

ದಾವಣಗೆರೆ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಟ್ಟು 88ಕ್ಕೆ ಏರಿದೆ. ಇಂದು ಮೂರು ಹೊಸ ಪ್ರಕರಣಗಳು ಕಂಡು ಬಂದಿವೆ.
ಸೋಂಕಿನಿಂದ ಇಬ್ಬರು ಗುಣಮುಖರಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳು 82 ಎಂದು ಇಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.
ಇಂದು ಸೋಂಕು ದೃಢಪಟ್ಟ ಮೂವರಲ್ಲಿ ಓರ್ವ ಪೊಲೀಸ್ ಕಾನ್ಸ್ಟೆಬಲ್ ಆಗಿದ್ದು, ಇವರು ಕಂಟೇನ್ಮೆಂಟ್ ಝೋನ್ನಲ್ಲಿ ಕರ್ತವ್ಯದಲ್ಲಿದ್ದರು.
ದಾವಣಗೆರೆಯಲ್ಲಿ ದಿನೇದಿನೆ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರ ಬಗ್ಗೆ ಮಾತನಾಡಿದ ಎಸ್ಪಿ ಹನುಮಂತರಾಯ ಅವರು, ದಾವಣಗೆರೆಯಲ್ಲಿ ಇಂದು ಪಿಜೆ ಬಡಾವಣೆಯ ಸಮೀಪದ ರೈತರ ಬೀದಿಯನ್ನು ಕಂಟೇನ್ಮೆಂಟ್ ಏರಿಯಾ ಎಂದು ಗುರುತಿಸಲಾಗಿದೆ.
ಈ ಏರಿಯಾಗಳಲ್ಲಿ ಬೆಳ್ಳುಳ್ಳಿ, ಈರುಳ್ಳಿ ವ್ಯಾಪಾರಿಗಳಿಂದಲೇ ಸೋಂಕು ಹರಡಿರುವ ಶಂಕೆ ಬಲವಾಗಿದೆ. ಹಾಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಉತ್ಪನ್ನಗಳು ಎಲ್ಲಿಂದ ಸಾಗಣೆ ಬಂದಿವೆ ಎಂಬುದನ್ನೂ ಪರಿಶೀಲನೆ ನಡೆಸುತ್ತಿದ್ದೇವೆ. ಕಂಟೇನ್ಮೆಂಟ್ ಏರಿಯಾಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಪಿಪಿಇ ಕಿಟ್ ನೀಡಲಾಗುವುದು. ಟ್ರಿಪಲ್ ಲೇಯರ್ ಮಾಸ್ಕ್ ಒದಗಿಸಲಾಗುವುದು ಹಾಗೂ ಯೂನಿಫಾರ್ಮ್ನ್ನು ಸ್ಯಾನಿಟೈಸ್ ಮಾಡುವ ಬಗ್ಗೆಯೂ ಅರಿವು ಮೂಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ದಾವಣೆಗರೆಯಲ್ಲಿ ಬಾಷಾನಗರ, ಜಾಲಿನಗರ, ಇಮಾಮ್ನಗರ, ಬೇತೂರು ರಸ್ತೆ, ಕೆಟಿಜಿ ನಗರ, ಶಿವನಗರ, ಪಿಜೆಬಡಾವಣೆಯ ರೈತರ ಬೀದಿಗಳು ಕಂಟೇನ್ಮೆಂಟ್ ವಲಯಗಳೆಂದು ಗುರುತಿಸಲ್ಪಟ್ಟಿವೆ. (ದಿಗ್ವಿಜಯ ನ್ಯೂಸ್)