ವಿಶ್ವಾದ್ಯಂತ ಹದಿನೈದು ಲಕ್ಷ ಸೋಂಕಿತರು: 90,000 ಗಡಿ ದಾಟಿದ ಮೃತರ ಸಂಖ್ಯೆ

Corona 1
Published on

ನವದೆಹಲಿ/ವಾಷಿಂಗ್ಟನ್: ವಿಶ್ವದಾದ್ಯಂತ ಕರೊನಾವೈರಸ್​ಗೆ ಬಲಿಯಾದವರ ಸಂಖ್ಯೆ 90 ಸಾವಿರ ದಾಟಿದ್ದು, ಇನ್ನೂ ಹೆಚ್ಚು ಸಾವುಗಳು ಸಂಭವಿಸುವ ಆತಂಕ ಎದುರಾಗಿದೆ. ಕಳೆದ 24 ತಾಸಿನಲ್ಲಿ ಜಗತ್ತಿನಾದ್ಯಂತ 2,445 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 90 ಸಾವಿರಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಅತೀ ವೇಗವಾಗಿ ಏರಿಕೆ ಕಾಣುತ್ತಿದ್ದು 15 ಲಕ್ಷದ ಗಡಿ ದಾಟಿದೆ. ಗುರುವಾರ ಒಂದೇ ದಿನದಲ್ಲಿ 23,897 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 15.41 ಲಕ್ಷವಾಗಿದೆ.

ಇಟಲಿಯೊಂದರಲ್ಲೇ 17 ಸಾವಿರಕ್ಕಿಂತಲೂ ಹೆಚ್ಚು ಜನರು ಸಾವನ್ನಪ್ಪಿದ್ದು, ನಂತರದ ಸ್ಥಾನಗಳಲ್ಲಿ ಸ್ಪೇನ್, ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳಿವೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ನಾಲ್ಕುವರೆ ಲಕ್ಷ ದಾಟಿರುವುದರಿಂದಾಗಿ ಸಾವಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಸ್ಪೇನ್ ಹಾಗೂ ಇಟಲಿಯಲ್ಲಿ ತಲಾ ಒಂದೂವರೆ ಲಕ್ಷ, ಜರ್ಮನಿ ಹಾಗೂ ಫ್ರಾನ್ಸ್ ನಲ್ಲಿ ತಲಾ 1 ಲಕ್ಷ ಜನರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಅಮೆರಿಕದಲ್ಲಿ 2 ಸಾವಿರ ಜನರು ಪ್ರತಿದಿನ ಸಾವನ್ನಪು್ಪತ್ತಿದ್ದಾರೆ. ಜೂನ್ ವೇಳೆಗೆ ಅಮೆರಿಕದಲ್ಲಿ ಪ್ರತಿ ದಿನ 2 ಸಾವಿರ ಜನರು ಸಾವನ್ನಪು್ಪತ್ತಾರೆ ಎಂದು ಈ ಹಿಂದೆ ತಜ್ಞರು ಎಚ್ಚರಿಸಿದ್ದರು. ಆದರೆ ಈಗಲೇ ಕರೊನಾ ಭೀಕರತೆ ಪಡೆಯುತ್ತಿದ್ದು, ಇದು ನಿಯಂತ್ರಣಕ್ಕೆ ಬರದೆ ಹೋದರೆ ಭವಿಷ್ಯದಲ್ಲಿ ಸಾವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ. ನ್ಯೂಯಾರ್ಕ್ ನಗರ ಅಮೆರಿಕದಲ್ಲಿ ಕರೊನಾ ಹಾಟ್​ಸ್ಪಾಟ್ ಆಗಿ ಪರಿವರ್ತನೆಯಾಗಿದೆ.

ಬೋರಿಸ್ ಜಾನ್ಸನ್ ಆರೋಗ್ಯ ಚೇತರಿಕೆ

ಕರೊನಾ ಸೋಂಕಿಗೆ ಒಳಗಾಗಿ ಲಂಡನ್​ನ ಸೆಂಟ್ ಥಾಮಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್​ರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಬೋರಿಸ್ ಜಾನ್ಸನ್ ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರ ವಕ್ತಾರರು ತಿಳಿಸಿದ್ದಾರೆ.

ಚೀನಾದಲ್ಲಿ 63 ಹೊಸ ಸೋಂಕು ಪ್ರಕರಣ ದಾಖಲು

ಕರೊನಾ ಮಹಾಮಾರಿಯಿಂದ ಸುಧಾರಿಸಿಕೊಂಡು ನಿಟ್ಟುಸಿರು ಬಿಡುತ್ತಿರುವ ಚೀನಾದಲ್ಲಿ ಒಂದೇ ದಿನ 63 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. ಚೀನಾದ ಬಹುತೇಕ ನಗರಗಳಲ್ಲಿ ಬುಧವಾರದಿಂದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಈಗ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮತ್ತೆ ಆತಂಕ ಸೃಷ್ಟಿಯಾಗಿದೆ. ಚೀನಾದಲ್ಲಿ ಕಳೆದ ಕೆಲ ದಿನಗಳಿಂದ ಹೊಸ ಪ್ರಕರಣಗಳು ಬೆಳಕಿಗೆ ಬರುವುದು ಕಡಿಮೆಯಾಗಿದ್ದು, 3 ದಿನಗಳಿಂದ ಯಾವುದೇ ಸಾವು ಸಂಭವಿಸಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net