ಕರೊನಾ ವೈರಸ್ ಚೀನಾದ ಜೈವಿಕಾಸ್ತ್ರ!: ಶುರುವಾಯ್ತೇ 3ನೇ ವಿಶ್ವಯುದ್ಧ? ಆರು ವರ್ಷದ ಹಿಂದಿನ ದಾಖಲೆ ಸೋರಿಕೆ

Front Anchor
Published on

ನವದೆಹಲಿ: ಮೂರನೇ ವಿಶ್ವಯುದ್ಧದಲ್ಲಿ ಜೈವಿಕ ಮತ್ತು ಸೈಬರ್ ಅಸ್ತ್ರಗಳ ಬಳಕೆ ಆಗಬಹುದೆಂಬ ಅನುಮಾನಕ್ಕೆ ಪೂರಕವಾಗಿ ಕರೊನಾ ವೈರಸ್ ಮುಂದಿಟ್ಟುಕೊಂಡು ಚೀನಾ ಇಂಥದ್ದೊಂದು ಪ್ರಯೋಗ ಮಾಡಿದೆ ಎಂಬ ಆತಂಕಕಾರಿ ಅಂಶ ಇತ್ತೀಚೆಗೆ ಸೋರಿಕೆಯಾಗಿ ರುವ ಚೀನಾದ ಪೀಪಲ್ಸ್ ಲಿಬರೇಷನ್ ಆರ್ವಿು(ಪಿಎಲ್​ಎ)ಸೇನಾ ದಾಖಲೆಗಳಲ್ಲಿ ಬಹಿರಂಗವಾಗಿದೆ. ಅಮೆರಿಕದ ಸ್ಟೇಟ್ ಡಿಪಾರ್ಟ್ ಮೆಂಟ್​ಗೆ ಅದರ ಪ್ರತಿ ಲಭ್ಯವಾಗಿದೆ.

ಏನಿದೆ ವರದಿಯಲ್ಲಿ?: 6 ವರ್ಷದ ಹಿಂದೆ ಚೀನಾದ ಸೇನಾ ವಿಜ್ಞಾನಿಗಳು ‘ಸಾರ್ಸ್ ಕರೊನಾ ವೈರಸ್’ಗಳನ್ನು ಜೈವಿಕ ಅಸ್ತ್ರವನ್ನಾಗಿ ಬಳಸುವ ಚಿಂತನೆ ನಡೆಸಿದ್ದರು. 2015ರಲ್ಲೇ ಚೀನಾದ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮತ್ತು ಸೇನಾ ವಿಜ್ಞಾನಿಗಳು ಸೇರಿ ಬರೆದ ದಾಖಲೆ ಇದಾಗಿದೆ. ಆಸ್ಟ್ರೇಲಿಯಾ ಮಾಧ್ಯಮ ಕೂಡ ಈ ಕುರಿತು ವರದಿ ಮಾಡಿದೆ.

ಭೀಕರ ವಿನಾಶದ ಉಲ್ಲೇಖ: ಸಾರ್ಸ್ ಕರೊನಾ ವೈರಸ್ ‘ಹೊಸಯುಗದ ಜೈವಿಕ ಅಸ್ತ್ರ’ ಎಂಬ ವ್ಯಾಖ್ಯಾನ ದಾಖಲೆಯಲ್ಲಿದ್ದು, ಅದು ಕೃತಕವಾಗಿ ರೂಪಾಂತರಗೊಂಡು ಮನುಷ್ಯರಿಗೆ ಸೋಂಕು ಹರಡುವ ವೈರಸ್ ಆಗಿ ಮುಂಚೂಣಿಗೆ ಬರಲಿದೆ. ಆಗ ಅದನ್ನು ಜೈವಿಕ ಅಸ್ತ್ರವಾಗಿ ಬಳಸಿಕೊಂಡರೆ ಹಿಂದೆಂದೂ ನೋಡಿರದ ಭೀಕರ ವಿನಾಶವನ್ನು ಕಾಣಬಹುದು ಎಂಬ ಉಲ್ಲೇಖವಿದೆ.

ಸೇನಾ ದಾಖಲೆ ಇದು: ‘ದ ಅನ್​ನ್ಯಾಚುರಲ್ ಒರಿಜಿನ್ ಆಫ್ ಸಾರ್ಸ್ ಆಂಡ್ ನ್ಯೂ ಸ್ಪೀಶೀಸ್ ಆಫ್ ಮ್ಯಾನ್ ಮೇಡ್ ವೈರಸಸ್ ಆಸ್ ಜೆನೆಟಿಕ್ ಬಯೋವೆಪನ್ಸ್’ ಎಂಬುದು ಬಹಿರಂಗಗೊಂಡಿರುವ ಚೀನಾ ಸೇನಾ ದಾಖಲೆಯ ಶೀರ್ಷಿಕೆ. ಇದರಲ್ಲಿ ಚೀನಾ ಸೇನೆ ಜೈವಿಕಾಸ್ತ್ರಗಳ ಕುರಿತು ಮಾಡಿಕೊಂಡಿರುವ ಯೋಜನೆಗೆ ಸಂಬಂಧಿಸಿದ ಅಂಶಗಳಿವೆ. ಚೀನೀ ಭಾಷೆಯಲ್ಲಿರುವ ಈ ದಾಖಲೆಯಲ್ಲಿ ಜೈವಿಕಾಸ್ತ್ರ ಪ್ರಯೋಗಿಸಿದರೆ ಶತ್ರು ರಾಷ್ಟ್ರದ ವೈದ್ಯಕೀಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟುಹೋಗುವುದೆಂಬ ಅಂಶ ಉಲ್ಲೇಖಿಸಲಾಗಿದೆ. 18 ಲೇಖಕರು ಈ ದಾಖಲೆಯನ್ನು ಸಿದ್ಧಪಡಿಸಿದ್ದು ಎಲ್ಲರೂ ಪಿಎಲ್​ಎಯ ವಿಜ್ಞಾನಿಗಳು ಮತ್ತು ಶಸ್ತ್ರ ಪರಿಣತರಾಗಿದ್ದಾರೆ ಎಂಬ ಅಂಶದ ಕಡೆಗೆ ದ ಆಸ್ಟ್ರೇಲಿಯನ್ ಬೆಳಕು ಚೆಲ್ಲಿದೆ.

ಕೋವಿಡ್ 19 ರೂಪಾಂತರ ಹೇಗೆ?

  • ವೈರಾಣು ಸ್ಥಿರವಾಗಿ ಬದಲಾಗುತ್ತಿರುತ್ತವೆ. ಕರೊನಾ ವೈರಾಣು ತನ್ನಲ್ಲಿರುವ ಆರ್​ಎನ್​ಎ ಮೂಲಕ ಜೈವಿಕ ನೀಲಿನಕಾಶೆಯ ಸೂಚನೆ ಪಾಲಿಸುತ್ತದೆ. ಒಂದು ಜೀವಕೋಶವನ್ನು ಆವರಿಸಿಕೊಳ್ಳಲು ತನ್ನದೇ ಪ್ರತಿರೂಪ ಸೃಷ್ಟಿಸುತ್ತ ಹೋಗುತ್ತದೆ.
  • ಆ ಜೀವಕೋಶ ತಪ್ಪುಗಳನ್ನು ಮಾಡುವಂತಹ ಸೂಚನೆಗಳನ್ನು ಪಾಲಿಸುತ್ತದೆ - ಆ ಮೂಲಕ ಅದರಲ್ಲಿರುವ ವೈರಸ್ ಬೆಳವಣಿಗೆ ಹೊಂದಲು ಅವಕಾಶ ಮಾಡಿಕೊಡುತ್ತದೆ.
  • ಜನರ ನಡುವೆ ಈಗಾಗಲೇ ವೈರಾಣುಗಳ ರೂಪಾಂತರ ಶುರುವಾಗಿದೆ. ವಿಜ್ಞಾನಿಗಳಿಗೆ ವೈರಾಣುಗಳ ಚಲನೆ ಟ್ರಾ್ಯಕ್ ಮಾಡುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ.

‘ಚೀನಾ ಸೇನೆಯ ಈ ದಾಖಲೆ ಸದ್ಯ ನಮಗೆ ಸಿಕ್ಕಿರುವ, ಬುಲೆಟ್ ಫೈರ್ ಆಗಿ ಹೊಗೆಯಾಡುತ್ತಿರುವ ಬಂದೂಕಿನಂತಹ ಸಾಕ್ಷ್ಯವಾಗಿದೆ. 6 ವರ್ಷಗಳ ಹಿಂದೆಯೇ ಕರೊನಾ ವೈರಾಣುವಿನ ವಿವಿಧ ಮಾದರಿಗಳನ್ನು ಜೈವಿಕ ಅಸ್ತ್ರವಾಗಿ ಬಳಸುವ ವಿಚಾರ ಚಿಂತನೆಯಲ್ಲಿತ್ತು ಎಂಬುದೇ ಈ ದಾಖಲೆಯ ಮಹತ್ವವನ್ನು ಸಾರಿದೆ. ಸೇನಾ ಬಳಕೆಗೆ ಸಿದ್ಧಪಡಿಸಿದ ಈ ವೈರಾಣು ಅನಿರೀಕ್ಷಿತವಾಗಿ ಸೋರಿಕೆಯಾಗಿ ವಿಶ್ವವನ್ನು ದುರಂತಕ್ಕೆ ತಳ್ಳಿದೆ ಎಂಬ ಸಿದ್ಧಾಂತಕ್ಕೆ ಇನ್ನಷ್ಟು ಬಲ ಬಂದಂತಾಗಿದೆ’ ಎಂದು ಆಸ್ಟ್ರೇಲಿಯನ್ ಸ್ಟ್ರಾಟಜಿ ಪಾಲಿಸಿ ಇನ್​ಸ್ಟಿಟ್ಯೂಟ್​ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಪೀಟರ್ ಜೆನ್ನಿಂಗ್ಸ್ ಹೇಳಿದ್ದಾರೆ.

ದಾಖಲೆಯ ದೃಢೀಕರಣ: ಚೀನಾ ಪಿಎಲ್​ಎಯ ಈ ದಾಖಲೆಯನ್ನು ಡಿಜಿಟಲ್ ಫಾರೆನ್ಸಿಕ್ ಪರಿಣತರು ದೃಢೀಕರಿಸಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಕೆನಡಾ ಸರ್ಕಾರದ ಜತೆಗೆ ಕೆಲಸ ಮಾಡುತ್ತಿರುವ ಡಿಜಿಟಲ್ ಫಾರೆನ್ಸಿಕ್ ಪರಿಣತ ರಾಬರ್ಟ್ ಪಾಟರ್ ಹೇಳುವ ಪ್ರಕಾರ, ಚೀನಾದ ಇಂಟರ್​ನೆಟ್ ಜಾಲದಲ್ಲಿ ಈ ದಾಖಲೆಯ ಸಂಕ್ಷಿಪ್ತ ವಿವರಣೆ ಮತ್ತು ಕೆಲವು ಭಾಗಗಳು ಲಭ್ಯ ಇವೆ. ಈ ದಾಖಲೆಗಳು ‘ವಾಟ್ ರಿಯಲೀ ಹ್ಯಾಪನ್ಡ್ ಇನ್ ವುಹಾನ್?’ ಎಂಬ ಶೀರ್ಷಿಕೆಯ ಪುಸ್ತಕದಲ್ಲಿ ಸೇರ್ಪಡೆಗೊಳ್ಳಲಿವೆ.

ಬ್ರೆಜಿಲ್ ಅಧ್ಯಕ್ಷ ನೇರ ಆರೋಪ: ಚೀನಾ ಜೈವಿಕ ಸಮರವನ್ನು ಆರಂಭಿಸಿದೆ ಎಂದು ಬ್ರೆಜಿಲ್ ಅಧ್ಯಕ್ಷ ಜೇರ್ ಬೊಲ್ಸನಾರೋ ಇತ್ತೀಚೆಗೆ ನೇರ ಆರೋಪ ಮಾಡಿದ್ದರು. ‘ಇದು ಹೊಸ ವೈರಾಣು. ಇದು ಲ್ಯಾಬ್​ನಲ್ಲಿ ಹುಟ್ಟಿದ್ದೋ ಅಥವಾ ಯಾವ ಪ್ರಾಣಿಯನ್ನು ತಿನ್ನಬಾರದಾಗಿತ್ತೋ ಅದನ್ನು ತಿಂದು ಮನುಷ್ಯನ ಮೂಲಕ ಹರಡಿದ್ದೋ ಯಾರಿಗೂ ಗೊತ್ತಿಲ್ಲ. ಆದರೆ, ಕೆಮಿಕಲ್, ಬಯಾಲಾಜಿಕಲ್, ರೇಡಿಯಾಲಜಿಕಲ್ ಅಸ್ತ್ರಗಳ ಬಗ್ಗೆ ಸೇನೆಗೆ ಎಲ್ಲವೂ ಗೊತ್ತಿದೆ. ಹೊಸ ಯುದ್ಧವನ್ನು ನಾವು ಎದುರಿಸುತ್ತಿದ್ದೇವಾ? ಒಂದು ದೇಶದ ಜಿಡಿಪಿ ಮಾತ್ರ ಬಹಳಷ್ಟು ಬೆಳವಣಿಗೆ ಆಗಿರುವುದು ನನಗೆ ನಿಜಕ್ಕೂ ಅಚ್ಚರಿ ಯಾಗುವ ವಿಚಾರ’ ಎಂದು ಚೀನಾ ವಿರುದ್ಧ ಬೊಲ್ಸನಾರೋ ಕಿಡಿಕಾರಿದ್ದರು.

ಮುಚ್ಚಿಹಾಕಲು ಪ್ರಯತ್ನಿಸಿತ್ತು ಚೀನಾ: ಕಳೆದ ವರ್ಷ ಕೋವಿಡ್ ವ್ಯಾಪಕವಾದ ಸಂದರ್ಭದಲ್ಲಿ ಜೈವಿಕ ಸಮರದ ಸಿದ್ಧಾಂತವನ್ನು ಮುಚ್ಚಿ ಹಾಕಲು ಚೀನಾ ಪ್ರಯತ್ನಿಸಿತ್ತು. ಆದರೆ, ಈಗ ಮತ್ತೆ ಕೋವಿಡ್ ಸಂಕಷ್ಟಕ್ಕೆ ವಿವಿಧ ದೇಶಗಳು ತಲ್ಲಣಗೊಂಡಿರುವ ಬೆನ್ನಿಗೆ ಚೀನಾ ಸೇನೆಯ ದಾಖಲೆ ಬಹಿರಂಗವಾಗಿರುವುದು ಜೈವಿಕ ಸಮರದ ಸಂದೇಹಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ವೈರಾಣುವಿನ ಹುಟ್ಟಿನ ಮೂಲದ ಕುರಿತು ಚೀನಾ ಪಾರದರ್ಶಕವಾಗಿ ನಡೆದುಕೊಂಡಿಲ್ಲ ಎಂಬ ಮಾತಿಗೆ ಇನ್ನಷ್ಟು ಬಲ ಬಂದಂತಾಗಿದೆ.

ವೈರಾಣು ಸಂಶೋಧನೆ ಯಾವಾಗಿನಿಂದ?: ಚೀನಾದಲ್ಲಿ ಕರೊನಾ ವೈರಾಣು ಸಂಶೋಧನೆ 2012ರಲ್ಲೇ ಆರಂಭವಾಗಿದೆ. ಅಲ್ಲಿನ ನ್ಯಾಷನಲ್ ನ್ಯಾಚುರಲ್ ಸೈನ್ಸ್ ಫೌಂಡೇಶನ್ ಆಫ್ ಚೀನಾ ಇದಕ್ಕೆ ಅನುದಾನ ನೀಡಿತ್ತು. ಕ್ಸು ಜಿಯಾಗುವೋ ನೇತೃತ್ವದಲ್ಲಿ ಈ ಯೋಜನೆ ನಡೆಯುತ್ತಿತ್ತು. 2019ರ ಸಮಾವೇಶವೊಂದರಲ್ಲಿ ಅವರು, ‘ಒಂದು ಬೃಹತ್ ಸೋಂಕು ಹರಡುವ ಜಾಲ ಮತ್ತು ಅದನ್ನು ತಡೆಯುವ ಪ್ರಯತ್ನಕ್ಕೆ ಒಂದು ರೂಪು ಸಿಕ್ಕಿದೆ’ ಎಂದು ಹೇಳಿಕೊಂಡಿದ್ದರು. ವುಹಾನ್​ನಲ್ಲಿ ಕೋವಿಡ್ ತುರ್ತಪರಿಸ್ಥಿತಿ ವೇಳೆ ಅದರ ತನಿಖೆಯ ಪರಿಣತರ ಗುಂಪನ್ನು ಇದೇ ಪ್ರೊಫೆಸರ್ ಮುನ್ನಡೆಸಿದ್ದರು. ಆರಂಭದಲ್ಲಿ ಜನ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಮನುಷ್ಯರಲ್ಲಿ ಕೋವಿಡ್ ಹರಡುತ್ತಿದೆ ಎಂಬುದನ್ನು ಈ ಪ್ರೊಫೆಸರ್ ನಿರಾಕರಿಸಿದ್ದರು. 2020ರ ಜನವರಿಯ ಮಧ್ಯಭಾಗದಲ್ಲಿ ಇದು ಸೀಮಿತ ಸೋಂಕು ಎಂದು ತೇಪೆಹಚ್ಚಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net