ಕರೊನಾ ಲಸಿಕೆ ಸಂಶೋಧನೆ ಸವಾಲು: 12ರಿಂದ 18 ತಿಂಗಳಲ್ಲಿ ಕರೊನಾ ಔಷಧ ಉತ್ಪಾದನೆ ನಿರೀಕ್ಷೆ

Corona Medicine
Published on

ಲಾಕ್​ಡೌನ್ ವಿಸ್ತರಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಕರೊನಾ ನಿವಾರಣೆಗೆ ಅಗತ್ಯವಾದ ಲಸಿಕೆ ಸಂಶೋಧಿಸುವ ಸವಾಲು ಸ್ವೀಕರಿಸುವಂತೆ ಯುವ ಸಂಶೋಧಕರು ಮತ್ತು ವಿಜ್ಞಾನಿಗಳಿಗೆ ಕರೆ ನೀಡಿದ್ದರು. ಪ್ರಸ್ತುತ ಕರೊನಾ ವೈರಸ್ ವಿರುದ್ಧ ಹೋರಾಡಲು ಇಂಥದ್ದೊಂದು ಲಸಿಕೆ ತುರ್ತು ಅಗತ್ಯವಾಗಿದೆ. ಆದರೆ ಲಸಿಕೆ ಅಭಿವೃದ್ಧಿಪಡಿಸುವುದು ಸುದೀರ್ಘ ಹಾಗೂ ಸಂಕೀರ್ಣ ಪ್ರಕ್ರಿಯೆ. ತುಂಬಾ ವೆಚ್ಚದಾಯಕವೂ ಹೌದು. ಕರೊನಾ ಸಾಂಕ್ರಾಮಿಕ ರೋಗ ವಿರುದ್ಧದ ಹೋರಾಟದ ಅಂತಿಮ ಯಶಸ್ಸು ಲಸಿಕೆಯನ್ನು ಎಷ್ಟು ಬೇಗ ಕಂಡು ಹಿಡಿಯಲಾಗುತ್ತದೆ ಎನ್ನುವುದನ್ನು ಅವಲಂಬಿಸಿದೆ.

ಲಸಿಕೆ ಹೇಗೆ ಕೆಲಸ ಮಾಡುತ್ತದೆ?

ಲಸಿಕೆಗಳು ದೇಹದ ರೋಗಪ್ರತಿರೋಧಕ ಶಕ್ತಿಯ ವ್ಯವಸ್ಥೆಗೆ ವೈರಸ್​ನ ಪ್ರತಿಜನಕ (ಆಂಟಿಜನ್ಸ್) ಎಂದು ಹೇಳಲಾಗುವ ಕಣಗಳನ್ನು ಸೇರಿಸುತ್ತದೆ. ಈ ಪ್ರತಿಜನಕಗಳು ಬಹುತೇಕವಾಗಿ ಅನಾರೋಗ್ಯ ಉಂಟು ಮಾಡುವುದಿಲ್ಲ. ಆದರೆ ಅವುಗಳನ್ನು ಆಕ್ರಮಣಕಾರ ಎಂದು ಗುರುತಿಸಲು ಹಾಗೂ ಭವಿಷ್ಯದಲ್ಲಿ ವೈರಸ್ ದಾಳಿ ಮಾಡಿದರೆ ಅದರ ವಿರುದ್ಧ ಹೋರಾಡಲು ರೋಗನಿರೋಧಕ ವ್ಯವಸ್ಥೆಗೆ ತರಬೇತಿ ನೀಡುತ್ತದೆ. ಕ್ಲಿನಿಕಲ್ ಪರೀಕ್ಷೆ ಹಂತದಲ್ಲಿರುವ ಒಂದು ಕರೊನಾ ವೈರಸ್ ಲಸಿಕೆ ಹಾಗೂ ಅಭಿವೃದ್ಧಿ ಹಂತದಲ್ಲಿರುವ ಇತರ ಲಸಿಕೆಗಳು ಇದೇ ಧೋರಣೆಯನ್ನು ಬಳಸುತ್ತಿವೆ. ಆದರೆ, ವೈರಸ್​ನ ಆನುವಂಶಿಕ (ಜೆನೆಟಿಕ್) ಕೋಡ್​ನ ನಕಲಿನಿಂದ ಲಸಿಕೆ ಸೃಷ್ಟಿಸಲೂ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.

ಮೂರು ಹಂತಗಳು

ಲಸಿಕೆ ಅಂತಿಮವಾಗಿ ಬಳಕೆಗೆ ಬರುವ ಮುನ್ನ ಮೂರು ಹಂತಗಳನ್ನು ದಾಟುತ್ತದೆ. ಸಂಶೋಧನೆ, ಕ್ಲಿನಿಕಲ್-ಪೂರ್ವ ಪರೀಕ್ಷೆ ಮತ್ತು ಕ್ಲಿನಿಕಲ್ ಅಭಿವೃದ್ಧಿ ಆ ಮೂರು ಹಂತಗಳು.

ಸಂಶೋಧನೆ ದುಬಾರಿ ಪ್ರಕ್ರಿಯೆ

ಸಾಂಕ್ರಾಮಿಕ ರೋಗಗಳ ವಿರುದ್ಧ ಸನ್ನದ್ಧರಾಗಿರುವ ಸಂಶೋಧನೆಗಳ ಕೂಟ (ಸಿಇಪಿಐ) ಹೇಳುವ ಪ್ರಕಾರ, ಲಸಿಕೆ ಅಭಿವೃದ್ಧಿಪಡಿಸಿ ಅವುಗಳನ್ನು ಪರೀಕ್ಷೆಗಾಗಿ ತಯಾರಿಸಲು ಸುಮಾರು ಎರಡರಿಂದ ಮೂರು ಬಿಲಿಯನ್ ಡಾಲರ್ ವೆಚ್ಚವಾಗಬಹುದು. ಅವುಗಳ ಉತ್ಪಾದನೆ ಸಾಮರ್ಥ್ಯ ಹೆಚ್ಚಿಸಲು ಕಂಪನಿಗಳಿಗೆ ಇನ್ನೂ ಹೆಚ್ಚಿನ ಹಣ ಬೇಕಾಗಬಹುದು. ಸಾವಿರಾರು ಜನರು ಸಂಶೋಧನೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಾಗುತ್ತದೆ.

ಕಾಲದೊಂದಿಗೆ ಮಾನವನ ಸ್ಪರ್ಧೆ

ಯಾವುದೇ ಒಂದು ಲಸಿಕೆಯ ಅಭಿವೃದ್ಧಿ ಹಾಗೂ ಅದನ್ನು ಮಾರುಕಟ್ಟೆಯಲ್ಲಿ ಲಭ್ಯಗೊಳಿಸಲು ಸುಮಾರು 10ರಿಂದ 15 ವರ್ಷ ಬೇಕಾಗುತ್ತದೆ ಎನ್ನುವುದು ಸಾಮಾನ್ಯ ಅಭಿಪ್ರಾಯ. ಆದರೆ ವಿವಿಧ ದೇಶಗಳು, ಸಂಶೋಧಕರು ಕೊವಿಡ್-19ಗೆ ಲಸಿಕೆ ಸಂಶೋಧನೆಗೆ 12ರಿಂದ 18 ತಿಂಗಳ ಗುರಿ ಹಾಕಿಕೊಂಡಿದ್ದಾರೆ. ಹೀಗಾಗಿ ಷರತ್ತುಬದ್ಧ ಬಳಕೆಗೆ ಅಗತ್ಯವಾದ ಕರೊನಾ ವೈರಸ್ ಲಸಿಕೆ 2021ರ ಆರಂಭದ ಹೊತ್ತಿಗೆ ಲಭ್ಯವಾಗಬಹುದು ಎಂಬುದು ತಜ್ಞರ ಅಭಿಪ್ರಾಯ. ಹಲವು ವರ್ಷಗಳ ಹಿಂದೆ ಕಾಡಿದ ಎಬೊಲಾ ರೋಗಕ್ಕೆ ಔಷಧ ಕಂಡುಹಿಡಿಯಲು ಐದು ವರ್ಷ ಬೇಕಾಯಿತು ಎನ್ನುವುದು ಗಮನಾರ್ಹ.

ತೀವ್ರಗೊಂಡ ಲಸಿಕೆ ಸಂಶೋಧನೆ

ಮುಂದಿನ ವರ್ಷ ಏಪ್ರಿಲ್ 11ರ ವೇಳೆಗೆ ಮೂರು ಲಸಿಕೆಗಳು ಮಾನವರ ಮೇಲಿನ ಪರೀಕ್ಷೆಗೆ ಸಿದ್ಧವಾಗಿವೆ. 67 ಸಂಭಾವ್ಯ ಲಸಿಕೆಗಳು ಕ್ಲಿನಿಕಲ್-ಪೂರ್ವ ಪರೀಕ್ಷೆ ಹಂತದಲ್ಲಿವೆ. ಕರೊನಾ ಹಾವಳಿ ಹೆಚ್ಚಾಗಿರುವ ಚೀನಾ, ದಕ್ಷಿಣ ಕೊರಿಯಾ ಅಮೆರಿಕ ದೇಶಗಳು ಬಹುತೇಕವಾಗಿ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿವೆ. ಭಾರತದ ಕಂಪನಿಗಳ ಪೈಕಿ ಭಾರತ್ ಬಯೋಟೆಕ್ ಲಸಿಕೆ ಅಭಿವೃದ್ಧಿಪಡಿಸಲು ವಿಸ್ಕಿನ್ಸನ್-ಮ್ಯಾಡಿಸನ್ ವಿಶ್ವವಿದ್ಯಾಲಯ ಹಾಗೂ ಅಮೆರಿಕ ಮೂಲದ ಫ್ಲೂಜೆನ್​ನೊಂದಿಗೆ ಸೇರಿ ಕೆಲಸ ಮಾಡುತ್ತಿದೆ. ಜೈಡಸ್ ಕ್ಯಾಡಿಲಾ ಮತ್ತು ಸೆರಮ್ ಇನ್​ಸ್ಟಿಟ್ಯೂಟ್ ಕೂಡ ಈ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಹಾಂಗ್​ಕಾಂಗ್​ನ ಕ್ಯಾನ್​ಸಿನೊ ಬಯಾಲಾಜಿಕ್ಸ್ ಮತ್ತು ಬೀಜಿಂಗ್​ನ ಮಿಲಿಟರಿ ವೈದ್ಯಕೀಯ ವಿಜ್ಞಾನಗಳ ಅಕಾಡೆಮಿ ಲಸಿಕೆ ಸಂಶೋಧನೆಯಲ್ಲಿ ಮುಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net