

ನವದೆಹಲಿ: ಕರೊನಾ ಸೋಂಕಿನ ವಿರುದ್ಧ ಹೋರಾಟಕ್ಕಾಗಿ ತುರ್ತಸ್ಥಿತಿ ಪರಿಹಾರ ನಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ಪ್ರಧಾನಮಂತ್ರಿ ನಾಗರಿಕರ ಸಹಾಯ ಮತ್ತು ಪರಿಹಾರ ತುರ್ತಸ್ಥಿತಿ (ಪಿಎಂ-ಕೇರ್ಸ್) ನಿಧಿಯು ದೂರಗಾಮಿ ಪರಿಣಾಮದ್ದಾಗಿದ್ದು, ಇದರಿಂದ ಸ್ವಾಸ್ಥ್ಯ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಕೋವಿಡ್-19 ವಿರುದ್ಧ ಸಮರಕ್ಕೆ ಎಲ್ಲ ವರ್ಗ ಮತ್ತು ವಲಯದ ಜನರು ದೇಣಿಗೆ ನೀಡಲು ಮುಂದಾಗಿದ್ದಾರೆ, ಹೀಗಾಗಿ ಈ ನಿಧಿಯನ್ನು ಸ್ಥಾಪಿಸಲಾಗಿದೆ. ಭಾರತೀಯರು ಈ ನಿಧಿಗೆ ಉದಾರವಾಗಿ ದೇಣಿಗೆ ನೀಡಬೇಕು. ಈ ನಿಧಿ ಈಗ ಮಾತ್ರವಲ್ಲ ಭವಿಷ್ಯದಲ್ಲಿ ಇಂಥ ಸಂಕಷ್ಟ ಎದುರಾದರೆ ಸಂತ್ರಸ್ತರಿಗೆ ನೆರವು ಒದಗಿಸುತ್ತದೆ ಎಂದು ಹೇಳಿದ್ದಾರೆ.
ಪಿಎಂ-ಕೇರ್ಸ್ ನಿಧಿಗೆ ಪ್ರಧಾನಿಯೇ ಪದನಿಮಿತ್ತ ಅಧ್ಯಕ್ಷರು, ರಕ್ಷಣೆ (ರಾಜನಾಥ್ ಸಿಂಗ್), ಗೃಹ (ಅಮಿತ್ ಷಾ), ಹಣಕಾಸು (ನಿರ್ಮಲಾ ಸೀತಾರಾಮನ್) ಸಚಿವರು ಪದನಿಮಿತ್ತ ಸದಸ್ಯರಾಗುತ್ತಾರೆಂದು ಪ್ರಧಾನಿ ಕಾರ್ಯಾಲಯ ಪ್ರಕಟಣೆ ತಿಳಿಸಿದೆ. ಪಿಎಂ-ಕೇರ್ಸ್ ನಿಧಿಗೆ ಯುಪಿಐ, ಆರ್ಟಿಜಿಎಸ್,ನೆಫ್ಟ್ ಮೂಲಕವೂ ಪಾವತಿ ಮಾಡಬಹುದು. ಈ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯ 80(ಜಿ) ಸೆಕ್ಷನ್ ಅನ್ವಯ ತೆರಿಗೆ ವಿನಾಯಿತಿ ಇದೆ. ಹೆಚ್ಚಿನ ಮಾಹಿತಿಗೆ www.pmindia.gov.in ವೆಬ್ಸೈಟ್ಗೆ ಭೇಟಿ ನೀಡಬಹುದು.
ಖಾತೆ ಹೆಸರು: pm cares
ಖಾತೆ ಸಂಖ್ಯೆ: 2121PM20202
ಐಎಫ್ಎಸ್ಸಿ ಕೋಡ್: SBIN0000691
ಬ್ಯಾಂಕ್ ಹೆಸರು: ಎಸ್ಬಿಐ, ನವದೆಹಲಿ ಮುಖ್ಯಶಾಖೆ
ಯುಪಿಐ ಐಡಿ: pmcares@sbi
ಬಿಜೆಪಿ ಶಾಸಕರು, ಸಂಸದರ ದೇಣಿಗೆ
ಪ್ರಧಾನಿ ತುರ್ತು ನಿಧಿ ಘೋಷಣೆ ಮಾಡಿದ ಬೆನ್ನಿಗೆ ದೇಣಿಗೆ ಮಹಾಪೂರವೇ ಹರಿದು ಬರುತ್ತಿದೆ. ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ -ಠಿ; 500 ಕೋಟಿ ದೇಣಿಗೆ ಘೋಷಿಸಿದ್ದಾರೆ. ಬಿಜೆಪಿಯ ಎಲ್ಲ ಸಂಸದರು ಮತ್ತು ಶಾಸಕರು ತಮ್ಮ ಒಂದು ತಿಂಗಳ ವೇತನವನ್ನು ದೇಣಿಗೆ ನೀಡಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಿಸಿದ್ದಾರೆ. ಇದರ ಹೊರತಾಗಿ ಪಕ್ಷದ ಪ್ರತಿ ಸಂಸದರು ಕ್ಷೇತ್ರಾಭಿವೃದ್ಧಿಗೆ ನೀಡುವ ವಾರ್ಷಿಕ ಅನುದಾನದಲ್ಲಿ (ಎಂಪಿಎಲ್ಎಡಿ) -ಠಿ; 1 ಕೋಟಿಯನ್ನು ನೀಡಲಿದ್ದಾರೆ ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ. ಲೋಕಸಭೆಯಲ್ಲಿ 303, ರಾಜ್ಯಸಭೆಯಲ್ಲಿ 83 ಸದಸ್ಯರನ್ನು ಬಿಜೆಪಿ ಹೊಂದಿದೆ.