

ದೇಶದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ದಾಖಲೆಯ ಏರಿಕೆ ಕಾಣುತ್ತಿರುವುದು ಜನರಲ್ಲಿ ಆತಂಕ ಮೂಡಿಸಿರುವ ಬೆನ್ನಲ್ಲೇ ಔಷಧಗಳ ಸಂಶೋಧನೆ ಮತ್ತು ಕ್ಲಿನಿಕಲ್ ಟ್ರಯಲ್ ಚುರುಕುಗೊಂಡಿರುವುದು ತುಸು ಭರವಸೆ ಮೂಡಿಸಿದೆ. ಆಕ್ಸ್ ಫರ್ಡ್ ಸಹಯೋಗದಲ್ಲಿ ಸೇರಮ್ ಇನ್ಸ್ಟಿಟ್ಯೂಟ್ ಈಗಾಗಲೇ ಔಷಧ ಉತ್ಪಾದನೆ ಆರಂಭಿಸಿದೆ. ಅಂತಿಮ ಹಂತದ ಪರೀಕ್ಷೆ ಮಾತ್ರ ಬಾಕಿ ಇದೆ. ಈ ನಡುವೆ ಜಾಗತಿಕ ಸಾವಿನ ಪಟ್ಟಿಯಲ್ಲಿ ಭಾರತ 6ನೇ ಸ್ಥಾನಕ್ಕೆ ಏರಿದೆ.
ಆಕ್ಸ್ಫರ್ಡ್ನ ಕರೊನಾ ಔಷಧ ಉತ್ಪಾದನೆ ಆರಂಭ
ಆಕ್ಸ್ಫರ್ಡ್ ಸಹಯೋಗದಲ್ಲಿ ಸೇರಮ್ ಇನ್ಸ್ಟಿಟ್ಯೂಟ್ ಸಂಶೋಧಿಸಿರುವ ಕರೊನಾ ಔಷಧದ ಉತ್ಪಾದನೆ ಭಾರತದಲ್ಲಿ ಆರಂಭವಾಗಿದೆ. ಈ ಔಷಧಕ್ಕೆ ಕೋವಿಶೀಲ್ಡ್ ಎಂದು ಹೆಸರಿಡಲಾಗಿದೆ. ಈಗಾಗಲೇ ಎರಡು ಹಂತದ ಕ್ಲಿನಿಕಲ್ ಟ್ರಯಲ್ನಲ್ಲಿ ಉತ್ತಮ ಫಲಿತಾಂಶ ಬಂದಿದೆ. ಈ ಔಷಧವನ್ನು ಸದ್ಯದಲ್ಲೇ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಒಳಪಡಿಸಲಾಗುವುದು. ಭಾರತದಲ್ಲಿಯೇ ಮೂರನೇ ಹಂತದ ಟ್ರಯಲ್ ನಡೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಪ್ರಯೋಗದ ಜತೆ ಜತೆಗೆ ಔಷಧ ಉತ್ಪಾದನೆಯನ್ನೂ ಆರಂಭಿಸಲಾಗಿದ್ದು, ಪ್ರತಿ ದಿನ 20 ಲಕ್ಷದಿಂದ 30 ಲಕ್ಷ ಡೋಸೇಜ್ ತಯಾರಿಸಲಾಗುತ್ತಿದೆ. ಅಸ್ತ್ರಾಜೆನೆಕಾ ಮತ್ತು ಸೇರಂ ಇನ್ಸ್ಟಿಟ್ಯೂಟ್ ಜಂಟಿಯಾಗಿ ಔಷಧ ಉತ್ಪಾದನೆ ಮಾಡುತ್ತಿದ್ದು ಆಗಸ್ಟ್ ಅಂತ್ಯದೊಳಗೆ 1 ಬಿಲಿಯನ್ ಡೋಸೇಜ್ ತಯಾರಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಅರ್ಧದಷ್ಟು ಡೋಸೇಜ್ನ್ನು, 1 ಸಾವಿರ ರೂಪಾಯಿ ಬೆಲೆಯಂತೆ ಭಾರತ ಸರ್ಕಾರಕ್ಕೆ ನೀಡಲಾಗುವುದು. ಉಳಿದ ಔಷಧವನ್ನು ಆರ್ಥಿಕವಾಗಿ ಹಿಂದುಳಿದ ದೇಶಗಳಿಗೆ ನೀಡಲಾಗುವುದು ಎಂದು ಸೇರಂ ಇನ್ಸ್ಟಿಟ್ಯೂಟ್ನ ತಿಳಿಸಿದೆ. ಚೆನ್ನೈನಲ್ಲಿ ಕೊವ್ಯಾಕ್ಸಿನ್ ಟ್ರಯಲ್ ಗುರುವಾರ ಆರಂಭವಾಗಿದೆ.
ತಮಿಳುನಾಡು ರಾಜಭವನದ 84 ಸಿಬ್ಬಂದಿಗೆ ಕರೊನಾ
ತಮಿಳುನಾಡಿನ ರಾಜಭವನದ 84 ಸಿಬ್ಬಂದಿಗೆ ಕರೊನಾ ಸೋಂಕು ದೃಢವಾಗಿದೆ. ಇತ್ತೀಚೆಗೆ ಕೆಲ ಸಿಬ್ಬಂದಿಯಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು, 147 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ ಭದ್ರತಾ ಸಿಬ್ಬಂದಿ ಮತ್ತು ಕೆಲ ಅಗ್ನಿಶಾಮಕ ಸಿಬ್ಬಂದಿ ಸೇರಿ ಒಟ್ಟು 84 ಜನರಿಗೆ ಸೋಂಕು ದೃಢಪಟ್ಟಿದೆ. ಇವರೆಲ್ಲರೂ ಭವನದ ಹೊರಾಂಗಣದಲ್ಲಿಯೇ ಕೆಲಸ ಮಾಡುತ್ತಿದ್ದರು. ಇವರು ಅಧಿಕಾರಿಯೊಂದಿಗೆ ಅಥವಾ ರಾಜ್ಯಪಾಲರಾದ ಬನ್ವಾರಿಲಾಲ್ ಪುರೋಹಿತ್ರೊಂದಿಗೆ ಸಂಪರ್ಕ ಹೊಂದಿರಲಿಲ್ಲ ಎಂದು ರಾಜಭವನ ಪ್ರಕಟಣೆಯಲ್ಲಿ ತಿಳಿಸಿದೆ. ಸೋಂಕಿತರನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ 19 ಶಾಸಕರಲ್ಲೂ ಕರೊನಾ ದೃಢಪಟ್ಟಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಾವಿನ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಭಾರತ
ಭಾರತದಲ್ಲಿ ಕರೊನಾ ಸಾವಿನ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಇದೀಗ ಮೃತರ ಪಟ್ಟಿಯಲ್ಲಿ ಭಾರತ 6ನೇ ಸ್ಥಾನಕ್ಕೇರಿದೆ. ಈವರೆಗೆ 6ನೇ ಸ್ಥಾನದಲ್ಲಿದ್ದ ಫ್ರಾನ್ಸ್ 7ನೇ ಸ್ಥಾನಕ್ಕೆ ಇಳಿದಿದೆ.
50ಕ್ಕೂ ಹೆಚ್ಚು ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ತಿಂಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಸಭೆ ನಡೆಸಿ, ದೇಶದ ಆರ್ಥಿಕ ಕ್ಷೇತ್ರದ ಸುಧಾರಣೆ ಮತ್ತು ಕೋವಿಡ್-19 ಸನ್ನಿವೇಶ ಎದುರಿಸಲು ಅಗತ್ಯವಾದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಪ್ರತಿದಿನ ಹಲವು ಆನ್ಲೈನ್ (ವರ್ಚುವಲ್) ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿ ದಿನ ಸರಾಸರಿ ಹತ್ತು ಅಧಿಕಾರಿಗಳು, ಸಚಿವರ ಜತೆ ಪ್ರಧಾನಿ ಸಭೆ ನಡೆಸುತ್ತಿದ್ದಾರೆ.
ಮಾಸ್ಕ್ ಹಾಕದೆ ಸಂಚರಿಸುವವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಜಾರ್ಖಂಡ್ ಸರ್ಕಾರ ಘೊಷಿಸಿದೆ. ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡುವವರಿಗೆ 2 ವರ್ಷಗಳ ಕಾಲ ಜೈಲು ಶಿಕ್ಷೆ ನೀಡುವುದಾಗಿಯೂ ತಿಳಿಸಲಾಗಿದೆ. ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷ ಶಾಸಕ ಶೇಶಯ್ಯ ಚಕ್ರಬರ್ತಿ ಅವರಿಗೆ ಕರೊನಾ ಸೋಂಕು ದೃಢವಾಗಿದ್ದರು, ಸಾರ್ವಜನಿಕ ಸಭೆ ನಡೆಸಿರುವುದು ವಿವಾದಕ್ಕೆ ಕಾರಣವಾಗಿದೆ. ಕರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಯೋಗ ಕುರಿತಾದ ಪೋ›ಟೋಕಾಲ್ ರಚಿಸಲು ಆಯುಷ್ ಸಚಿವಾಲಯಕ್ಕೆ ಆದೇಶಿಸಬೇಕು ಎಂದು ಕೋರಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.