

ಬೆಂಗಳೂರು: ಕರೊನಾ ಅಪಾಯದ ಕುರಿತಂತೆ ತಜ್ಞರು ನೀಡಿದ ಎಚ್ಚರಿಕೆ ನಿಜವಾಗಿದ್ದು, ಜುಲೈ ಕಳೆಯುವುದಕ್ಕೆ ಮೊದಲೇ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 50 ಸಾವಿರ ಹಾಗೂ ಸಾವಿನ ಸಂಖ್ಯೆ 1 ಸಾವಿರದ ಸನಿಹಕ್ಕೆ ಬಂದಿದೆ. ರಾಜ್ಯದಲ್ಲಿ ಬುಧವಾರ ಒಂದೇ ದಿನ ಅತಿ ಹೆಚ್ಚು 3,176 ಪ್ರಕರಣ ಬೆಳಕಿಗೆ ಬಂದಿದ್ದು, 87 ಮಂದಿ ಸಾವನ್ನಪ್ಪಿದ್ದಾರೆ. ಈಗ ಸೋಂಕು ಹರಡುತ್ತಿರುವ ತೀವ್ರತೆ ಗಮನಿಸಿದರೆ ಮಾಸಾಂತ್ಯಕ್ಕೆ ಸೋಂಕಿತರ ಸಂಖ್ಯೆ 80 ಸಾವಿರ ಗಡಿ ದಾಟುವ ಅಂದಾಜಿದೆ.
ಸೋಂಕಿನ ಸರಪಳಿ ಕತ್ತರಿಸಲು ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮತ್ತೆ ಲಾಕ್ಡೌನ್ ಘೋಷಿಸಿದ್ದರೂ ಒಟ್ಟಾರೆ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 1975 ಕೇಸ್ಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 47,253ಕ್ಕೆ ತಲುಪಿದರೆ 87 ಮಂದಿ ಸಾವಿನೊಂದಿಗೆ ಮೃತರ ಸಂಖ್ಯೆ 928ಕ್ಕೆ ಏರಿಕೆಯಾಗಿದೆ. ಗುರವಾರವೂ ಇಷ್ಟೇ ಸಂಖ್ಯೆಯಲ್ಲಿ ಪ್ರಕರಣಗಳು ಬಂದರೆ ಸಂಖ್ಯೆ 50 ಸಾವಿರ ದಾಟಲಿದ್ದು, ಸಾವಿನ ಸಂಖ್ಯೆ 1 ಸಾವಿರ ಮೀರಲಿದೆ. ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ 597 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮತ್ತಷ್ಟು ಸಾವು ಸಂಭವಿಸುವ ಆತಂಕವಿದೆ.
ನಿಲ್ಲದ ಸಾವಿನ ಸರಣಿ: ಬೆಂಗಳೂರು ನಗರದಲ್ಲಿ 60, ಮೈಸೂರು 6, ಧಾರವಾಡ 5, ಉತ್ತರ ಕನ್ನಡ ಮತ್ತು ಬಾಗಲಕೋಟೆ ತಲಾ 3, ಚಿಕ್ಕಬಳ್ಳಾಪುರ ಮತ್ತು ರಾಯಚೂರು ತಲಾ 2, ಚಿಕ್ಕಮಗಳೂರು, ತುಮಕೂರು, ರಾಮನಗರ, ಶಿವಮೊಗ್ಗ, ಚಿತ್ರದುರ್ಗ ಮತ್ತು ಮಂಡ್ಯದಲ್ಲಿ ತಲಾ ಒಂದು ಸೇರಿದಂತೆ ಬುಧವಾರ 87 ಸೋಂಕಿತರು ಸಾವನ್ನಪ್ಪಿದ್ದಾರೆ.
ಹೊಸ ಪ್ರಕರಣಗಳು ಎಲ್ಲೆಲ್ಲಿ?
ಬೆಂಗಳೂರು ನಗರದಲ್ಲಿ 1,975, ಧಾರವಾಡ 139, ಬಳ್ಳಾರಿ 136, ಮೈಸೂರು 99, ವಿಜಯಪುರ 80, ದಕ್ಷಿಣ ಕನ್ನಡ 76, ಕಲಬುರಗಿ 67, ಉಡುಪಿ 52, ಯಾದಗಿರಿ 49, ಉತ್ತರ ಕನ್ನಡ 48, ಬೆಳಗಾವಿ 41, ಗದಗ 39, ಬೀದರ್ ಮತ್ತು ದಾವಣಗೆರೆ ತಲಾ 35, ಬಾಗಲಕೋಟೆ 34, ಚಿಕ್ಕಬಳ್ಳಾಪುರ 32, ಮಂಡ್ಯ 31, ಶಿವಮೊಗ್ಗ 29, ರಾಯಚೂರು 26, ಹಾಸನ 25, ತುಮಕೂರು 24, ಕೊಡಗು 23, ಕೋಲಾರ 15, ಕೊಪ್ಪಳ 14, ಚಿಕ್ಕಮಗಳೂರು 13, ಚಿತ್ರದರ್ಗ 12, ಬೆಂಗಳೂರು ಗ್ರಾಮಾಂತರ 10, ಚಾಮರಾಜನಗರ 8, ಹಾವೇರಿ 6, ರಾಮನಗರ 3 ಸೇರಿದಂತೆ 3,176 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 1076 ಮಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ನಿಗಾದಲ್ಲಿರುವವರು - 95,078
ಪರೀಕ್ಷಿಸಿದ ಮಾದರಿಗಳು - 9,02,026
ನೆಗೆಟಿವ್ ವರದಿಗಳು - 8,31,246
ಒಟ್ಟು ಸೋಂಕಿತರು - 47,253
ಮೃತಪಟ್ಟವರು - 928
ಅನ್ಯಕಾರಣದಿಂದ ಸಾವು - 06
ಗುಣಮುಖರಾದವರು - 18,466
ಚಿಕಿತ್ಸೆ ಪಡೆಯುತ್ತಿರುವವರು - 27,853
ಬಾಕಿ ಇರುವ ವರದಿಗಳು - 23,527
ತಜ್ಞರ ಎಚ್ಚರಿಕೆ
ಕರೊನಾ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ. ಪರೀಕ್ಷೆ ಮಾಡಿಸಿದ 3-4 ದಿನಕ್ಕೆ ವರದಿ ಬರುತ್ತಿದೆ. ವರದಿ ಬಂದ 3-4 ದಿನಕ್ಕೆ ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಇದೆ. ಆಸ್ಪತ್ರೆಗಳಲ್ಲಿ ಬೆಡ್ಗಳು ಸಿಗದೆ ರೋಗಿಗಳು ಪರಿತಪಿಸುವಂತಾಗಿದೆ. ಈಗಲೇ ಪ್ರಕರಣಗಳ ಒತ್ತಡ ನಿರ್ವಹಿಸಲಾಗದಂತಿರುವಾಗ ಕೇಸ್ಗಳ ಸಂಖ್ಯೆ ಇನ್ನಷ್ಟು ಹೆಚ್ಚಿದರೆ ಕೈಚೆಲ್ಲುವುದು ನಿಶ್ಚಿತ ಎಂದೂ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಹೊಸ ಮಾರ್ಗಸೂಚಿ (ಕೈಗಾರಿಕೆ, ಉದ್ಯಮಕ್ಕೆ ಸೀಮಿತ)
ಕ್ವಾರಂಟೈನ್ ಕಟ್ಟುನಿಟ್ಟು (ಆರೋಗ್ಯ ಇಲಾಖೆ ಮಾರ್ಗಸೂಚಿ)