

ನವದೆಹಲಿ: ಭಾರತದ ಕರೊನಾ ಸೋಂಕಿತರಲ್ಲಿ ಶೇ. 19 ಜನರು 60 ವರ್ಷ ಮೇಲ್ಪಟ್ಟವರು. ಆದರೆ ಕರೊನಾ ಸಾವಿನಲ್ಲಿ 60 ವರ್ಷ ಮೇಲ್ಪಟ್ಟವರ ಪಾಲು ಶೇ. 63 ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗೆ ಮೃತರಲ್ಲಿ ಶೇ.30 ಮಂದಿ 40-60 ವಯೋಮಾನದವರು. ಶೇ. 7 ಮಂದಿ ಮಾತ್ರ 40ಕ್ಕಿಂತ ಕಡಿಮೆ ವಯಸ್ಸಿನವರು. ಮೃತಪಟ್ಟವರ ಪೈಕಿ ಶೇ. 86 ಮಂದಿ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಮತ್ತು ಕಿಡ್ನಿ ಮತ್ತಿತರ ಸಮಸ್ಯೆಗಳಿಗೆ ಒಳಗಾದವರು ಎಂದು ಅಂಕಿಸಂಖ್ಯೆ ತಿಳಿಸಿದೆ.
ಪುರುಷರಿಗೇ ಹೆಚ್ಚು ಸೋಂಕು
ಮಹಿಳೆಯರಿಗಿಂತ ಪುರುಷರೇ ಹೆಚ್ಚಾಗಿ ಕರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂಬ ಅಂಶವೂ ಅಂಕಿಸಂಖ್ಯೆ ವಿಶ್ಲೇಷಣೆಯಿಂದ ಬಹಿರಂಗವಾಗಿದೆ. ಇದುವರೆಗೆ ಸೋಂಕಿತರಲ್ಲಿ ಶೇ. 76 ಪುರುಷರು, ಶೇ. 24 ಮಹಿಳೆಯರು. ಸಾವಿನ ಸಂಖ್ಯೆಯಲ್ಲಿ ಕೂಡ ಪುರುಷರ ಸಂಖ್ಯೆಯೇ ಅಧಿಕವಾಗಿದೆ. ದೇಶದಲ್ಲಿ ಕರೊನಾ ಸೋಂಕಿನಿಂದ ಸತ್ತವರಲ್ಲಿ ಶೇ. 73 ಪುರುಷರಿದ್ದರೆ ಮಹಿಳೆಯರು ಶೇ. 27.
ಜಾಗತಿಕ ಪ್ರವೃತ್ತಿ
ಕರೊನಾ ಸೋಂಕು ದೃಢಪಟ್ಟವರ ವಯಸ್ಸಿನ ಆಧಾರದ ವಿಶ್ಲೇಷಣೆಯು ಜಗತ್ತಿನ ಇತರ ದೇಶಗಳಿಗಿಂತ ಭಾರತದಲ್ಲಿ ಭಿನ್ನವಾಗಿದೆ. ಇಲ್ಲಿ ಸೋಂಕಿತರಲ್ಲಿ ಹೆಚ್ಚಿನವರು 60 ವರ್ಷ ಕೆಳಗಿನವರು. ಆದರೆ ಸಾವಿನ ಪ್ರಮಾಣದಲ್ಲಿ ಮಾತ್ರ ಜಾಗತಿಕ ಪ್ರವೃತ್ತಿಯೇ ಭಾರತದಲ್ಲೂ ಕಂಡುಬಂದಿದೆ. ಇತರ ರೋಗಗಳಿರುವ ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರು ಎಲ್ಲ ರೀತಿಯ ಜ್ವರಗಳಿಗೆ ತುತ್ತಾಗುತ್ತಾರೆ ಎನ್ನುವುದು ವೈದ್ಯರ ಅಭಿಪ್ರಾಯವಾಗಿದೆ. ಹೀಗಾಗಿ ಅವರಿಗೆ ಕರೊನಾ ವೈರಸ್ ತಗಲುವುದನ್ನು ತಡೆಯಲು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು.
ಹಿರಿಯರಿಗೆ ಆತಂಕ
ವೃದ್ಧರು, ಪದೇಪದೆ ಕಾಯಿಲೆಗಳಿಗೆ ತುತ್ತಾಗುವವರಿಗೆ ಕರೊನಾ ಸೋಂಕು ಹೆಚ್ಚಿನ ಅಪಾಯ ತಂದೊಡ್ಡಬಲ್ಲದು. ಈ ವಯೋಮಾನದವರಲ್ಲಿ ಸೋಂಕಿನ ಸಂಖ್ಯೆ ಕಡಿಮೆಯಿದ್ದರೂ ಸಾವಿನ ಪ್ರಮಾಣ ಜಾಸ್ತಿಯಿರುವ ವಿಚಾರವೂ ಗೊತ್ತಾಗಿದೆ. ಇತರ ರೋಗಗಳನ್ನು ಹೊಂದಿರುವ ಯುವಜನತೆ ಕೂಡ ಸೋಂಕಿನ ಅಪಾಯಕ್ಕೆ ಹೆಚ್ಚು ಈಡಾಗುತ್ತಾರೆ. ವೃದ್ಧರು ಹೆಚ್ಚಿನ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಯುವಜನರು ಸೋಂಕು ಇತರರಿಗೆ ಹರಡುವುದನ್ನು ತಡೆಯಲು ಜಾಗೃತರಾಗಿರಬೇಕು ಎಂದು ಆರೋಗ್ಯ ಸಚಿವಾಲಯ ಮನವಿ ಮಾಡಿದೆ. ಇದಕ್ಕೆ ಸಾಮಾಜಿಕ ಅಂತರ ಕ್ರಮಗಳನ್ನು ಮತ್ತು ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯ.