

ವಾಷಿಂಗ್ಟನ್: ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟು ಸೃಷ್ಟಿಸಿರುವ ಮಹಾಮಾರಿ ಕರೊನಾ ವೈರಸ್ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಗಾಳಿಯಲ್ಲಿ ಹರಡಿ ಗಂಟೆಗಳ ಕಾಲ ಸಾಂಕ್ರಮಿಕವಾಗೇ ಉಳಿಯಲಿದೆ ಎಂದು ನೂತನ ಅಧ್ಯಯನವೊಂದು ತಿಳಿಸಿದೆ.
ಯುಎಸ್ ವಿಜ್ಞಾನಿಗಳು ವೈರಸ್ ಕುರಿತು ಉನ್ನತ ಮಟ್ಟದ ಸಂಶೋಧನೆ ನಡೆಸಿದ್ದು, ಕೋವಿಡ್-19 ರೋಗಿಗಳು ಹೊರ ನಡೆದರೂ ಸಹ ಕೊಠಡಿಯ ಗಾಳಿಯಲ್ಲಿ ಗಂಟೆಗಳ ಕಾಲ ವೈರಸ್ ಸಾಂಕ್ರಮಿಕವಾಗೇ ಉಳಿದುಕೊಳ್ಳುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ವೈರಸ್ ಜಾಡನ್ನು ಮತ್ತಷ್ಟು ಪತ್ತೆಹಚ್ಚಲು ಪ್ರಯತ್ನಿಸಿದಾಗ ರೋಗಿಗಳ ಕೊಠಡಿಯ ಹೊರಭಾಗದ ಕಾರಿಡಾರ್ನಲ್ಲೂ ಸಹ ಕರೊನಾ ವೈರಸ್ ಕಂಡುಬಂದಿರುವ ಭಯಾನಕ ಮಾಹಿತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.
ನೆಬ್ರಸ್ಕಾ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನ ಹಿಂದಿನ ರುವಾರಿಗಳಾಗಿದ್ದಾರೆ. ಹೆಚ್ಚು ಪರಿಣಾಮಕಾರಿಯುತ ಸಾಂಕ್ರಮಿಕ ರೋಗವು ಕೆಮ್ಮು ಅಥವಾ ಸೀನುವಿಕೆಯ ಹನಿಗಳಿಂದ ಮಾತ್ರ ಹರಡುವುದಿಲ್ಲ. ಗಾಳಿಯ ಮೂಲಕವು ಹರಡುತ್ತದೆ ಎಂದು ಹೇಳಿದ್ದು, ಆರೋಗ್ಯ ಸಿಬ್ಬಂದಿ ಖಂಡಿತವಾಗಿ ರಕ್ಷಣಾತ್ಮಕ ಉಡುಪುಗಳನ್ನು ಧರಿಸಬೇಕೆಂಬುದು ಅಧ್ಯಯನ ಮಹತ್ವವಾಗಿದೆ.
ಅಧ್ಯಯನಕ್ಕಾಗಿ ಚಿಕಿತ್ಸಾ ವೇಳೆ ಪ್ರತ್ಯೇಕವಾಗಿ ಇಡಲಾಗಿದ್ದ 11 ರೋಗಿಗಳ ಕೊಠಡಿಯ ಸ್ಯಾಂಪಲ್ ಅನ್ನು ಸಂಶೋಧಕರು ತೆಗೆದುಕೊಂಡು ಅಧ್ಯಯನ ವರದಿಯನ್ನು ತಯಾರಿಸಿದ್ದು, ಕೊಠಡಿಯ ಒಳಗೆ ಮತ್ತು ಹೊರಭಾಗದ ಕಾರಿಡಾರ್ನಲ್ಲಿ ವೈರಲ್ ಕಣಗಳು ಪತ್ತೆಯಾಗಿವೆ. ಸೋಂಕಿತ ವ್ಯಕ್ತಿಗೆ ತುಂಬಾ ಹತ್ತಿರವಾಗಿದ್ದರೂ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಹೀಗಾಗಿ ವೈಯಕ್ತಿಕ ರಕ್ಷಣಾ ಸಾಧನಗಳನ್ನು ಬಳಸುವುದು ಉತ್ತಮ ಎಂತಲೂ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)