

ಬೆಂಗಳೂರು: ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಂಕಿನ ನಿಯಂತ್ರಣಕ್ಕೆ ಮೇಲ್ವಿಚಾರಕರನ್ನು ನೇಮಿಸಿ ಆದೇಶ ಹೊರಡಿಸಿದೆ. ಉಪ ಮುಖ್ಯಮಂತ್ರಿ ಸೇರಿ ಐವರಿಗೆ ವಿವಿಧ ಜವಾಬ್ದಾರಿಗಳನ್ನು ನೀಡಲಾಗಿದೆ.
ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಜಗದೀಶ್ ಶೆಟ್ಟರ್ಗೆ ಆಕ್ಸಿಜನ್ ಸರಬರಾಜು ಮೇಲ್ವಿಚಾರಣೆ ನೀಡಲಾಗಿದೆ. ಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ್ ಅವರಿಗೆ ರೆಮ್ಡಿಸಿವಿರ್ ಹಾಗೂ ಇತರ ಕೋವಿಡ್ ಸಂಬಂಧಿ ಪ್ರಮುಖ ಔಷಧಗಳ ನಿರ್ವಹಣೆ ಹಾಗೂ ಅಗತ್ಯ ಮಾನವ ಸಂಪನ್ಮೂಲ ನಿರ್ವಹಣೆಯ ಮೇಲ್ವಿಚಾರಣೆ ಜವಾಬ್ದಾರಿ ಕೊಡಲಾಗಿದೆ.
ಗೃಹ ಸಚಿವರ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಬೆಡ್ ಸಮಸ್ಯೆಗಳ ನಿವಾರಣೆಯ ಮೇಲ್ವಿಚಾರಣೆ ಕೊಡಲಾಗಿದೆ. ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರಿಗೆ ವಾರ್ ರೂಂ, ಕಾಲ್ ಸೆಂಟರ್ಗಳ ನಿರ್ವಹಣೆ ಹಾಗೂ ಸೋಂಕಿತರಿಗೆ ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ನೀಡಲಾಗಿದೆ. ಈ ನಾಲ್ಕು ಮೇಲ್ವಿಚಾರಣೆಯಲ್ಲಿ ಯಾವ ಯಾವ ಕೆಲಸಗಳನ್ನು ಮಾಡಬೇಕಿದೆ ಎನ್ನುವುದನ್ನೂ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.