

ಬಾಲಿವುಡ್ ಗಾಯಕಿ ಕನಿಕಾ ಕಪೂರ್ಗೆ ಕರೊನಾ ಸೋಂಕು ಇರುವುದು ದೃಢಪಟ್ಟ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ಲಖನೌನಲ್ಲಿ ಭಾನುವಾರ ನಡೆದ ಔತಣಕೂಟವೊಂದರಲ್ಲಿ ಕನಿಕಾ ಕಪೂರ್ ಅತಿಥಿಯಾಗಿ ಪಾಲ್ಗೊಂಡಿದ್ದರು. ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಹಾಗೂ ಅವರ ಪುತ್ರ ಸಂಸದ ದುಷ್ಯಂತ್ ಸಿಂಗ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕನಿಕಾಗೆ ಸೋಂಕು ದೃಢಪಟ್ಟ ಬಳಿಕ ಇವರಿಬ್ಬರೂ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಆದರೆ ದುಷ್ಯಂತ್ ಒಳಗೊಂಡ ನಿಯೋಗ ತಮ್ಮನ್ನು ಭೇಟಿಯಾಗಿದ್ದರಿಂದ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ಎಲ್ಲ ಕಾರ್ಯಕ್ರಮ ರದ್ದುಪಡಿಸಿದ್ದಾರೆ. ವಸುಂಧರಾ ಮತ್ತು ದುಷ್ಯಂತ್ ಇಬ್ಬರ ಫಲಿತಾಂಶವೂ ನೆಗೆಟಿವ್ ಬಂದಿದ್ದರೂ ಆತಂಕ ಕಡಿಮೆಯಾಗಿಲ್ಲ.
ಸಂಸದರಿಗೂ ಭೀತಿ: ಮತ್ತೊಂದೆಡೆ ಕರೊನಾ ಸೋಂಕು ಪೀಡಿತೆ ಕನ್ನಿಕಾ ಕಪೂರ್ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ದುಷ್ಯಂತ್ ಸಿಂಗ್ ನಂತರ ಸಂಸತ್ ಅಧಿವೇಶನದಲ್ಲೂ ಭಾಗಿಯಾಗಿದ್ದರು. ಈ ವೇಳೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಹೇಮಾಮಾಲಿನಿ, ಮೇರಿ ಕೋಮ್ ಅರ್ಜುನ್ ರಾಮ್ ಕುಮಾರಿ ಸೆಲ್ಜಾ, ಡೆರಿಕ್ ಒ’ಬ್ರಿಯಾನ್ ಸೇರಿ ಹಲವರನ್ನು ಭೇಟಿಯಾಗಿದ್ದರು. ಇದು ಸಹ ಆತಂಕಕ್ಕೆ ಕಾರಣವಾಗಿದೆ.
ಕನಿಕಾ ವಿರುದ್ಧ ಎಫ್ಐಆರ್: ಕರೊನಾ ಸೋಂಕು ಪೀಡಿತ ಗಾಯಕಿ ಕನ್ನಿಕಾ ಕಪೂರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಾರಣಾಂತಿಕ ಸೋಂಕನ್ನು ಹರಡಿದ ಆರೋಪದ ಮೇಲೆ ಐಪಿಸಿ 269ರ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.