

ನವದೆಹಲಿ: ಮಾರಣಾಂತಿಕ ಕೊರೊನಾ ವೈರಸ್ ಚೀನಾದಲ್ಲಿ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, ಮತ್ತಷ್ಟು ಸಾವಿನ ಸಂಖ್ಯೆ ಏರಿಕೆಯಾಗಿದೆ. ಈವರೆಗೂ ಒಟ್ಟು 304 ಮಂದಿ ಬಲಿಯಾಗಿದ್ದು, 2590 ಹೊಸ ಪ್ರಕರಣಗಳು ಪತ್ತೆಯಾಗಿದೆ. ಒಟ್ಟು 14 ಸಾವಿರ ಮಂದಿ ಸೋಂಕು ತಗುಲಿದೆ ಎಂದು ವರದಿಯಾಗಿದೆ.
ಮಾರಕ ವೈರಸ್ ಎಲ್ಲೆಡೆ ಹರಿದಾಡುತ್ತಿರುವುದರಿಂದ ಪ್ರಯಾಣ ನಿರ್ಬಂಧ ಹಾಗೂ ಸ್ಥಳಾಂತರ ಪ್ರಕ್ರಿಯೆಗಳು ಚೀನಾದ್ಯಂತ ಭರದಿಂದ ಸಾಗಿದೆ. ಶನಿವಾರದ ಅಂತ್ಯಕ್ಕೆ ಸಾವಿನ ಸಂಖ್ಯೆ 304ಕ್ಕೆ ಏರಿದ್ದು, ಮೃತಪಟ್ಟವರಲ್ಲಿ ಬಹುತೇಕರು ಹೊಸದಾಗಿ ಸೋಂಕಿಗೆ ತುತ್ತಾದವರೇ ಆಗಿದ್ದಾರೆ. ಕೊರೊನಾ ವೈರಸ್ ಹರಡಿದ ಪ್ರಮುಖ ಕೇಂದ್ರ ಹುಬೇ ಪ್ರಾಂತ್ಯದಲ್ಲಿ ಅಧಿಕ ಸಾವಾಗಿದೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಮಾರಕ ಸೋಂಕು ಹರಡಿರುವುದು ವಿಶ್ವದ ಎರಡನೇ ಬಹುದೊಡ್ಡ ಆರ್ಥಿಕತೆ ದೇಶವಾಗಿರುವ ಚೀನಾ ಮೇಲೆ ಪರಿಣಾಮ ಬೀರಿದೆ. ಇತರೆ ದೇಶದವರು ಚೀನಾ ಮೇಲೆ ಪ್ರವಾಸ ನಿರ್ಬಂಧ ಮತ್ತು ವಿಮಾನ ರದ್ದು ಮುಂತಾದ ಕ್ರಮ ಕೈಗೊಂಡಿರುವುದರಿಂದ ಚೀನಾದ ಆರ್ಥಿಕತೆ ಮೇಲೂ ಕೊರೊನಾ ತನ್ನ ದಾಳಿಯನ್ನು ನಡೆಸಿದೆ.
ಇತ್ತೀಚೆಗೆ ಹುಬೇಗೆ ಪ್ರಯಾಣ ಬೆಳೆಸಿದ್ದ ವಿದೇಶಿಗರು ಕೂಡ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಸುಮಾರು 24 ದೇಶಗಳ 130 ಮಂದಿ ಸೋಂಕಿಗೆ ತುತ್ತಾಗಿದ್ದು, ದುರಾದೃಷ್ಟವಶಾತ್ ಈವರೆಗೂ ಯಾವುದೇ ಸಾವು ಸಂಭವಿಸಿಲ್ಲ. ಅಮೆರಿಕದಲ್ಲೂ 8 ಪ್ರಕರಣಗಳು ಪತ್ತೆಯಾಗಿದೆ. ಇತ್ತ ಚೀನಾದಲ್ಲಿರುವ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸಾಕಷ್ಟು ಶ್ರಮಿಸುತ್ತಿವೆ. (ಏಜೆನ್ಸೀಸ್)