ಭಾರತದಲ್ಲಿ ಜೂನ್​-ಜುಲೈನಲ್ಲಿ ಕರೋನಾ ಸೋಂಕು ಉಚ್ಛ್ರಾಯ ಸ್ಥಿತಿಗೆ : ಯುಕೆಯಲ್ಲಿರೋ ಕರ್ನಾಟಕ ಮೂಲದ ವೈದ್ಯರಿಂದ ಸ್ಪೋಟಕ ಮಾಹಿತಿ

Niraj Patil
Published on

ನವದೆಹಲಿ: ಕರೊನಾ ಸೋಂಕು ಹರಡುವಿಕೆಯ ಆರಂಭದಲ್ಲಿ ನಾವಿದ್ದೇವೆ. ಅತ್ಯಂತ ಕೆಟ್ಟ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಎದುರಾಗಲಿದೆ. ಕೋವಿಡ್​-19 ಎದುರಿಸುವುದು ಯುನೈಟೆಡ್​ ಕಿಂಗ್​ಡಮ್​ನ ರಾಷ್ಟ್ರೀಯ ಆರೋಗ್ಯ ಸೇವೆ(ಎನ್​ಎಚ್​ಎಸ್​)ಗೆ ಒಂದು ದೊಡ್ಡ ಸವಾಲಾಗಿದೆ ಎಂದು ಕರ್ನಾಟಕ ಮೂಲದ ವೈದ್ಯರೊಬ್ಬರು ತಿಳಿಸಿದ್ದಾರೆ.

ಡಾ. ನೀರಜ್​ ಪಾಟೀಲ್(52)​ ಕಲಬುರಗಿ ಮೂಲದವರು. ಯುಕೆಯ ಎನ್​ಎಚ್​ಎಸ್​ನಲ್ಲಿ ಎಮರ್ಜೆನ್ಸಿ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಲೇಬರ್​ ಪಾರ್ಟಿಯ ಮುಖಂಡರಾಗಿರುವ ಪಾಟೀಲ್​ ಲ್ಯಾಂಬೆತ್‌ನ ಲಂಡನ್ ಬರೋ(2010-2011)ದಲ್ಲಿ ಮೇಯರ್​ ಆಗಿಯೂ ಸೇವೆ ಸಲ್ಲಿಸಿದ್ದಾರೆ. 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಪ್ರತಿಮೆಯನ್ನು ಲಂಡನ್​ನಲ್ಲಿ ಸ್ಥಾಪಿಸಿರುವುದರಲ್ಲಿ ಪಾಟೀಲ್​ ಪಾತ್ರ ಪ್ರಮುಖವಾಗಿದೆ.

ಜಾಗತಿಕವಾಗಿ ಮರಣ ಮೃದಂಗ ಬಾರಿಸುತ್ತಿರುವ ಕರೊನಾ ವೈರಸ್​ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಪಾಟೀಲ್​, ಸದ್ಯ ನಾವು ಆರಂಭದಲ್ಲಿದ್ದೇವೆ. ಯುಕೆಯಲ್ಲಿ ಮೇ ತಿಂಗಳಲ್ಲಿ ಮತ್ತು ಭಾರತದಲ್ಲಿ ಜೂನ್​-ಜುಲೈನಲ್ಲಿ ಕೋವಿಡ್​-19 ಉಗ್ರರೂಪ ತಾಳಲಿದೆ ಎಂದು ಎಚ್ಚರಿಸಿದ್ದಾರೆ.

ಎನ್​ಎಚ್​ಎಸ್​ನಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಈವರೆಗೂ ಎದುರಿಸದ ಅತ್ಯಂತ ದೊಡ್ಡ ಸವಾಲು ಇದಾಗಿದೆ. ಯುಕೆಯಲ್ಲಿ ನಾಗರಿಕರೆಲ್ಲರಿಗೂ ಉಚಿತ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತಿದೆ. ಇಲ್ಲಿ ಹಿರಿಯ ನಾಗರಿಕರ(70 ವರ್ಷಕ್ಕಿಂತ ಹೆಚ್ಚು) ಸಂಖ್ಯೆ ಹೆಚ್ಚಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ. ಕಳೆದ ಒಂದು ವಾರದಿಂದ ಕರೊನಾ ವಿರುದ್ಧ ಹೋರಾಡಲು ಅವಿರತ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಭಾರತದ ಪರಿಸ್ಥಿತಿ ಬಗ್ಗೆ ಮಾತನಾಡಿ, ನಾವು ಆರಂಭಿಕ ಹಂತದಲ್ಲಿದ್ದೇವೆ. ಕಷ್ಟದ ದಿನಗಳು ಎದುರಾಗಲಿವೆ. ಭಾರತೀಯ ಪತ್ರಿಕೆಗಳಲ್ಲಿನ ಸ್ವಹೊಗಳಿಕೆಯನ್ನು ಕಂಡು ನಾನು ಗೊಂದಲಕ್ಕೀಡಾಗಿದ್ದೇನೆ. ಶೀಘ್ರವೇ ಟೀಕೆ ಮತ್ತು ಚಪ್ಪಾಳೆ ತಟ್ಟುತ್ತಿರುವುದನ್ನು ನೋಡಿದ್ದೇನೆ. ಆದರೆ, ನಿಜವಾದ ಪರೀಕ್ಷಾ ಸಮಯ ಜೂನ್​ ಮತ್ತು ಜುಲೈನಲ್ಲಿ ಎದುರಾಗಲಿದೆ. ಈ ಸಮಯದಲ್ಲಿ ಕರೊನಾ ಭಾರತದಲ್ಲಿ ಸಂಪೂರ್ಣ ಸ್ಪೋಟಗೊಳ್ಳಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಜನಸಂಖ್ಯಾ ಗಾತ್ರ ದೊಡ್ಡದಿರುವುದರಿಂದ ಕರೊನಾ ತಡೆಗಟ್ಟುವುದು ಕೂಡ ಒಂದು ಮಹಾ ಸವಾಲು. ಆರ್ಥಿಕ ಮತ್ತು ಆರೋಗ್ಯ ಮೂಲಗಳ ಕೊರತೆಯಿಂದ ಕರೊನಾ ತಡೆಗಟ್ಟುವುದು ಸಾಮಾನ್ಯವಲ್ಲ. ಜನತಾ ಕರ್ಫ್ಯೂವಿನಂತಹ ಕ್ರಮಗಳನ್ನು ಹಾಗೂ ಪ್ರಧಾನಿ ಮೋದಿ ಅವರು ದೃಷ್ಟಿಕೋನವನ್ನು ನಾನು ಬೆಂಬಲಿಸುತ್ತೇನೆ. ದುರಾದೃಷ್ಟವಶಾತ್​ ಭಾರತದಲ್ಲಿ ಸುರಕ್ಷಿತ ಹಾಗೂ ಬಲಿಷ್ಠವಾದ ಆರೋಗ್ಯ ವ್ಯವಸ್ಥೆ ಇಲ್ಲ. ಹೀಗಾಗಿ ಕರೊನಾ ಸೋಂಕು ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ.

ಇಟಲಿಯಿಂದ ನಾವು ಸಾಕಷ್ಟು ಕಲಿತಿದ್ದೇವೆ. ಹೀಗಾಗಿ ರೋಗ ಬರುವುದಕ್ಕೂ ಮುಂಚೆಯೇ ಎಚ್ಚರಿಕೆ ವಹಿಸುವುದರ ಕಡೆ ಗಮನಹರಿಸಿದ್ದೇವೆ. ಕರೊನಾ ತಡೆಗಟ್ಟು ಸರ್ಕಾರಿ, ಖಾಸಗಿ ವಲಯ ಹಾಗೂ ಸ್ವಯಂಪ್ರೇರಿತರೆಲ್ಲರೂ ಒಗ್ಗಾಟ್ಟಾಗಿ ಹೋರಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಎನ್​ಎಚ್​ಎಸ್​ ಕೂಡ ಸಾಕಷ್ಟು ಕ್ರಮಕೈಗೊಂಡಿದೆ ಎಂದು ಪಾಟೀಲ್​ ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net