

ವಾಷಿಂಗ್ಟನ್: ಕರೊನಾ ವೈರಸ್ ಹರಡುವ ಮೂಲಕ ತನ್ನ ದೇಶದಲ್ಲಿ ಸಹಸ್ರಾರು ಮಂದಿಯನ್ನು ಬಲಿ ಕೊಟ್ಟಿದ್ದಲ್ಲದೇ, ಇಡೀ ಜಗತ್ತನ್ನೇ ಸಂಕಷ್ಟಕ್ಕೆ ತಂದಿಟ್ಟಿರುವ ಚೀನಾ, ಇನ್ನೂ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಕರೊನಾ ವೈರಸ್ ಹರಡಲು ಮೂಲ ಕಾರಣವೆಂದೇ ಬಿಂಬಿತವಾಗಿರುವ ವೆಟ್ ಮಾರ್ಕೆಟ್ ಅನ್ನು ಅದೀಗ ಪುನಃ ಆರಂಭಿಸಿದೆ. ಬಾವಲಿ, ಪ್ಯಾಂಗೋಲಿನ್, ಮೊಲ, ನಾಯಿ ಸೇರಿದಂತೆ ಎಲ್ಲಾ ಬಗೆಯ ಪಶು, ಪಕ್ಷಿ, ಕೀಟಗಳನ್ನು ಈ ಮಾರುಕಟ್ಟೆಯಲ್ಲೀಗ ಮಾರಾಟ ಮಾಡಲಾಗುತ್ತಿದೆ.
ಚೀನಾದ ಈ ಕೃತ್ಯ ಮತ್ತೊಮ್ಮೆ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇದೊಂದು ಅತ್ಯಂತ ಅಪಾಯಕಾರಿ ನಿರ್ಧಾರ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಕರೊನಾ ವೈರಸ್ ಮೊದಲು ಚೀನಾದ ಇದೇ ವೆಟ್ ಮಾರುಕಟ್ಟೆಯಲ್ಲಿನ ಬಾವಲಿಯಲ್ಲಿ ಕಾಣಿಸಿಕೊಂಡು, ಅದು ಇನ್ನೊಂದು ಪ್ರಾಣಿಗೆ ತಗುಲಿ ಅಲ್ಲಿಂದ ಮನುಷ್ಯರಿಗೆ ಹರಡಿದೆ ಎಂದೇ ಇಲ್ಲಿಯವರೆಗೆ ನಂಬಲಾಗಿದೆ.
ವೆಟ್ ಮಾರ್ಕೆಟ್ನಿಂದಾಗಿ 55 ವರ್ಷದ ವ್ಯಕ್ತಿಯೊಬ್ಬನಿಗೆ ಮೊದಲ ಬಾರಿಗೆ ಈ ಸೋಂಕು ತಗುಲಿ ಅಲ್ಲಿಂದ ವೈರಸ್ ಇಡೀ ಜಗತ್ತಿಗೆ ವ್ಯಾಪಿಸಿದೆ ಎಂಬ ಬಗ್ಗೆ ಈಗಾಗಲೇ ನಡೆದಿರುವ ಹಲವಾರು ಅಧ್ಯಯನಗಳು ಕೂಡ ಹೇಳಿವೆ.
ವೈರಸ್ ತಗಲುವ ಪೂರ್ವದಲ್ಲಿ ವೆಟ್ ಮಾರ್ಕೆಟ್ ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತೋ ಈಗಲೂ ಏನೂ ಬದಲಾವಣೆ ಆಗಿಲ್ಲ ಎಂದು ಹೇಳಲಾಗುತ್ತಿದೆ. ಈ ಮಾರುಕಟ್ಟೆಯಲ್ಲಿನ ಭಯಾನಕ ದೃಶ್ಯಗಳನ್ನು ಯಾರೂ ಸೆರೆ ಹಿಡಿಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ!
ಯಾವುದೇ ಕಾರಣಕ್ಕೂ ವೆಟ್ ಮಾರುಕಟ್ಟೆಯನ್ನು ಆರಂಭಿಸಬಾರದು ಎಂದು ಹಲವಾರು ವಿಜ್ಞಾನಿಗಳು, ವೈದ್ಯಕೀಯ ತಜ್ಞರು ಹಾಗೂ ಪ್ರಾಣಿ ಹಕ್ಕುಗಳ ಹೋರಾಟಗಾರರು ಈಗಾಗಲೇ ಹಲವಾರು ಬಾರಿ ಎಚ್ಚರಿಕೆ ಕೊಟ್ಟಿದ್ದರೂ, ಚೀನಾ ಸರ್ಕಾರ ಅದನ್ನು ಕಿವಿಯ ಮೇಲೆ ಹಾಕಿಕೊಂಡಿಲ್ಲ.