

ಬಳ್ಳಾರಿ: ಬೆಂಗಳೂರಿನಿಂದ ಹೈದರಾಬಾದ್ಗೆ ಪ್ರಯಾಣಿಸಿದ್ದ ಟೆಕ್ಕಿಯೋರ್ವನಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಈತ ಇತ್ತೀಚೆಗೆ ದುಬೈಗೆ ಭೇಟಿಕೊಟ್ಟಿದ್ದ. ಅದಾದ ಬಳಿಕ ಬೆಂಗಳೂರಿಗೆ ಬಂದು ಹೈದರಾಬಾದ್ಗೆ ಹೋಗಿದ್ದ. ಅಲ್ಲಿ ಹೋದ ಬಳಿಕ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು.
ಬೆಂಗಳೂರು ಟೆಕ್ಕಿಯಲ್ಲಿ ವೈರಸ್ ಕಾಣಿಸಿಕೊಂಡಿದ್ದು ಸುದ್ದಿಯಾಗುತ್ತಿದ್ದಂತೆ ರಾಜ್ಯಾದ್ಯಂತ ಕೊರೊನಾ ಆತಂಕ ಶುರುವಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳ ಆಸ್ಪತ್ರೆಗಳೂ ಕೊರೊನಾಕ್ಕೆ ಚಿಕಿತ್ಸೆ ನೀಡಲು ಸಜ್ಜಾಗುತ್ತಿವೆ. ಕೆಲವು ವಿಮಾನ ನಿಲ್ದಾಣಗಳಲ್ಲೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಬಳ್ಳಾರಿಯಲ್ಲಿ ಯಾರಾದರೂ ಕೊರೊನಾ ಶಂಕಿತರು ಕಂಡುಬಂದರೆ ಅವರಿಗೆ ಚಿಕಿತ್ಸೆ ನೀಡಲು ವಿಮ್ಸ್ನಲ್ಲಿ ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದೆ. ಅಲ್ಲಿ ಎಂಟು ಬೆಡ್ಗಳನ್ನು ಹಾಕಲಾಗಿದ್ದು, ಐಸಿಯು ಕೂಡ ಸಜ್ಜಾಗಿದೆ. ವಿಮ್ಸ್ ಆಡಳಿತ ಮಂಡಳಿ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದೆ.
ಈ ಬಗ್ಗೆ ವಿಮ್ಸ್ ನಿರ್ದೇಶಕ ಡಾ. ದೇವಾನಂದ್ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯ ಸೂಚನೆಯಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವೈರಸ್ ಸೋಂಕಿತರು ಬಂದರೆ ಅವರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವೈದ್ಯರ ತಂಡ ರಚಿಸಲಾಗಿದೆ. ವಿದೇಶದಿಂದ ಬಂದವರಲ್ಲಿ ಕೊರೊನಾ ಸೋಂಕಿನ ಲಕ್ಷಣ ಇರಲಿ ಬಿಡಲಿ, ರಕ್ತ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಾಗೇ, ದೀರ್ಘಕಾಲದ ಶೀತ, ಕೆಮ್ಮು ಇದ್ದರೆ ತಕ್ಷಣವೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ. ಯಾರೂ ಕೂಡ ಕೊರೊನಾ ವೈರಸ್ಗೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದ್ದಾರೆ.
ಹಾಗೇ ಬೀದರ್ನಲ್ಲಿ ಕೂಡ ಕೊರೊನಾ ಪತ್ತೆಗೆ, ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ಬೀದರ್ ಏರ್ಪೋರ್ಟ್ನಲ್ಲಿ ಇಬ್ಬರು ವೈದ್ಯರನ್ನೊಳಗೊಂಡ ತಂಡವನ್ನು ನಿಯೋಜಿಸಲಾಗಿದ್ದು, ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಸ್ಕ್ಯಾನಿಂಗ್ ತಪಾಸಣೆ ನಡೆಸಲಾಗುತ್ತಿದೆ.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಐದು ಬೆಡ್ಗಳ ವಿಶೇಷ ವಾರ್ಡ್ ಸ್ಥಾಪನೆ ಮಾಡಲಾಗಿದೆ ಎಂದು ಡಿಎಚ್ಒ ವಿ.ಜಿ.ರೆಡ್ಡಿ ತಿಳಿಸಿದ್ದಾರೆ.
ಕೇರಳದಲ್ಲಿ ಮೂವರಿಗೆ ಕೊರೊನಾ ತಗುಲಿದ್ದಾಗಲೇ ಮಂಗಳೂರಲ್ಲಿ ಭೀತಿ ಆವರಿಸಿತ್ತು. ಆಗಿನಿಂದಲೂ ಅಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ 20 ಬೆಡ್ಗಳ ಪ್ರತ್ಯೇಕ ವಿಶೇಷ ಬೆಡ್ಗಳನ್ನು ತೆರೆಯಲಾಗಿದೆ. ಇಲ್ಲಿಗೆ ಬರುವ ಪ್ರತಿ ರೋಗಿಗಳ ಮೇಲೆಯೂ ನಿಗಾ ಇಡಲಾಗಿದೆ. ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಚಿಕಿತ್ಸಾ ತರಬೇತಿ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ವಾರ್ಡ್ಗಳ ವ್ಯವಸ್ಥೆ ಮಾಡಲಾಗಿದೆ.
ಗೋಕರ್ಣಕ್ಕೆ ಬಂದ ಇಬ್ಬರು ಚೀನಾ ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಕಳೆದೊಂದು ತಿಂಗಳುಗಳಿಂದಲೂ ಕಾರವಾರಕ್ಕೆ ವಿದೇಶಿ ಹಡಗುಗಳು ಬಂದಿಲ್ಲ. ಹಾಗೊಮ್ಮೆ ಬಂದರೆ ಅದರ ಮೇಲೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಗದಗದಲ್ಲಿ ಸಹ ಕೊರೊನಾ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಮ್ಸ್ನಲ್ಲಿ ಚಿಕಿತ್ಸಾ ಘಟಕ ನಿರ್ಮಿಸಲಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಐದು ಬೆಡ್ಗಳ ವಾರ್ಡ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಮ್ಸ್ ನಿರ್ದೇಶಕ ಪಿ.ಎಸ್.ಬೂಸರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.