ಕರೊನಾ ಅಟ್ಟಹಾಸಕ್ಕೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ: ಒಟ್ಟು 260 ಮಂದಿಗೆ ಸೋಂಕು- 71 ಮಂದಿ ಬಿಡುಗಡೆ

Coronavirus 27 Feb 20
Published on

ಬೆಂಗಳೂರು: ಕರೊನಾ ಮಹಾಮಾರಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆಯನ್ನು ಹೆಚ್ಚು ಮಾಡುತ್ತಿರುವುದು ಮಾತ್ರವಲ್ಲದೇ, ಸಾವಿನ ಸಂಖ್ಯೆಯನ್ನೂ ಅಧಿಕಗೊಳಿಸುತ್ತಿದೆ.

ಮಂಗಳವಾರ ಸಂಜೆಯವರೆಗೆ 260 ಮಂದಿಗೆ ಸೋಂಕು ದೃಢಪಟ್ಟಿದ್ದು, 10 ಮಂದಿಯನ್ನು ಕರೊನಾ ಬಲಿ ಪಡೆದಿದೆ.

ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ 13 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 71 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಕಲಬುರ್ಗಿಯಲ್ಲಿ 55 ವರ್ಷದ ವ್ಯಕ್ತಿ, ಬೆಂಗಳೂರು ನಗರದಲ್ಲಿ 65 ವರ್ಷದ ಹಾಗೂ ವಿಜಯಪುರದಲ್ಲಿ 69 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಂದು ಮೃತಪಟ್ಟವರು ಕೂಡ ಬೆಂಗಳೂರಿನವರೇ ಆಗಿದ್ದು, ಅವರಿಗೆ 76 ವರ್ಷ ವಯಸ್ಸಾಗಿತ್ತು.

ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ತಲಾ 3, ಬೆಂಗಳೂರು ನಗರದಲ್ಲಿ 3, ವಿಜಯಪುರ, ಬೆಳಗಾವಿ, ಚಿಕ್ಕಬಳ್ಳಾಪುರ ಮತ್ತು ಭಟ್ಕಳದಲ್ಲಿ ತಲಾ ಒಂದು ಹೊಸ ಸೋಂಕು ಪ್ರಕರಣ ನಿನ್ನೆ ಸಂಜೆಯಿಂದ ಇಲ್ಲಿಯವರೆಗೆ ಪತ್ತೆಯಾಗಿದೆ. ಸದ್ಯದಲ್ಲಿ ರಾಜ್ಯದಲ್ಲಿ ಸೋಂಕಿತರ ಸ್ಥಿತಿಗತಿ ಈ ರೀತಿ ಇದೆ:

ಬೆಂಗಳೂರು ನಗರ 69, ಮೈಸೂರು 48, ಬೆಳಗಾವಿ 18, ಕಲಬುರಗಿ 16, ಬೀದರ್‌ 13, ದಕ್ಷಿಣ ಕನ್ನಡ 11, ಬಾಗ ಲಕೋಟೆ 12, ಉತ್ತರ ಕನ್ನಡ 11, ಚಿಕ್ಕಬಳ್ಳಾಪುರ 13, ಮಂಡ್ಯ 8, ವಿಜಯಪುರ 7, ಬಳ್ಳಾರಿ ಮತ್ತು ಧಾರವಾಡ 6, ಬೆಂಗಳೂರು ಗ್ರಾಮಾಂತರ 12, ದಾವಣಗೆರೆ 2, ಉಡುಪಿ 3, ಕೊಡಗು 1, ತುಮಕೂರು 2 ಮತ್ತು ಗದಗ ಒಬ್ಬರು.

ಸೋಂಕಿತರ ಪ್ರಯಾಣದ ಮಾಹಿತಿ ಬೇಕಿದ್ದರೆ www.karnataka.gov.in. ಮೊಬೈಲ್‌ ಅಪ್ಲಿಕೇಷನ್ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸರ್ಕಾರದ ಪ್ರಕಟಣೆ ತಿಳಿಸಿದೆ. ಕರೊನಾ ವೈರಸ್‌ ಉಚಿತ ಆರೋಗ್ಯ ಸಹಾಯವಾಣಿ ಸಂಖ್ಯೆ: 104/ 9745697456.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net