

ನವದೆಹಲಿ: ಭಾರತದಲ್ಲಿ ಕಳೆದ 24 ತಾಸಿನ ಅವಧಿಯಲ್ಲಿ 1,421ಕ್ಕೂ ಹೆಚ್ಚು ಮಂದಿ ಕರೊನಾ ಸೋಂಕಿಗೆ ತುತ್ತಾಗಿದ್ದು, ಇದು ಭಾರತದಲ್ಲಿ ಒಂದೇ ದಿನ ಪಾಸಿಟಿವ್ ಬಂದ ಅತ್ಯಧಿಕ ಸಂಖ್ಯೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 19,960ಕ್ಕೆ ಮುಟ್ಟಿದೆ.
ಕಳೆದ 24 ತಾಸಿನಲ್ಲಿ 17 ಸಾವಿನ ಪ್ರಕರಣಗಳು ವರದಿಯಾಗಿದ್ದು, ಮೃತರ ಸಂಖ್ಯೆ 608ಕ್ಕೆ ಏರಿದೆ. 3,713 ಮಂದಿ ಗುಣಮುಖರಾಗಿದ್ದು, 15,638 ಸಕ್ರಿಯ ಪ್ರಕರಣಗಳಿವೆ.
ಕಳೆದ ವಾರಕ್ಕೆ ಹೋಲಿಸಿದರೆ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ಧಿ ಕಂಡಿದ್ದು, ಶೇ. 17.48ಕ್ಕೆ ಮುಟ್ಟಿದೆ. ಕಳೆದ ಮಂಗಳವಾರ ಶೇ. 9.99 ಇತ್ತು. ಒಂದೇ ದಿನ ಗುಣಮುಖರಾದವರ ಗರಿಷ್ಠ ಸಂಖ್ಯೆ 705 ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ವಿಶ್ವದಲ್ಲಿ ಸೋಂಕಿತರ ಸಂಖ್ಯೆ 25 ಲಕ್ಷ ದಾಟಿದ್ದು, 24 ತಾಸಿನಲ್ಲಿ 50 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. 24 ತಾಸಿನಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಒಟ್ಟು ಸಂಖ್ಯೆ 1.72 ಲಕ್ಷ ಮೀರಿದೆ.
ಮಹಾರಾಷ್ಟ್ರದಲ್ಲಿ ಹೆಚ್ಚು ಸೋಂಕಿತರು: ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರ ಒಂದರಲ್ಲೇ 24 ತಾಸಿನಲ್ಲಿ 550 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5,218ಕ್ಕೆ ಮುಟ್ಟಿದೆ. ಮರಣ ಹೊಂದಿದವರ ಸಂಖ್ಯೆ 232ಕ್ಕೆ ಏರಿದೆ. ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪೀಡಿತ ಪ್ರದೇಶ ಮತ್ತು ವೈರಾಣು ಶಂಕಿತ ಸ್ಥಳಗಳಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ವಿತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.