ಕರೊನಾದಿಂದ ಸಾರ್ವಜನಿಕ ಸ್ಥಳದಲ್ಲಿ ಕೆಮ್ಮಲೂ ಭಯ; ಈ ರೈಲು ಪ್ರಯಾಣಿಕ ಮಧ್ಯದಲ್ಲೇ ಇಳಿಯಬೇಕಾಯ್ತು..!

Kalburgi 21 march 20
Published on

ಕಲಬುರಗಿ: ಈಗ ಸಹಜವಾಗಿ ಕೆಮ್ಮು, ಸೀನು ಬಂದರೂ ಕರೊನಾ ಇರಬಹುದು ಎಂಬ ಶಂಕೆಯೇ ಕಾಡುತ್ತಿದೆ. ಜನ ಅಷ್ಟರಮಟ್ಟಿಗೆ ಕರೊನಾ ಆತಂಕದಲ್ಲಿ ಇದ್ದಾರೆ. ನಮ್ಮ ಬಳಿ ನಿಂತಿದ್ದವರು ಯಾರಾದರೂ ಕೆಮ್ಮಿದರೂ ನಮಗೆ ಭಯವಾಗುತ್ತದೆ.

ಈ ಕರೊನಾ ಶಂಕೆಯಿಂದ ರೈಲಿನಿಂದ ಪ್ರಯಾಣಿಕನೋರ್ವನನ್ನು ಕೆಳಗೆ ಇಳಿಸಿದ ಘಟನೆ ಕಲಬುರಗಿಯ ಸೇಡಂ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಹೈದರಾಬಾದ್​ನಿಂದ ಮುಂಬೈಗೆ ಹೊರಟಿದ್ದ ಹುಸೇನ್​ಸಾಗರ್​ ಎಕ್ಸ್​ಪ್ರೆಸ್​ ರೈಲಿನಲ್ಲಿ ತೆಲಂಗಾಣದ ರಾಜ್ಯದ ಮೆಹಬೂಬ ನಗರ ನಿವಾಸಿ ನಾಗೇಶ ಕೃಷ್ಣಪ್ಪ ಎಂಬುವರು ಪ್ರಯಾಣಿಸುತ್ತಿದ್ದರು. ಪುಣೆಗೆ ತೆರಳುತ್ತಿದ್ದ ಅವರು ಕೆಮ್ಮುತ್ತಿದ್ದರು. ಅಲ್ಲದೆ, ಅಸ್ವಸ್ಥರಾದಂತೆ ಕಾಣುತ್ತಿದ್ದರು.

ನಾಗೇಶ ಕೃಷ್ಣಪ್ಪ ಅವರಿಗೆ ಕರೊನಾ ಇರಬೇಕು ಎಂದು ಭಾವಿಸಿದ ಸಹಪ್ರಯಾಣಿಕರು ಆತಂಕಗೊಂಡು ಸೇಡಂ ರೈಲು ನಿಲ್ದಾಣದಲ್ಲಿ ಕೆಳಗಿಳಿಸಿ, ಸಿಆರ್​ಪಿಎಫ್​ ಸಿಬ್ಬಂದಿ ವಶಕ್ಕೆ ಆತನನ್ನು ಒಪ್ಪಿಸಿದ್ದಾರೆ.

ಬಳಿಕ ಸೇಡಂ ಸರ್ಕಾರಿ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿದ್ದು, ನಾಗೇಶ್​ ಕೃಷ್ಣಪ್ಪಗೆ ಕರೊನಾ ಸೋಂಕು ಇಲ್ಲ ಎಂದು ಹೇಳಿದ್ದಾರೆ. ಸದ್ಯ ಅವರಿಗೆ ಸೇಡಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net