಕಾರಿಗಳು, ಪರೀಕ್ಷಾ ಕಿಟ್ಗಳನ್ನು ತಯಾರಿಸಿದ ಕಂಪನಿ ಶೆನ್ಜೆನ್ ಬಯೋಸಿ ಬಯೋಟೆಕ್ನಾಲಜಿ, ಬೀಜಿಂಗ್ನ ಪ್ರಮಾಣೀಕೃತ ಪೂರೈಕೆದಾರರ ಪಟ್ಟಿಯಲ್ಲಿ ಇರಲಿಲ್ಲ. ಮಾರುಕಟ್ಟೆ ನಿಯಂತ್ರಕರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸ್ಪೇನ್ ಸರ್ಕಾರ ಹೆಚ್ಚುವರಿ ವೈದ್ಯಕೀಯ ಕಿಟ್ಗಳಿಗಾಗಿ ಚೀನಾದೊಂದಿಗೆ 475 ಮಿಲಿಯನ್ ಡಾಲರ್ ವ್ಯಾಪಾರ ಆದೇಶ ಘೋಷಿಸಿದ ಒಂದು ದಿನದ ಬಳಿಕ ನಕಲಿ ಉಪಕರಣಗಳ ಅಂಶ ಬೆಳಕಿಗೆ ಬಂದಿದೆ.