ಆರೋಗ್ಯ ಸೇತು ಆ್ಯಪ್​ ಮೂಲಕ ಪತ್ತೆಯಾದ ಕರೊನಾ ಸೋಂಕು ಶಂಕಿತರು

Arogya setu 22 april 20
Published on

ಲಖನೌ: ಕೋವಿಡ್​ -19 ಹರಡುವಿಕೆ ನಿಯಂತ್ರಿಸುವಲ್ಲಿ ಸರ್ಕಾರ ಕೈಗೊಂಡ ಪ್ರಮುಖ ಉಪಕ್ರಮಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್​ ಕೂಡ ಒಂದು. ಮೂವರು ಕರೋನಾ ಸೋಂಕು ಶಂಕಿತರು ಈ ಆರೋಗ್ಯ ಸೇತು ಅಪ್ಲಿಕೇಷನ್​ನಲ್ಲಿ ಸ್ವಯಂ ಮಾಹಿತಿ ಹಂಚಿಕೊಂಡಿದ್ದು, ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಮೂವರು ಕೇಂದ್ರ ಸರ್ಕಾರದ ಅಪ್ಲಿಕೇಷನ್​ ಡೌನ್​ಲೋಡ್​ ಮಾಡಿಕೊಂಡಿದ್ದು, ಅವರು ಸ್ವಯಂ ಮೌಲ್ಯಮಾಪನಕ್ಕಾಗಿ ಪ್ರಶ್ನಾವಳಿಗಳನ್ನು ಭರ್ತಿ ಮಾಡಿದ್ದರು. ಇದು ಬಳಕೆದಾರರಿಗೆ ಸೋಂಕಿನ ಅಪಾಯದ ಮಟ್ಟವನ್ನು ತಿಳಿಸುತ್ತದೆ.
ಅವರ ಅಪಾಯದ ಮಟ್ಟ ಹೆಚ್ಚಿರುವುದರಿಂದ ಪರೀಕ್ಷೆಗಾಗಿ ಸಹಾಯವಾಣಿಯನ್ನು ಸಂಪರ್ಕಿಸಲು ಅಥವಾ ಮಾಹಿತಿಯನ್ನು ಆರೋಗ್ಯ ಸಚಿವಾಲಯಕ್ಕೆ ಕಳುಹಿಸಲು ಅವರಿಗೆ ಅಪ್ಲಿಕೇಷನ್​ ಮೂಲಕವೇ ಆಯ್ಕೆ ಮಾಡಲು ಅವಕಾಶವಿತ್ತು. ಅವರು ಆರೋಗ್ಯ ಸಚಿವಾಲಯಕ್ಕೆ ತಿಳಿಸಲು ನಿರ್ಧರಿಸಿದ್ದರು.

"ಸರ್ಕಾರದಿಂದ ಆ ಮೂರು ವ್ಯಕ್ತಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಪಡೆದ ನಂತರ ಪರೀಕ್ಷೆಗೆ ಕಳುಹಿಸಲಾದ ಮಾದರಿಗಳನ್ನು ಸಂಗ್ರಹಿಸಲು ನಾವು ನಮ್ಮ ಸಿಬ್ಬಂದಿಯನ್ನು ಕಳುಹಿಸಿದ್ದೇವೆ '' ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ.ನರೇಂದ್ರ ಅಗರ್​ವಾಲ್​ ತಿಳಿಸಿದ್ದಾರೆ.

ಜನರು ಈ ಆರೋಗ್ಯ ಸೇತು ಅಪ್ಲಿಕೇಷನ್​ ಡೌನ್​ಲೋಡ್​ ಮಾಡಿಕೊಂಡರೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಲು, ಪ್ರಕರಣಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ವರದಿ ಸಲ್ಲಿಸಲು ಸರ್ಕಾರಕ್ಕೆ ಹೆಚ್ಚಿನ ಸಹಾಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net