

ಮಳವಳ್ಳಿ: ತಾಲೂಕಿನ ಕುಂದೂರು ಬೆಟ್ಟದ ಶ್ರೀರಸಸಿದ್ದೇಶ್ವರ ಮಠದ ಗುರು ಪಟ್ಟಾಧಿಕಾರ ಮಹೋತ್ಸವ ಹಾಗೂ ಮಹಾದ್ವಾರ ಉದ್ಘಾಟನಾ ಕಾರ್ಯಕ್ರಮ ಮೇ 1ರಂದು ಹಮ್ಮಿಕೊಳ್ಳಲು ಶ್ರೀ ಮಠದ ಭಕ್ತ ಮಂಡಳಿ ಸಿದ್ಧತೆ ಮಾಡಿಕೊಳ್ಳಲು ನಿರ್ಣಯಿಸಲಾಗಿದೆ ಎಂದು ಶ್ರೀ ಮಠದ ಮಠಾಧ್ಯಕ್ಷ ಶ್ರೀ ನಂಜುಂಡ ಸ್ವಾಮೀಜಿ ಹೇಳಿದರು.
ತಾಲೂಕಿನ ತೆಂಕಹಳ್ಳಿ ಸಮೀಪವಿರುವ ಕುಂದೂರು ಬೆಟ್ಟದ ಶಿಶ್ರರಸಸಿದ್ದೇಶ್ವರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಆಯೋಜಕ ಮಂಡಳಿ ಸದಸ್ಯರ ಜತೆಯಲ್ಲಿ ಚರ್ಚಿಸಿದ ನಂತರ ಮಾತನಾಡಿ, ಕಾರ್ಯಕ್ರಮಕ್ಕೆ ಸುಮಾರು ಇಪ್ಪತ್ತು ಸಾವಿರ ಭಕ್ತರ ಸಮಾಗಮವಾಗುವ ನಿರೀಕ್ಷೆ ಇದೆ. ಮೇ 1ರಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ದಿವ್ಯ ಸ್ನಾನ , ಭಸ್ಮ ಧಾರಣೆ, ರುದ್ರಾಕ್ಷಿಧಾರಣೆ, ಲಿಂಗಾಂಗ ಸಾಮರಸ್ಯ ಅನುಸಂಧಾನ, ಮಂತ್ರೋಪದೇಶ, ಪಂಚಮುದ್ರದಾನ ಶ್ರೀ ಕರ್ತೃಗದ್ದುಗೆಗೆ ಅಭಿಷೇಕ, ವಿಶೇಷ ಅಲಂಕಾರ ಸೇವೆಗಳ ವಿಧಿವಿಧಾನ, ಧಾರ್ಮಿಕ ಕಾರ್ಯಗಳು ಜರುಗಲಿವೆ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವನ್ನು ಕನಕಪುರದ ದೇಗುಲ ಮಠಾಧ್ಯಕ್ಷ ಶ್ರೀಮುಮ್ಮಡಿ ನಿರ್ವಾಣ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಆದಿ ಚುಂಚನಗಿರಿ ಮಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶ್ರೀಕ್ಷೇತ್ರದ ಮಹಾದ್ವಾರ ಉದ್ಘಾಟನೆ ಮಾಡುವರು. ಮುಖ್ಯಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಮಾಜಿ ಸಚಿವರು, ಶಾಸಕರು ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಪ್ರಚಾರ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಶ್ರೀ ಶಂಭುಲಿಂಗ ಸ್ವಾಮೀಜಿ, ಶ್ರೀ ಬಸವಲಿಂಗ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಷಡಕ್ಷರಿ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ, ಶ್ರೀ ಬಸವರಾಜೇಂದ್ರ ಸ್ವಾಮೀಜಿ ಹಾಗೂ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕುಂದೂರು ಮೂರ್ತಿ, ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೃಷಬೇಂದ್ರ, ಉಪಾಧ್ಯಕ್ಷ ಜಗದೀಶ್, ಮುಖಂಡರಾದ ಚಿಕ್ಕಮುಲಗೂಡು ಪುಟ್ಟುಬುದ್ಧಿ, ಬಬೃವಾಹನ ಸೇರಿದಂತೆ ಇತರರಿದ್ದರು.