

ಬೆಂಗಳೂರು: ಶಾಸಕರ ಭವನದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಪೊಲೀಸರು, ಮತ್ತಿತರರಲ್ಲಿ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದು ಶಾಸಕರ ಭವನವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಕಟ್ಟಡಕ್ಕೆ ತುರ್ತು ಸೋಂಕು ನಿವಾರಣಾ ಔಷಧಿ ಸಿಂಪಡಿಸಲಾಯಿತು.
ಶಾಸಕರ ಭವನಕ್ಕೆ ಕರೊನಾ ಕಾಲಿಟ್ಟ ಬೆನ್ನಲ್ಲೇ ವಿಧಾನಸಭೆ ಅಧ್ಯಕ್ಷರು ಮತ್ತು ವಿಧಾನ ಪರಿಷತ್ ಸಭಾಪತಿಯವರ ಜಂಟಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ನಿಯಂತ್ರಣಾ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ. ಶಾಸಕರ ಭವನದ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನೂ ಓದಿ:ಮನೆ ತೊರೆದಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ನೆರವಾದ ‘ವಿಜಯವಾಣಿ’
ಇನ್ನು ಮುಂದೆ ಶಾಸಕರ ಭವನಕ್ಕೆ ಬರುವವರು ಮುಖ್ಯದ್ವಾರದಲ್ಲಿ ಇಡಲಾದ ಪಟ್ಟಿಯಲ್ಲಿ ತಮ್ಮ ಹೆಸರು, ಫೋನ್ ನಂಬರ್, ಭೇಟಿಯ ಉದ್ದೇಶಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಪ್ರಾಥಮಿಕ ವೈದ್ಯಕೀಯ ತಪಾಸಣೆಗೆ ಸಹಕರಿಸಬೇಕು.
ಹಾಗೇ ಭವನಕ್ಕೆ ಆಗಮಿಸುವ ಶಾಸಕರೊಂದಿಗೆ ಅವರ ಆಪ್ತಸಹಾಯಕ, ಕಾರು ಚಾಲಕ ಮತ್ತು ಅಂಗರಕ್ಷಕರು ಮಾತ್ರ ಬರಬಹುದು. ಪಾರ್ಕಿಂಗ್ ಸ್ಥಳದಲ್ಲಿ ಶಾಸಕರ ವಾಹನಗಳನ್ನು ಮಾತ್ರ ನಿಲ್ಲಿಸಬಹುದು. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಶೇ.30ರಷ್ಟು ನಕಲಿ ಪೈಲಟ್ಗಳು…ಹಣ ಕೊಟ್ಟು ಲೈಸನ್ಸ್ ಪಡೆದವರು !
ಶಾಸಕರ ಭವನದಲ್ಲಿರುವ ಎಲ್ಲ ಸಿಬ್ಬಂದಿಯನ್ನೂ ಕೊವಿಡ್-19 ಟೆಸ್ಟ್ಗೆ ಒಳಪಡಿಸಲಾಗುವುದು. ಹಾಗೂ ಯಾರಾದರೂ ಅಲ್ಲಿ ಅನಗತ್ಯವಾಗಿ ವಾಸವಾಗಿದ್ದರೆ, ಅವರನ್ನು ಅಲ್ಲಿಂದ ಕಳಿಸಲಾಗುವುದು ಹಾಗೂ ಸಾಮಾಜಿಕ ಅಂತರ ನಿಯಮ, ಮಾಸ್ಕ್ ಧರಿಸುವುದನ್ನೆಲ್ಲ ಕಡ್ಡಾಯವಾಗಿ ಪಾಲಿಸಬೇಕು ಎಂಬ ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿದೆ.