

ಬೆಂಗಳೂರು: ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪನಿಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ನೀಡಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಐಟಿ-ಬಿಟಿ ಕಂಪನಿಗಳ ಪ್ರಮುಖರಿಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸೂಚಿಸಿದ್ದಾರೆ.
ಐಟಿ- ಬಿಟಿ, ಸ್ಟಾರ್ಟಪ್ ಕಂಪನಿ
ಗಳ ಮುಖ್ಯಸ್ಥರ ಜತೆ ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ನಡೆಸಿದ ಡಿಸಿಎಂ, ಕರೊನಾ ತಡೆಯಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು. ಸರ್ಕಾರಿ ಕೆಲಸ, ಆರೋಗ್ಯ ಹಾಗೂ ಬ್ಯಾಂಕಿಂಗ್ ಮುಂತಾದ ಅಗತ್ಯ ಸೇವೆ ಒದಗಿಸುವ ಐಟಿ ಉದ್ಯೋಗಿಗಳನ್ನು ಮಾತ್ರ ಕಚೇರಿಗೆ ಕರೆಸಲಾಗುತ್ತಿದೆ. ಕೆಲ ಸೇವೆಗಳಲ್ಲಿ ಗೌಪ್ಯತೆ ಕಾಯ್ದುಕೊಳ್ಳುವ ಅನಿವಾರ್ಯತೆ ಇರುತ್ತದೆ. ಉಳಿದಂತೆ ಹೆಚ್ಚಿನವರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇನ್ನೂ ಹಲವರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗುವುದೆಂದು ಐಟಿ-ಬಿಟಿ ಕಂಪನಿ ಮುಖ್ಯಸ್ಥರು ಆಶ್ವಾಸನೆ ನೀಡಿದ್ದಾರೆ ಎಂದರು.
ಕರೊನಾ ಸೋಂಕಿತರು ಹಾಗೂ ಪ್ರತ್ಯೇಕ ನಿಗಾದಲ್ಲಿ ಇರುವವರ ಮೇಲೆ ನಿಗಾವಹಿಸುವ ಜತೆಗೆ ಅಗತ್ಯ ಸೌಲಭ್ಯ ಒದಗಿಸಲು ಅಭಿವೃದ್ಧಿ ಪಡಿಸುವ ಆಪ್ ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸುತ್ತಿರುವ ಟೆಸ್ಟ್ ಕಿಟ್ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಡಿಸಿಎಂ ಹೇಳಿದರು. ಮನೆಯಲ್ಲಿ ಕೆಲಸ ಮಾಡುವ ವೇಳೆ ಬ್ರಾಡ್ಬ್ಯಾಂಡ್, ಇಂಟರ್ನೆಟ್, ವಿದ್ಯುತ್ ಸಮಸ್ಯೆ ಎದುರಾಗುತ್ತದೆ. ಜತೆಗೆ, ಬಹಳಷ್ಟು ಉದ್ಯೋಗಿಗಳು ಊಟದ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪಿಜಿಗಳಲ್ಲಿ ಸಮಸ್ಯೆ ಆಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ಸಂಬಂಧ ಬೆಸ್ಕಾಂ ಹಾಗೂ ಟೆಲಿಕಾಂ ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುವುದು. ಸಮಸ್ಯೆ ಬಗೆಹರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಸಿಎಂ ಈಗಾಗಲೇ 200 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದರು.
ಕರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸಣ್ಣ ಉದ್ದಿಮೆದಾರರು ಸಾಲದ ಕಂತು ಕಟ್ಟಲಾಗದೆ ಪರದಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. | ಕ್ರಿಸ್ ಗೋಪಾಲಕೃಷ್ಣನ್ ಐಟಿ-ಬಿಟಿ ವಿಷನ್ ಗ್ರೂಪ್ ಅಧ್ಯಕ್ಷ
ಜನತಾ ಕರ್ಫ್ಯೂ ಪಾಲಿಸಿ
ಎಲ್ಲಕ್ಕಿಂತ ಮುಖ್ಯವಾಗಿ ರೋಗ ನಿಯಂತ್ರಣಕ್ಕೆ ಜನರ ಸಹಕಾರ ಮುಖ್ಯ. ಭಾನುವಾರ ಜನತಾ ಕರ್ಫ್ಯೂ ಪಾಲಿಸಿ, ಸಮುದಾಯದ ಆರೋಗ್ಯ ಕಾಯ್ದುಕೊಳ್ಳಲು ಸಹಕರಿಸಿ ಎಂದು ಡಿಸಿಎಂ ಮನವಿ ಮಾಡಿದರು.
ಮತ್ತಷ್ಟು ಮಾಹಿತಿ
# ಕರೊನಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಆಪ್ಗಳ ಮೂಲಕ ಎಲ್ಲ ಭಾಷೆಗಳಲ್ಲಿ ಮಾಹಿತಿ ನೀಡಲು ಅಗತ್ಯ ಕ್ರಮ.
# ಸಹಾಯವಾಣಿ ಸಂಖ್ಯೆ 104ರ ಸಂಪರ್ಕ ಸುಗಮಗೊಳಿಸಲು ಐವಿಆರ್ಎಸ್ ನೆರವು ಪಡೆಯಲಾಗುವುದು. ಚಾಟ್ ಮೂಲಕವೂ ಮಾಹಿತಿ ಪಡೆಯಲು ಕ್ರಮ.
# ಟೆಲಿಮೆಡಿಸನ್ ತಂತ್ರಜ್ಞಾನದ ಮೂಲಕ ರಿಮೋಟ್ ಮೆಡಿಸನ್ ಸೇವೆ ಆರಂಭ.
ಸಾಂಕ್ರಾಮಿಕ ರೋಗಗಳ ತಡೆಗೆ ಪ್ರತ್ಯೇಕ ಆಸ್ಪತ್ರೆ ನಿಗದಿಪಡಿಸಿದರೆ, ಅದಕ್ಕೆ ಸಿಎಸ್ಆರ್ ನಿಧಿಯಿಂದ ಅಗತ್ಯ ನೆರವು ಒದಗಿಸಲಾಗುವುದು. | ಕಿರಣ್ ಮಜುಂದಾರ್ ಷಾ ಬಯೋಕಾನ್ ಮುಖ್ಯಸ್ಥೆ
ಜನತಾ ಕರ್ಫ್ಯೂ ಆದೇಶವಲ್ಲ ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ ಭಾನುವಾರದ ‘ಜನತಾ ಕರ್ಫ್ಯೂ’ ಆದೇಶವಲ್ಲ. ಎಲ್ಲರೂ ಸ್ವಯಂಪ್ರೇರಿತವಾಗಿ ಸಹಕರಿಸಬೇಕು. ಒತ್ತಾಯ ಮಾಡುವ ಅಗತ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ. ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರೊನಾ ಸೋಂಕು ಹರಡದಂತೆ ತಡೆಯಲು ಪ್ರಧಾನಿ ಜನತಾ ಕರ್ಪ್ಯೂ ಘೋಷಣೆ ಮಾಡಿದ್ದಾರೆ. ಆದರೆ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಈ ಜನತಾ ಕರ್ಫ್ಯೂ ಯಾವ ಉದ್ದೇಶಕ್ಕೆ ಮಾಡಿದ್ದಾರೆ ಎಂಬುದು ಎಲ್ಲರೂ ಅರಿತು ಸಹಕರಿಸಬೇಕು. ಮತ್ತೊಬ್ಬ ವ್ಯಕ್ತಿ ಹೇಳಿ ಮಾಡುವ ಕೆಲಸವಲ್ಲ ಎಂದರು. ದಿನದ 24 ಗಂಟೆ ಕೆಲಸ ಮಾಡುವ ಕಮಿಷನರ್ ಕಚೇರಿ ಭಾನುವಾರ ಬಂದ್ ಆಗಿರುತ್ತದೆ. ಕೇವಲ ಕಮಾಂಡ್ ಸೆಂಟರ್ ಮತ್ತು ಕಂಟ್ರೋಲ್ ರೂಂ ತೆರೆದಿರುತ್ತದೆ. ಎಲ್ಲ ಠಾಣೆಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ. ಸಣ್ಣಪುಟ್ಟ ತಕರಾರಿನ ದೂರಿನೊಂದಿಗೆ ಠಾಣೆಗೆ ಹೋಗಬೇಡಿ ಎಂದು ಭಾಸ್ಕರ್ ರಾವ್ ಮನವಿ ಮಾಡಿದರು.
ರೋಗ ಪತ್ತೆಗೆ ಟೆಸ್ಟ್ ಕಿಟ್ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಅವಲಂಬನೆ ಕಡಿಮೆ ಮಾಡಲು ಐಐಎಸ್ಸಿ ನೆರವಿನೊಂದಿಗೆ ದೇಶೀಯವಾಗಿ ಕಿಟ್ ಅಭಿವೃದ್ಧಿ ಪಡಿಸಲಾಗುತ್ತಿದ್ದು,10 ದಿನಗಳಲ್ಲಿ ಬಳಕೆಗೆ ಲಭ್ಯವಾಗಲಿದೆ. ಸದ್ಯ ಅದರ ಬೆಲೆ ದುಬಾರಿಯಾಗಿದ್ದು, ನಾವು ಅಭಿವೃದ್ಧಿಪಡಿಸಲಿರುವ ಕಿಟ್ನಲ್ಲಿ ಪರೀಕ್ಷಾ ವೆಚ್ಚ 800 ರೂ. ಆಗಬಹುದು. | ಡಾ. ಕೆ.ಎನ್. ಶ್ರೀಧರ್ ಶಂಕರ್ ಆಸ್ಪತ್ರೆ ಮುಖ್ಯಸ್ಥ
ಅರೆಸ್ಟ್ ಕರೊನಾ ಅಭಿಯಾನ ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಯುವಂತೆ ನಗರ ಪೊಲೀಸರು ಜನರಲ್ಲಿ ಜಾಗೃತಿ ಮೂಡಿಸಲು ಶುಕ್ರವಾರ ‘ಅರೆಸ್ಟ್ ಕರೊನಾ’ ವಿಶೇಷ ಅಭಿಯಾನ ಆರಂಭಿಸಿ ದ್ದಾರೆ. ಜನರಿಗೆ ಕರೊನಾ ಸೋಂಕಿನ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಸಂಚಾರ ಪೊಲೀಸರು, ತಮ್ಮ ಠಾಣಾ ವ್ಯಾಪ್ತಿಯ ಪ್ರಮುಖ ವೃತ್ತಗಳಲ್ಲಿ ವಾಹನಗಳನ್ನು ತಡೆದು ಕರೊನಾ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಇನ್ನೂ ಕೆಲವರು ವಿಡಿಯೋ, ಫೋಸ್ಟರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಕರಪತ್ರ ವಿತರಿಸುತ್ತಿದ್ದ ದೃಶ್ಯ ಕಂಡುಬಂತು.
ಉದ್ಯಮ್ ಲರ್ನಿಂಗ್ ಫೌಂಡೇಷನ್ನ ಮೆಕಿನ್ ಮಹೇಶ್ವರಿ ನೇತೃತ್ವದಲ್ಲಿ ಕರೊನಾ ಕುರಿತು ಜಾಗೃತಿ ಮತ್ತು ಮಾಹಿತಿಗಾಗಿ ಆಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಬಳಕೆಗೆ ಲಭ್ಯವಾಗುವ ನಿರೀಕ್ಷೆ ಇದೆ. ಸೋಂಕಿತರು ಹಾಗೂ ಸ್ವಯಂ ಕ್ವಾರಂಟೈನ್ಗೆ ಆಪ್ ನೆರವಾಗಲಿದೆ. ಆಪ್ ಬಳಸುವವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತದೆ. | ಪ್ರಶಾಂತ್ಪ್ರಕಾಶ್ಸ್ಟಾರ್ಟಪ್ ವಿಷನ್ ಗ್ರೂಪ್ ಅಧ್ಯಕ್ಷ ಸಾಂಕ್ರಾಮಿಕ ರೋಗ ಹರಡುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ವಿದೆ. ಕರೊನಾ ವಿರುದ್ಧ ಇಡೀ ವಿಶ್ವವೇ ಒಂದಾಗಿದೆ. ಜನತಾ ಕರ್ಫ್ಯೂ ಬಗ್ಗೆ ಟೀಕೆ, ಟಿಪ್ಪಣಿ ಬಿಟ್ಟು ಸಹಕರಿಸಿ. | ಭಾಸ್ಕರ್ರಾವ್ ಬೆಂಗಳೂರು ನಗರ ಕಮಿಷನರ್