

ಬೆಂಗಳೂರು: ಕರೊನಾ ವೈರಸ್ಗೆ ಮುಂದುವರಿದ ರಾಷ್ಟ್ರಗಳೇ ತತ್ತರಿಸುತ್ತಿರುವ ಸಂದರ್ಭದಲ್ಲಿ ಜನರ ಜೀವರಕ್ಷಣೆಗೆ ಜಾರಿ ಮಾಡಿದ ಲಾಕ್ಡೌನ್ ಮೊದಲಾರ್ಧ ನಾಳೆ (ಏ.14) ಕೊನೆಯಾಗುತ್ತಿದೆ. ಜತೆಗೆ ಬದಲಾದ ಸ್ವರೂಪದ ಲಾಕ್ಡೌನ್ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುತ್ತಿದೆ.
ಕರೊನಾ ನಿರ್ವಹಣೆಯಲ್ಲಿ ದೇಶದಲ್ಲೇ ಕೇರಳ ಮಾದರಿ ಎಂದು ಕೆಲವರಿಂದ ‘ಪುಕ್ಕಟೆ ಪ್ರಚಾರ’ ನಿರಂತರವಾಗಿ ನಡೆಯುತ್ತಲೇ ಇದೆ. ಆದರೆ, ಪರಿಣಾಮಕಾರಿ ಕ್ರಮಗಳು ರಾಜ್ಯದಲ್ಲಿ ಮಾ.14ರಿಂದಲೇ ಜಾರಿಯಾಗಿತ್ತು. ಈ ತೀರ್ವನದಿಂದಲೇ ಸೋಂಕು ವ್ಯಾಪಿಸಲಿಲ್ಲ, ಹೆಚ್ಚು ಸಾವು- ನೋವು ಸಂಭವಿಸಿಲ್ಲ ಎಂದು ತಜ್ಞರೇ ಅಭಿಪ್ರಾಯಪಡುತ್ತಾರೆ.
ದೇಶಾದ್ಯಂತ ಲಾಕ್ಡೌನ್ ಜಾರಿಯಾದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಜನರನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು ಬೇರೆ ರಾಜ್ಯಕ್ಕೆ ಮಾದರಿಯಾಗಿದ್ದು ಒಂದೆಡೆಯಾದರೆ, ರಾಜ್ಯದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸರ್ಕಾರ ತನ್ನ ನೌಕರರ ವೇತನ ಕಡಿತ ಮಾಡುವ ಪ್ರಸ್ತಾವನೆ ಇಲ್ಲ ಎಂದು ಘೋಷಿಸಿ, ಶಾಸಕರು- ಸಚಿವರ ವೇತನ ಕಡಿತಗೊಳಿಸಿತು. ಹಣ ಸಂಗ್ರಹಕ್ಕೆ ಮನವಿ ಮಾಡಿದ್ದರಿಂದ 150 ಕೋಟಿ ರೂ.ಗಿಂತ ಹೆಚ್ಚು ದೇಣಿಗೆ ರೂಪದಲ್ಲಿ ತಲುಪಿತು. ಒಂದಷ್ಟು ಕಾನೂನಾತ್ಮಕ ರಿಯಾಯಿತಿ ಘೋಷಿಸಿ. ಕಾರ್ವಿುಕರ ಹಿತ ವರ್ಗದವರ ವೇತನ ಕಡಿತ ಮಾಡದಂತೆ, ಕೆಲಸದಿಂದ ತೆಗೆಯದಂತೆ ಆದೇಶ ಹೊರಡಿಸಿ ದೊಡ್ಡ ವರ್ಗಕ್ಕೆ ಅನುಕೂಲವಾಗುವ ರೀತಿ ನೋಡಿಕೊಂಡಿತು.
ಕಣ್ಣೀರ ಕೋಡಿ: ಕೈಗಾರಿಕೆಗಳು ಸ್ಥಬ್ಧಗೊಂಡವು, ಕಾರ್ವಿುಕರಿಗೆ ಕೆಲಸ ಇಲ್ಲದಂತಾಯಿತು. ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡವು, ಕಟ್ಟಡ ಕಾರ್ವಿುಕರು ಬರಿಗೈಲಿ ನಿಂತರು. ಕರೊನಾ ಬಗ್ಗೆ ಆತಂಕದ ಸುದ್ದಿಗಳು ಹರಿದಾಡುತ್ತಿದ್ದಂತೆ ಹುಟ್ಟೂರು ಸೇರಲು ಮುಂದಾದರು. ಇದರಿಂದ ದೊಡ್ಡ ಪ್ರಮಾಣದಲ್ಲಿ ಕೂಲಿ ಕಾರ್ವಿುಕರು ಬೆಂಗಳೂರಿನಿಂದ ಹೊರಟೇ ಬಿಟ್ಟರು. ಅಗತ್ಯ ಮುಂಜಾಗ್ರತಾ ಕ್ರಮ ಘೋಷಣೆ ತಡವಾಗುತ್ತಿದ್ದಂತೆ ರಾಜಧಾನಿ ಗಡಿದಾಟಿ ಕುಟುಂಬದೊಂದಿಗೆ ಕಣ್ಣೀರು ಹಾಕುತ್ತಾ ಸಾಗಿದರು. ಊಟ ಸಿಗದೆ ಪರದಾಡಿದರು. ಈ ವಿಚಾರದಲ್ಲಿ ಸರ್ಕಾರ ಒಂದಷ್ಟು ಟೀಕೆ ಎದುರಿಸಬೇಕಾಯಿತು.
ದಣಿವರಿಯದ ದುಡಿಮೆ
ಸರ್ಕಾರದ ಅಗತ್ಯ ಸೇವಾ ವ್ಯಾಪ್ತಿಯಲ್ಲಿನ ಇಲಾಖೆಯ ದಣಿವರಿಯದ ದುಡಿಮೆ ಮೆಚ್ಚುವಂಥದ್ದೆ. ಅದರಲ್ಲೂ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತೆಯರ ಶ್ರಮ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದು ಸೋಂಕಿನ ಸಂಖ್ಯೆಯನ್ನು ಬೇರೆ ರಾಜ್ಯದ ಜತೆ ಹೋಲಿಸಿದಾಗ ಸ್ಪಷ್ಟವಾಗುತ್ತಿದೆ. ಮಾಸ್ಕ್ ಕೊರತೆ ನೀಗಲು ಜೈಲುಗಳಲ್ಲಿನ ಖೈದಿಗಳು ಪ್ರತಿನಿತ್ಯ 5 ಸಾವಿರ ಮಾಸ್್ಕ ಸಿದ್ಧಮಾಡಿಕೊಟ್ಟರೆ, ಡಿಸ್ಟ್ರಿಲರಿಗಳು ಪ್ರತಿ ಜಿಲ್ಲೆಯ ಸ್ಯಾನಿಟೈಸರ್ ಕೊರತೆಯಾಗದಂತೆ ನೋಡಿಕೊಂಡವು. ಸಾಮಾಜಿಕ ಸಂಸ್ಥೆಗಳಲ್ಲದೆ, ನೂರಾರು ಕಂಪನಿಗಳು ಸರ್ಕಾರಕ್ಕೆ ರಕ್ಷಣಾ ಕಿಟ್ ಒದಗಿಸಿ ಬೆಂಬಲಕ್ಕೆ ನಿಂತವು.
ಸಿಎಂ ಬೆಂಗಳೂರು ಪ್ರದಕ್ಷಿಣೆ
ಮೊದಲ ಹಂತದ ಲಾಕ್ಡೌನ್ ಮುಗಿಯಲು ಇನ್ನೆರಡು ದಿನಗಳಿರುವಾಗ ಸಿಎಂ ಯಡಿಯೂರಪ್ಪ ಹಠಾತ್ ಅಖಾಡಕ್ಕೆ ಇಳಿದು, ಬೆಂಗಳೂರು ಮಹಾ ನಗರದಲ್ಲಿ ಸುಮಾರು 45 ಕಿ.ಮೀ. ಸುತ್ತು ಹಾಕಿದರು. ಜನರೊಂದಿಗೆ ರ್ಚಚಿಸುವ ವೇಳೆ ಕಷ್ಟ-ನಷ್ಟಗಳು ಪ್ರಸ್ತಾಪವಾದಾಗ ಇನ್ನೆರಡು ದಿನ ಸಹಿಸಿಕೊಳ್ಳಿರಿ ಎಂದು ಸಂತೈಸಿದರು. ವ್ಯಾಪಾರ ಹಾಗೂ ಹಣ್ಣಿನ ದರ ಕೇಳಿದ ನಂತರ 500 ರೂ. ಕೊಟ್ಟು ಹಣ್ಣು ಖರೀದಿಸಿದರು. ಇದೇ ವೇಳೆ ಕೆಲವರು ‘ನೀವೇ ಬೆಸ್ಟ್ ಸಿಎಂ’ ಎಂಬ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.
ಬೆಳವಣಿಗೆ ತಗ್ಗಿಸಿದ್ದೇ ಸಾಧನೆ
ಕರ್ನಾಟಕದಷ್ಟೇ ಜನಸಂಖ್ಯೆ ಇರುವ ಮುಂದು ವರಿದ ದೇಶಗಳಲ್ಲಿನ ಕರೊನಾ ವ್ಯಾಪಕತೆಯನ್ನು ಇಲ್ಲಿನ ಪರಿಸ್ಥಿತಿಗೆ ಹೋಲಿಸಿದರೆ ಒಂದಷ್ಟು ಸಮಾಧಾನವಾಗಬಹುದು. ರಾಜ್ಯದ ತಜ್ಞರ ಪ್ರಕಾರ, ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ತಕ್ಕಮಟ್ಟಿಗೆ ನಿಯಂತ್ರಣದಲ್ಲಿದೆ. ಆರಂಭ ದಲ್ಲಿದ್ದ ಸೋಂಕು ಬೆಳವಣಿಗೆ ಶೇ.24ರಿಂದ ಶೇ.14-15ಕ್ಕೆ ಇಳಿದಿದೆ. ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ವೆುಂಟ್ ವಿಧಾನ ಅನುಸರಿಸುತ್ತಿರುವುದು ಮತ್ತು ನಿಖರ ಪ್ಲಾ್ಯನ್ನಿಂದ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿದೆ. ದೇಶದಲ್ಲೇ ಮೊದಲು ಕರೊನಾ ವಾರ್ ರೂಂ ಆರಂಭಿಸಿ, ತಂತ್ರಜ್ಞಾನ ಪರಿಣಾಮಕಾರಿಯಾಗಿ ಬಳಸಿ ಕೊಳ್ಳಲಾಯಿತು. ಇದು ಕೇಂದ್ರ ಸರ್ಕಾರದ ಗಮನ ಕೂಡ ಸೆಳೆಯಿತು. ಆರಂಭದ ಸೋಂಕು ವಿಸ್ತರಣೆ ವಿಚಾರದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿತ್ತು, ಈಗ 10 ಸ್ಥಾನದೊಳಗೂ ಇಲ್ಲ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಗುರುತು, ಬಿಬಿಎಂಪಿ ವ್ಯಾಪ್ತಿಯಲ್ಲಿ ಜ್ವರ ಪತ್ತೆ ಕೇಂದ್ರ, ಆಶಾ ಕಾರ್ಯಕರ್ತೆಯರ ಸರ್ವೆ, ಸಂರ್ಪತರಿಗೆಲ್ಲರಿಗೂ 14 ದಿನ ಕಡ್ಡಾಯ ಕ್ವಾರಂಟೈನ್ ಮಾಡಿಸಿದ್ದು, 32 ಸಾವಿರ ಮಂದಿಗೆ ಆಪ್ತ ಸಮಾಲೋಚನೆ ಮಾಡಿದ್ದು ದೊಡ್ಡ ಸಾಧನೆಯೇ.
ಚಚ್ಚಿ ಕೂರಿಸಿದ್ದರ ಪರಿಣಾಮ-ಪ್ರತಿಫಲನ
ಲಾಕ್ಡೌನ್ ಅನಿವಾರ್ಯತೆಯಲ್ಲಿ ಸರ್ಕಾರ ಇದ್ದರೆ, ಗಂಭೀರತೆ ಜನರಿಗಿರಲಿಲ್ಲ. ಇದರಿಂದ ಸಹಜವಾಗಿ ರೋಸಿಹೋದ ಪೊಲೀಸರು ಲಾಠಿ ಬೀಸಿ ಜನರನ್ನು ಮನೆಯಲ್ಲೇ ಕೂರುವಂತೆ ಮಾಡಿದರು. ಈ ಕ್ರಮಕ್ಕೆ ಪೊಲೀಸರು ಮುಂದಾಗಿದ್ದರ ಪರಿಣಾಮ ಈಗ ಸೋಂಕಿತರ ಲೆಕ್ಕದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕೊನೆಗೆ ವ್ಯಾಪಕ ಟೀಕೆ ಬರುತ್ತಿದ್ದಂತೆ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಒಂದಷ್ಟು ಪ್ರಕರಣವನ್ನೂ ದಾಖಲಿಸಿದರು. ಈವರೆಗೆ ರಾಜ್ಯದಲ್ಲಿ ಬರೋಬ್ಬರಿ 45 ಸಾವಿರ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ಸುಖಾಸುಮ್ಮನೆ ಅಲೆಯುವರನ್ನು ಕಟ್ಟಿಹಾಕಿದ್ದಾರೆ.
ಮಾನವೀಯತೆ ಮರೆಯಲಿಲ್ಲ
ಕೈಯಲ್ಲಿ ಕೆಲಸವಿಲ್ಲದೆ ದಿನದ ಊಟಕ್ಕೂ ಲಕ್ಷಾಂತರ ಜನ ಪರದಾಡುವ ಸನ್ನಿವೇಶ ಅರಿತ ನೂರಾರು ಸಂಘಟನೆಗಳು, ಜನರು, ಮಠಗಳ ಜತೆಗೆ ಸರ್ಕಾರ ಸಂಕಷ್ಟದಲ್ಲಿರುವರಿಗೆ ಊಟ ನೀಡಿತು. ಊಟ ಸಿಗದೆ ಸತ್ತರೆಂಬ ಪರಿಸ್ಥಿತಿ ನಿರ್ವಣವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಮಾಜವೇ ತೆಗೆದುಕೊಂಡಿದ್ದು ವಿಶೇಷ ಸಂಗತಿ. ಕೆಲವರು ನಿತ್ಯ ಸಿದ್ಧ ಆಹಾರ ಒದಗಿದರೆ, ಮತ್ತೆ ಕೆಲವರು ಮನೆಗಳಿಗೆ ದಿನಸಿ ಕಿಟ್ ವಿತರಿಸಿದರು. ರಾಜಕೀಯ ಪಕ್ಷಗಳು ಸಹ ಈ ಕೆಲಸದಲ್ಲಿ ಹಿಂದೆ ಬೀಳಲಿಲ್ಲ.
| ಶ್ರೀಕಾಂತ್ ಶೇಷಾದ್ರಿ