ಕರೊನಾದಿಂದಾಗಿ ಸತ್ತ ವೃದ್ಧನಿಗೆ ಸಾಯುವ ಮೊದಲೇ ಬಂದಿತ್ತು ಸತ್ತಿರುವ ಸಂದೇಶ

Coronavirus 27 Feb 20
Published on

ಮುಂಬೈ: ಕರೊನಾ ವೈರಸ್​ ದೇಶದ ವಾತಾವರಣವನ್ನೇ ಬದಲಾಯಿಸಿಬಿಟ್ಟಿದೆ. ದೇಶದಲ್ಲಿ 147 ಜನರಲ್ಲಿ ಕರೊನಾ ಸೋಂಕು ಇರುವುದು ಧೃಡವಾಗಿದ್ದು, ಮೂವರು ಇದೇ ವೈರಸ್​ನಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಎಲ್ಲೆಡೆ ಕರೊನಾ ಹರಡದಂತೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆದರೆ ಒಂದಿಷ್ಟು ಜನರು ಮಾತ್ರ ಕರೊನಾ ಬಗ್ಗೆ ವದಂತಿಗಳನ್ನು ಹಬ್ಬಿಸುವುದರಲ್ಲಿ ನಿರತರಾಗಿಬಿಟ್ಟಿದ್ದಾರೆ. ಮುಂಬೈನಲ್ಲಿ ಕರೊನಾದಿಂದಾಗಿ ಮೃತನಾದ ವೃದ್ಧನಿಗೆ ಆತನ ಬಂಧು ಮಿತ್ರರೇ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದು, ಆತ ಸಾಯುವ ಮೊದಲೇ ಸತ್ತಿದ್ದಾನೆ ಎನ್ನುವ ಸಂದೇಶಗಳನ್ನು ಹಂಚಿಕೊಂಡಿದ್ದರಂತೆ.

ಮುಂಬೈನಲ್ಲಿ ಕರೊನಾದಿಂದಾಗಿ ಸತ್ತ 63ರ ವೃದ್ಧನಿಗೆ ಆತ ಸಾಯುವುದಕ್ಕೂ ಒಂದು ದಿನ ಮೊದಲೇ ಆತ ಸತ್ತಿದ್ದಾನೆ ಎನ್ನುವ ಸಂದೇಶವೊಂದು ಬಂದಿತ್ತಂತೆ. ಆತನಲ್ಲಿ ಸೋಂಕು ಇದೆ ಎಂದು ತಿಳಿದಾಗಿನಿಂದ ಆತನ ಅನೇಕ ಸ್ನೇಹಿತರು ಮತ್ತು ಬಂಧುಗಳು ಕೀಳಾಗಿ ಮಾತನಾಡಲಾರಂಭಿಸಿದ್ದು ಮಾನಸಿಕ ಹಿಂಸೆ ನೀಡಲಾರಂಭಿಸಿದ್ದಾರೆ. 20 ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿದ್ದ ಆತನ ಏರಿಯಾಕ್ಕೆ ದೈನಂದಿನ ಸೇವೆಯನ್ನು ಒದಗಿಸಲು ಬರುತ್ತಿದ್ದವರೂ ಸಹ ಹೆದರಿ ಬರುತ್ತಿರಲಿಲ್ಲವಂತೆ. ಒಂದಿಷ್ಟು ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ಬೈಕಿನಲ್ಲಿ ಬಂದು ಆತನ ಮನೆಯ ಬಳಿ ಕರೊನಾ.. ಕರೊನಾ ಎಂದು ಕೂಗಿ ಹೋಗುತ್ತಿದ್ದರು ಎಂದು ಅವರ ಅಕ್ಕ ಪಕ್ಕದ ಮನೆಯವರು ತಿಳಿಸಿದ್ದಾರೆ.

ಕೇವಲ ಮನೆಯ ಬಳಿ ಮಾತ್ರವಲ್ಲದೆ, ಮೃತ ವ್ಯಕ್ತಿಯ ಮಗಳು ಮತ್ತು ಮೊಮ್ಮಗಳು ಹೊರಗಡೆ ಎಲ್ಲೇ ಓಡಾಡಿದರೂ ಅವರಿಗೆ ಟೀಕಿಸಲಾಗುತ್ತಿದೆ ಎಂದು ನೆರೆಹೊರೆಯವರು ತಿಳಿಸಿದ್ದಾರೆ.

ವೃದ್ಧನಲ್ಲಿ ಕರೊನಾ ಪತ್ತೆಯಾದ ಹಿನ್ನೆಲೆ ಆತನ ಮನೆಗೆ ಹಾಲು, ಪೇಪರ್​ ಹಾಕಲು ಬರುತ್ತಿದ್ದವರು ಸೇರಿದಂತೆ ಒಟ್ಟು ಆರು ಜನ ದೈನಂದಿನ ಕೆಲಸಗಾರರನ್ನು ತಪಾಸಣೆ ನಡೆಸಲಾಗಿದ್ದು ಅವರಲ್ಲಿ ವೈರಸ್​ ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳಲಾಗಿದೆ. ಆತನ ಮನೆಯ ಸುತ್ತಮುತ್ತಲಿನ 15 ಬಿಲ್ಡಿಂಗ್​ಗಳಲ್ಲಿರುವ 460 ಮನೆಗಳಲ್ಲಿರುವವರನ್ನು ಪರೀಕ್ಷಿಸಲಾಗಿದ್ದು ಯಾರೊಬ್ಬರಲ್ಲೂ ಸಹ ಸೋಂಕು ಕಂಡಿಲ್ಲ. ಆತನನ್ನು ದಾಖಲಿಸಲಾಗಿದ್ದ ಖಾಸಗಿ ಆಸ್ಪತ್ರೆಯಲ್ಲಿ ಎಂಟು ವೈದ್ಯರು ಮತ್ತು ನರ್ಸ್​ಗಳಲ್ಲಿ ವೈರಸ್​ ಇಲ್ಲದಿರುವುದು ಧೃಡವಾಗಿದೆ. ಕನಿಷ್ಠ 74 ಸಿಬ್ಬಂದಿಗಳನ್ನು 14 ದಿನಗಳ ಕಾಲ ಮನೆಯಲ್ಲಿಯೇ ಇರುವಂತೆ ತಿಳಿಸಲಾಗಿದೆ. ವೃದ್ಧನ ಪತ್ನಿ ಮತ್ತು ಮಗನಿಗೆ ಸೋಂಕಿರುವುದು ಧೃಡವಾಗಿದ್ದು ಅವರಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net