ಕರೊನಾ ಸುತ್ತ ಹಬ್ಬಿರುವ ಮಿಥ್ಯೆಗಳು ಹಾಗೂ ವಾಸ್ತವದ ಕೆಲ ಮಾಹಿತಿ ಇಲ್ಲಿದೆ...

Corona samagra
Published on

ಕರೊನಾ ವೈರಸ್ ಜಗತ್ತಿನಾದ್ಯಂತ ಆತಂಕದ ಸುನಾಮಿ ಸೃಷ್ಟಿಸಿದ್ದು ಈ ರೋಗ ತಡೆಯಲು ಅಥವಾ ವಾಸಿ ಮಾಡಲು ನಿರ್ದಿಷ್ಟ ಔಷಧ ಇನ್ನೂ ಇಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಗಳು, ಅಂತೆಕಂತೆಗಳು ಪುಂಖಾನುಪುಂಖವಾಗಿ ಹರಿದು ಬರುತ್ತಿರುವುದರಿಂದ ನಿಜ ಮತ್ತು ಸುಳ್ಳಿನ ಮಧ್ಯದ ಅಂತರ ತಿಳಿಯುವುದೇ ಕಷ್ಟವಾಗಿದೆ. ಇಂಥ ಎಲ್ಲ ಸಂದೇಶಗಳು ಸತ್ಯವಲ್ಲ. ಸೋಂಕಿನ ಸುತ್ತ ಹಬ್ಬಿರುವ ಮಿಥ್ಯೆಗಳು ಹಾಗೂ ವಾಸ್ತವದ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

# ಮಿಥ್ಯೆ: ಶೀತ ಅಥವಾ ಹಿಮ ವಾತಾವರಣ ಹೊಸ ಕರೊನಾ ವೈರಸನ್ನು ಕೊಲ್ಲುತ್ತದೆ. ವಾಸ್ತವ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂ್ಯಎಚ್​ಒ) ಪ್ರಕಾರ, ಶೀತ ವಾತಾವರಣ ಹೊಸ ಕರೊನಾ ವೈರಸ್ ಅಥವಾ ಇತರ ಯಾವುದೇ ರೋಗವನ್ನು ಕೊಲ್ಲುತ್ತದೆನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಯಾಕೆಂದರೆ, ಬಾಹ್ಯ ವಾತಾವರಣದ ಉಷ್ಣತೆ ಎಷ್ಟೇ ಇದ್ದರೂ ಮನುಷ್ಯರ ದೇಹದ ಉಷ್ಣತೆ ಸಾಮಾನ್ಯವಾಗಿ ಸುಮಾರು 36.5ರಿಂದ 37 ಡಿಗ್ರಿ ಸೆಲ್ಷಿಯಸ್ ಇರುತ್ತದೆ. ಹಾಗೇ, ಬೆಚ್ಚಗಿನ ನೀರಿನಿಂದ ವೈರಸ್ ನಿಷ್ಕ್ರಿಯವಾಗುತ್ತದೆ ಅಥವಾ ಐಸ್ಕ್ರೀಂ ತಿನ್ನದಿರುವುದರಿಂದ ವೈರಸ್ ಹರಡುವುದನ್ನು ತಡೆಯಬಹುದು ಎಂಬ ನಂಬಿಕೆಯೂ ಇದೆ. ತಂಪು ಅಥವಾ ಉಷ್ಣ ವಾತಾವರಣ ವೈರಸ್​ಅನ್ನು ಕೊಲ್ಲುವುದಿಲ್ಲ. ಆದರೆ ಉಪು್ಪಮಿಶ್ರಿತ ಬಿಸಿನೀರು ಮುಕ್ಕಳಿಸುವುದು ಬಾಯಿ ಮತ್ತು ಗಂಟಲ ಆರೋಗ್ಯಕ್ಕೆ ಉತ್ತಮ. ಬ್ಲೀಚ್ ಪೌಡರ್ ಅಥವಾ ಎಥೆನಾಲ್ ಮಿಶ್ರಿತ ನೀರನ್ನು ಮುಕ್ಕಳಿಸುವುದು ಕೂಡ ಒಳ್ಳೆಯದೆನ್ನುತ್ತಾರೆ. ಆದರೆ ಅದು ತಪ್ಪು ಮಾತ್ರವಲ್ಲ ಅಪಾಯಕಾರಿಯೂ ಹೌದು.

# ಮಿಥ್ಯೆ: ಈ ವೈರಸ್ ಸಾಮಾನ್ಯ ನೆಗಡಿಯ ರೂಪಾಂತರಗೊಂಡ ಸ್ವರೂಪ.

ವಾಸ್ತವ: ಅದು ಸರಿಯಾದುದಲ್ಲ. ಕರೊನಾ ವೈರಸ್ ಅನೇಕ ರೋಗಗಳನ್ನು ಒಳಗೊಂಡ ವೈರಸ್​ನ ದೊಡ್ಡ ಕುಟುಂಬದ ಸದಸ್ಯ. ಸಾರ್ಸ್-ಸಿಒವಿ-2 ಇತರ ಕರೊನಾ ವೈರಸ್​ಗಳೊಂದಿಗೆ ಹೋಲಿಕೆ ಹೊಂದಿದೆ. ಈ ಪೈಕಿ ನಾಲ್ಕು ವೈರಸ್ ಸಾಮಾನ್ಯ ನೆಗಡಿಗೆ ಕಾರಣವಾಗಬಹುದು.

# ಮಿಥ್ಯೆ: ವಿಟಮಿನ್ ಸಿ ಅಂಶಗಳಿಂದ ಕರೊನಾ ತಡೆಯಬಹುದು.

ವಾಸ್ತವ: ವಿಟಮಿನ್ ಸಿ ಅಂಶಗಳು ಕರೊನಾ ವೈರಸ್ ಸೋಂಕಿನ ವಿರುದ್ಧ ರಕ್ಷಣೆ ನೀಡುತ್ತವೆ ಎನ್ನುವುದಕ್ಕೆ ಸಂಶೋಧಕರಿಗೆ ಇನ್ನೂ ಪುರಾವೆ ಸಿಕ್ಕಿಲ್ಲ.

# ಮಿಥ್ಯೆ: ಬೆಳ್ಳಿ ನೀರು ಕರೊನಾ ವೈರಸನ್ನು ಕೊಲ್ಲುತ್ತದೆ.

ವಾಸ್ತವ: ಬೆಳ್ಳಿ ಮುಳುಗಿಸಿದ ನೀರು ಕುಡಿಯುವುದರಿಂದ ಕರೊನಾ ವೈರಸ್ ಅಂಶವನ್ನು 12 ಗಂಟೆಯೊಳಗೆ ನಾಶ ಮಾಡಬಹುದೆಂದು ಅಮೆರಿಕದ ಟಿವಿ ಕಾರ್ಯಕ್ರಮ ನಿರ್ವಾಹಕರೊಬ್ಬರು ಹೇಳಿಕೊಂಡಿದ್ದು ಅದು ಅಪ್ಪಟ ಸುಳ್ಳು. ಬೆಳ್ಳಿ ನೀರಿನಿಂದ ಒಳ್ಳೆಯದಾಗುವುದಕ್ಕಿಂತ ಕಿಡ್ನಿಗೆ ಅಪಾಯ ಉಂಟಾಗುತ್ತದೆ. ಕಬ್ಬಿಣ ಮತ್ತು ಸತುವಿನಂತೆ ಬೆಳ್ಳಿಗೆ ಮಾನವ ದೇಹದ ಕಾರ್ಯನಿರ್ವಹಣೆಯಲ್ಲಿ ಯಾವುದೇ ಪಾತ್ರವಿಲ್ಲ.

# ಮಿಥ್ಯೆ: ಕರೊನಾ ವಾಸಿ ಮಾಡಲು ಲಸಿಕೆ (ವ್ಯಾಕ್ಸಿನ್) ಲಭ್ಯವಿದೆ.

ವಾಸ್ತವ: ಸದ್ಯಕ್ಕೆ ಇದಕ್ಕೆ ಯಾವುದೇ ವ್ಯಾಕ್ಸಿನ್ ಲಭ್ಯವಿಲ್ಲ. ಲಸಿಕೆ ಅಭಿವೃದ್ಧಿಯ ಹಂತದಲ್ಲಿದೆ. ಇದಕ್ಕೆ ಹಲವು ತಿಂಗಳುಗಳೇ ಬೇಕು.

# ಮಿಥ್ಯೆ: ನೀರು ಕುಡಿಯುವುದರಿಂದ ವೈರಸ್ ತಡೆಯಬಹುದು.

ವಾಸ್ತವ: ಪ್ರತಿ 15 ನಿಮಿಷಕ್ಕೆ ನೀರು ಕುಡಿಯುವುದರಿಂದ ಗಂಟಲಿನಲ್ಲಿರುವ ವೈರಸ್ ಹೊಟ್ಟೆ ಸೇರುತ್ತದೆ. ಅಲ್ಲಿ ಆಮ್ಲ (ಆಸಿಡ್) ಅದನ್ನು ಕೊಲ್ಲುತ್ತದೆ ಎಂಬ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಉಸಿರಾಡುವ ವೈರಸ್ ವಿರುದ್ಧ ಇದು ಕೆಲಸ ಮಾಡುತ್ತದೆನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಯಿಲ್ಲ. ಅದೇನೇ ಇರಲಿ; ಪದೇ ಪದೇ ನೀರು ಕುಡಿದು ದೇಹವನ್ನು ಸಜಲೀಕರಣಗೊಳಿಸುವುದು ಒಳ್ಳೆಯ ಹವ್ಯಾಸ.

# ಮಿಥ್ಯೆ: ನೇರಳಾತೀತ (ಅಲ್ಟ್ರಾವೈಲೆಟ್-ಯುವಿ) ರೇಸ್​ನಿಂದ ಕರೊನಾ ವೈರಸ್ ಕೊಲ್ಲಬಹುದು.

ವಾಸ್ತವ: ಕೈಗಳು ಅಥವಾ ಚರ್ಮದ ಯಾವುದೇ ಭಾಗ ಸ್ವಚ್ಛಗೊಳಿಸಲು ಯುವಿ ರೇಸ್ ಬಳಸಬಾರದು. ಯಾಕೆಂದರೆ ಯುವಿ ರೇಡಿಯೇಷನ್ ಚರ್ಮದ ಕೆರೆತಕ್ಕೆ ಕಾರಣವಾಗಬಹುದು.

# ಮಿಥ್ಯೆ: ಸೊಳ್ಳೆಗಳಿಂದ ಕರೊನಾ ವೈರಸ್ ಹರಡುತ್ತದೆ.

ವಾಸ್ತವ: ಇದಕ್ಕೆ ಇದುವರೆಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಕರೊನಾ ವೈರಸ್ ಉಸಿರಾಟ ಸಂಬಂಧಿ ಸೋಂಕು. ಸೋಂಕಿತ ವ್ಯಕ್ತಿಯ ಸೀನು ಅಥವಾ ಕಫದ ಮೂಲಕ ಅದು ಹರಡುತ್ತದೆ. ಆದ್ದರಿಂದ ರಕ್ಷಿಸಿಕೊಳ್ಳಲು ಕೈಗಳನ್ನು ಆಗಾಗ ಸೋಪಿನ ದ್ರಾವಣದಿಂದ ತೊಳೆಯಬೇಕು ಅಥವಾ ಆಲ್ಕೋಹಾಲ್ ಆಧರಿತ ದ್ರಾವಣದಿಂದ ಒರೆಸಿಕೊಳ್ಳುತ್ತಿರಬೇಕು. ಕೆಮ್ಮು ಅಥವಾ ಸೀನುವವರಿಂದ ದೂರವಿರಬೇಕು.

# ಮಿಥ್ಯೆ: ಕರೊನಾ ವೈರಸ್ ಸೀಸನಲ್ ಶೀತ ಜ್ವರಕ್ಕಿಂತ ಅಪಾಯಕಾರಿಯಲ್ಲ.

ವಾಸ್ತವ: ಬಹುತೇಕ ಕರೊನಾ ವೈರಸ್ ಪ್ರಕರಣಗಳು ಸೌಮ್ಯ ವಾಗಿರುತ್ತವೆ. ರೋಗಿಗಳು ಶೀತಜ್ವರಕ್ಕಿಂತ ಹೆಚ್ಚಿನ ಯಾವುದೇ ಲಕ್ಷಣ ಹೊಂದಿರುವುದಿಲ್ಲ. ಉಸಿರಾಟದ ತೊಂದರೆಯಿಂದ ಸಾವಿನ ಪ್ರಮಾಣ ಜ್ವರಕ್ಕಿಂತ ಶೇ. 1 ಅಧಿಕವಾಗಿರುತ್ತದೆ. ಕೋವಿಡ್-19 ಶೀತ ಜ್ವರಕ್ಕಿಂತ ಹತ್ತು ಪಟ್ಟು ಅಧಿಕ ಮಾರಕ.

# ಮಿಥ್ಯೆ: ಲವಣಯುಕ್ತ ದ್ರಾವಣದಿಂದ (ಸಲೈನ್) ಪದೇಪದೆ ಮೂಗು ಸ್ವಚ್ಛಗೊಳಿಸುತ್ತಿದ್ದರೆ ಕರೊನಾ ವೈರಸ್ ಸೋಂಕು ತಡೆಯಬಹುದು.

ವಾಸ್ತವ: ಇದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ.

# ಮಿಥ್ಯೆ: ನ್ಯೂಮೋನಿಯಾ ವಿರುದ್ಧದ ವ್ಯಾಕ್ಸಿನ್ ಕರೊನಾ ವೈರಸ್​ನಿಂದ ರಕ್ಷಿಸಬಹುದು.

ವಾಸ್ತವ: ನ್ಯೂಮೊಕೊಕಾಲ್ ಮತ್ತು ಹೆಮೊಫಿಲಸ್ ಇನ್​ಫ್ಲುಯೆಂಜಾ ಬಿ ವ್ಯಾಕ್ಸಿನ್​ನಂಥ ವ್ಯಾಕ್ಸಿನ್​ಗಳಿಂದ ಕರೊನಾ ವೈರಸ್ ವಿರುದ್ಧ ರಕ್ಷಣೆ ಸಿಗುವುದಿಲ್ಲ. ಕರೊನಾ ತೀರಾ ಹೊಸ ಹಾಗೂ ಭಿನ್ನ ವೈರಸ್ ಆಗಿರುವುದರಿಂದ ಅದಕ್ಕೆ ಅದರದೇ ಆದ ವ್ಯಾಕ್ಸಿನ್ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಂಶೋಧಕರ ಪ್ರಯತ್ನ ಸಾಗಿದೆ.

# ಮಿಥ್ಯೆ: ಕರೊನಾ ಸೋಂಕಿತ ತಾಯಿಯು ಮಗುವಿಗೆ ಎದೆಹಾಲು ಉಣಿಸಬಾರದು.

ವಾಸ್ತವ: ಸೋಂಕಿತ ಮಹಿಳೆ ಮಗುವಿಗೆ ಸುರಕ್ಷಿತವಾಗಿ ಹಾಲುಣಿಸುವುದನ್ನು ಬೆಂಬಲಿಸಬೇಕು. ನವಜಾತ ಶಿಶುವನ್ನು ಮೈಗೆ ಅಪ್ಪಿಕೊಂಡು ಹಾಲೂಡಿಸಬೇಕು ಎಂದು ಡಬ್ಲೂ್ಯಎಚ್​ಒ ಹೇಳಿದೆ. ಈಗಾಗಲೇ ತಾಯಿಯ ಸಂಪರ್ಕಕ್ಕೆ ಬಂದಿರುವ ಶಿಶುವಿಗೆ ನೇರ ಹಾಗೂ ಸತತ ಸ್ತನ್ಯಪಾನ ಮಾಡಿಸುವುದರಿಂದ ಮಗುವಿಗೇ ಹೆಚ್ಚಿನ ಲಾಭ. ಏಕೆಂದರೆ, ಎದೆಹಾಲು ಹಲವು ರೋಗಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ಮಗುವಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

# ಮಿಥ್ಯೆ: ಪತ್ರಿಕೆಗಳಿಂದ ವೈರಸ್ ಹರಡುತ್ತದೆ.

ವಾಸ್ತವ: ಪತ್ರಿಕೆಗಳಿಂದ ವೈರಸ್ ಹರಡುವುದಿಲ್ಲ ಎಂದು ತಜ್ಞರೇ ಸ್ಪಷ್ಟಪಡಿಸಿದ್ದಾರೆ.

# ಮಕ್ಕಳಿಗೂ ಕರೊನಾ ವೈರಸ್ ತಟ್ಟುತ್ತದೆಯೆ?

ಮಕ್ಕಳಿಗೂ ಈ ಸೋಂಕು ತಗುಲಬಹುದು. ಇದುವರೆಗೆ ವಯಸ್ಕರಿಗೆ ಹೋಲಿಸಿದರೆ ಕೆಲವೇ ಮಕ್ಕಳು ಸೋಂಕಿತ ರಾಗಿದ್ದಾರೆ. ವಯಸ್ಕರಂತೆ ಮಕ್ಕಳಿಗೂ ಹಬ್ಬಬಹುದು ಎನ್ನುವುದು ಈಚಿನ ಅಧ್ಯಯನದಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net