

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿಗೆ ಎಂಟನೇ ಬಲಿಯಾಗಿದೆ. ಕಲಬುರಗಿಯ 55 ವರ್ಷದ ಹಾಗೂ ಬೆಂಗಳೂರಿನ 65 ವರ್ಷದ ವೃದ್ಧರಿಬ್ಬರು ಸೋಮವಾರ ಸಾವನ್ನಪ್ಪಿದ್ದಾರೆ. ಒಟ್ಟಾರೆ ಕಲಬುರಗಿಯಲ್ಲೇ ಒಟ್ಟು ಮೂವರು ಮೃತಪಟ್ಟಂತಾಗಿದೆ. ಮತ್ತೊಂದೆಡೆ ಸೋಂಕು ಪೀಡಿತರ ಸಂಖ್ಯೆ 250ರ ಸಮೀಪ (249) ಬಂದು ನಿಂತಿದ್ದು, ಸೋಮವಾರ ಒಂದೇ ದಿನ 17 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಹೊಸ ಸೋಂಕಿತರಲ್ಲಿ ತಬ್ಲಿಘಿಗಳ ಸಂಪರ್ಕ ಹೊಂದಿರುವವರೇ ಹೆಚ್ಚಾಗಿದ್ದಾರೆ. ಸೋಮವಾರ ಧಾರವಾಡದಲ್ಲಿ 4, ಮಂಡ್ಯ 3, ಬೆಳಗಾವಿ 3,ಬೀದರ್ 2, ಬಾಗಲಕೋಟೆ, ಬೆಂ.ಗ್ರಾಮಾಂತರ 1, ಬೆಂಗಳೂರು ನಗರದಲ್ಲಿ 2, ಕಲಬುರಗಿಯಲ್ಲಿ 1 ಪ್ರಕರಣ ದೃಢಪಟ್ಟಿವೆ.
ರಾಜಧಾನಿಯಲ್ಲಿ 2ನೇ ಸಾವು
ಭಾನುವಾರ ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಆರೋಗ್ಯ ಆಸ್ಪತ್ರೆಗೆ ದಾಖಲಾಗಿದ್ದ 65 ವರ್ಷದ ವ್ಯಕ್ತಿ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಇವರಿಗೆ ಕರೊನಾ ಸೋಂಕಿರುವುದು ದೃಢಪಟ್ಟಿದೆ. ಹೆಚ್ಚಿನ ಮಾಹಿತಿ ಮಂಗಳ ವಾರ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕಿತರಲ್ಲಿ 8, 14, 16 ವರ್ಷದ ಮಕ್ಕಳು ಸೇರಿದ್ದಾರೆ. ಒಟ್ಟು 247 ಸೋಂಕಿತರ ಪೈಕಿ ಈವರೆಗೂ 7 ಮಂದಿ ಮೃತಪಟ್ಟಿದ್ದು, 60 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದ 180 ಮಂದಿ ರಾಜ್ಯಾದ್ಯಂತ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾದಲ್ಲಿದ್ದಾರೆ. ಇವರಲ್ಲಿ ನಾಲ್ವರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಲ್ಲಣ ತಂದ 3ನೇ ಮರಣ
55 ವರ್ಷದ ವ್ಯಕ್ತಿಯ ಸಾವಿನೊಂದಿಗೆ ಕಲಬುರಗಿಯಲ್ಲಿ ಕರೊನಾಗೆ ಬಲಿಯಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಬಟ್ಟೆ ವ್ಯಾಪಾರಿಯಾಗಿದ್ದ 55 ವರ್ಷದ ವ್ಯಕ್ತಿ (ಪಿ205) ಇಎಸ್ಐ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ. ಶರತ್ ಖಚಿತಪಡಿಸಿದ್ದಾರೆ. ಮೋಮಿನಪುರ ನಿವಾಸಿಯಾಗಿದ್ದ ಮೃತರು ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದವನ ಜತೆ ನೇರ ಸಂಪರ್ಕ ಹೊಂದಿದ್ದರಿಂದ ಕರೊನಾ ಸೋಂಕು ತಗುಲಿತ್ತು. ಈ ಮಧ್ಯೆ ಸೋಂಕಿತ ವಾಡಿಯ ಎರಡು ವರ್ಷದ ಮಗುವಿನ (ಪಿ 227) ಕುಟುಂಬ ಸದಸ್ಯರಿಗೂ ತಬ್ಲಿಘಿ ಸಭೆಯಲ್ಲಿ ಪಾಲ್ಗೊಂಡು ಬಂದವರ ಸಂಪರ್ಕ ಇರುವುದನ್ನು ಜಿಲ್ಲಾಧಿಕಾರಿಗಳು ದೃಢಪಡಿಸಿದ್ದಾರೆ. ಮಗುವಿನ ತಂದೆ ವಾಡಿ ರೈಲ್ವೆ ನಿಲ್ದಾಣದಲ್ಲಿ ಬಿಸ್ಕೆಟ್ ಸೇರಿ ಚಿಕ್ಕಪುಟ್ಟ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಉಪ ಜೀವನ ಸಾಗಿಸುತ್ತಿದ್ದ.
ಈತನಿಗೆ ಗೊತ್ತಿಲ್ಲದಂತೆ ತಬ್ಲಿಘಿ ಸಂಘಟನೆ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಬೇಕು ಎಂಬುದನ್ನು ಮೇಲ್ನೋಟಕ್ಕೆ ಕಂಡುಕೊಳ್ಳಲಾಗಿದೆ. ಸೋಂಕಿತರ ಸಂಖ್ಯೆ 13 ಆಗಿದ್ದು, ಈ ಪೈಕಿ ಮೂವರು ಮೃತಪಟ್ಟಿದ್ದರೆ ಇಬ್ಬರು ಗುಣಮುಖರಾಗಿದ್ದಾರೆ. ಎಂಟು ಜನ ಇಎಸ್ಐ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 395 ಶಂಕಿತರ ರಕ್ತ, ಕಫ ಟೆಸ್ಟ್ಗೆ ಕಳುಹಿಸಲಾಗಿದೆ. ಈ ಪೈಕಿ 294 ಜನರ ರಿಪೋರ್ಟ್ ನೆಗೆಟಿವ್ ಬಂದಿದೆ. ತಾಂತ್ರಿಕ ಕಾರಣಗಳಿಂದ ಇಬ್ಬರ ಲ್ಯಾಬ್ ಟೆಸ್ಟ್ ಆಗಿಲ್ಲ. 86 ಜನರ ಪರೀಕ್ಷಾ ವರದಿಗೆ ಕಾಯಲಾಗುತ್ತಿದೆ. ಒಟ್ಟು ಎಂಟು ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾಗಿದ್ದು, ಈ ಝೋನ್ಗಳಲ್ಲಿ 21506 ಮನೆಗಳ ಸಮೀಕ್ಷೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಪ್ರೖೆಮರಿ ಕಾಂಟ್ಯಾಕ್ಟ್ಸ್ 245, ಸೆಕೆಂಡರಿ ಕಾಂಟ್ಯಾಕ್ಟ್ಸ್ 1000, ವಿದೇಶದಿಂದ ಬಂದ 488 ಜನರನ್ನು ಗುರುತಿಸಲಾಗಿದ್ದು, ಹೋಂ ಕ್ವಾರಂಟೈನ್ನಲ್ಲಿ 734 ಜನರನ್ನು ಇರಿಸಲಾಗಿದೆ. ಈವರೆಗೆ ಹೋಂ ಕ್ವಾರಂಟೈನ್ನಲ್ಲಿ 28 ದಿನ ಮುಗಿಸಿದ 751 ಹಾಗೂ 14 ದಿನ ಪೂರ್ಣಗೊಳಿಸಿದ 217 ಜನರನ್ನು ಮುಕ್ತಗೊಳಿಸಲಾಗಿದೆ. 85 ಜನರನ್ನು ಇಎಸ್ಐಸಿ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸ ಪ್ರಕರಣಗಳು
ರೋಗಿ 233 - ಹುಬ್ಬಳ್ಳಿಯ ನಿವಾಸಿ 5 ವರ್ಷದ ಬಾಲಕನಿಗೆ ರೋಗಿ 194 ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 234 - ಹುಬ್ಬಳ್ಳಿಯ ಮೂರುವರೆ ವರ್ಷದ ಗಂಡು ಮಗುವಿಗೆ ರೋಗಿ 194 ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 235 - ಹುಬ್ಬಳ್ಳಿಯ 7 ವರ್ಷದ ಬಾಲಕಿಗೆ ರೋಗಿ 194 ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 236 - ಹುಬ್ಬಳ್ಳಿಯ 37 ವರ್ಷದ ವ್ಯಕ್ತಿಗೆ ರೋಗಿ 194 ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 237 - ಮಂಡ್ಯ ಜಿಲ್ಲೆಯ ಮಳವಳ್ಳಿ ನಿವಾಸಿ 60 ವರ್ಷದ ವೃದ್ಧೆಗೆ ಮಗನಿಂದ (ರೋಗಿ 179) ಸೋಂಕು ಹರಡಿದೆ.
ರೋಗಿ 238 - ಮಳವಳ್ಳಿಯ 8 ವರ್ಷದ ಬಾಲಕಿಗೆ ತಂದೆಯಿಂದ (ರೋಗಿ 179) ಸೋಂಕು ತಗುಲಿದೆ.
ರೋಗಿ 239 - ಮಳವಳ್ಳಿಯ 18 ವರ್ಷದ ಯುವಕನಿಗೆ ಸೋದರ ಮಾವನಿಂದ (ರೋಗಿ 179) ಸೋಂಕು ಹರಡಿದೆ.
ರೋಗಿ 240 - ಬಾಗಲಕೋಟೆಯ ಮುಧೋಳ ನಿವಾಸಿ 27 ವರ್ಷದ ಯುವಕನಿಗೆ ರೋಗಿ 164 ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 241 - ಬೀದರ್ನ 16 ವರ್ಷದ ಬಾಲಕಿಗೆ ಸೋದರತ್ತೆಯಿಂದ (ರೋಗಿ 211) ಸೋಂಕು ಹರಡಿದೆ.
ರೋಗಿ 242 - ಬೀದರ್ನ 35 ವರ್ಷದ ಮಹಿಳೆಗೆ ತಾಯಿಯಿಂದ (ರೋಗಿ 211) ಸೋಂಕು ಹರಡಿದೆ.
ರೋಗಿ 243 - ಬೆಳಗಾವಿಯ ರಾಯಭಾಗದ 20 ವರ್ಷದ ಯುವಕನಿಗೆ ರೋಗಿ 149 ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 244 - ರಾಯಭಾಗದ 14 ವರ್ಷದ ಬಾಲಕನಿಗೆ ರೋಗಿ 149 ಸಂಪರ್ಕದಿಂದ ಸೋಂಕು ಹರಡಿದೆ.
ರೋಗಿ 245 - ರಾಯಭಾಗದ 45 ವರ್ಷದ ವ್ಯಕ್ತಿಗೆ ರೋಗಿ 149 ಸಂಪರ್ಕದಿಂದ ಸೋಂಕು ತಗುಲಿದೆ.
ರೋಗಿ 246 - ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಿವಾಸಿ 39 ವರ್ಷದ ವ್ಯಕ್ತಿ ದೆಹಲಿ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿದ್ದಾರೆ.
ರೋಗಿ 247 - ಬೆಂಗಳೂರು ನಗರ ನಿವಾಸಿ 62 ವರ್ಷದ ವೃದ್ಧ ಉಸಿರಾಟದ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದೆ.
ನವದೆಹಲಿ: ಕರೊನಾ ಮಹಾ ಮಾರಿಗೆ ಕಳೆದ 24 ತಾಸಿನಲ್ಲಿ ದೇಶಾದ್ಯಂತ 31 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 358ಕ್ಕೆ ಏರಿಕೆಯಾಗಿದೆ. ಹೊಸದಾಗಿ 1249 ಪ್ರಕರಣಗಳು ವರದಿಯಾದ ಪರಿಣಾಮ ಸೋಂಕಿತರ ಸಂಖ್ಯೆ 10,453ಕ್ಕೆ ಏರಿದೆ. ಪ್ರಸ್ತುತ 8,914 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 1,181 ಜನರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಮಾಣ 2 ಸಾವಿರದ ಗಡಿ ದಾಟಿದ್ದು, ಮೃತರ ಸಂಖ್ಯೆ 160ಕ್ಕೆ ಏರಿದೆ. ತಮಿಳುನಾಡಿನಲ್ಲಿ ಹೊಸದಾಗಿ 98 ಪ್ರಕರಣಗಳು ವರದಿಯಾಗಿದ್ದು, ಸೋಂಕಿ ತರ ಸಂಖ್ಯೆ 1,173ಕ್ಕೆ ಏರಿಕೆಯಾಗಿದೆ.