ಕರೊನಾ ವೈರಸ್ ಮುಕ್ತ ಜಿಲ್ಲೆ ಚಾಮರಾಜನಗರ

chamaraja nagara
Published on

ಚಾಮರಾಜನಗರ: ಭಾಗಶಃ ಅರಣ್ಯ ಪ್ರದೇಶದೊಂದಿಗೆ ಹಚ್ಚ ಹಸಿರಿನಿಂದ ಕೂಡಿರುವ ಗಡಿಜಿಲ್ಲೆ ಚಾಮರಾಜನಗರ ಕರೊನಾ ಮುಕ್ತ ಜಿಲ್ಲೆಯಾಗಿಯೂ ಗ್ರೀನ್​ಜೋನ್​ನಲ್ಲಿ ಕಂಗೊಳಿಸುತ್ತಿದೆ. ನೆರೆ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಸೋಂಕು ವ್ಯಾಪಿಸಿದರೂ, ಮಗ್ಗುಲಲ್ಲೇ ಇರುವ ಮೈಸೂರು ಮತ್ತು ಮಂಡ್ಯ ಹಾಟ್​ಸ್ಪಾಟ್​ಗಳಾಗಿದ್ದರೂ ಚಾಮರಾಜನಗರದಲ್ಲಿ ಈವರೆಗೂ ಒಂದೂ ಪ್ರಕರಣ ದೃಢಪಟ್ಟಿಲ್ಲ.

ವಿದೇಶಗಳಿಂದ ಪ್ರಯಾಣಿಸಿ ಜಿಲ್ಲೆಗೆ ಮರಳಿದ್ದ 43 ಜನರು, ದೆಹಲಿಯ ನಿಜಾಮುದ್ದೀನ್​ನಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಭಾಗವಹಿಸಿದ್ದ 107 ತಬ್ಲಿಘಿಗಳು, ಮೈಸೂರಿಗೆ ಕಂಟಕವಾಗಿರುವ ನಂಜನಗೂಡಿನ ಜುಬಿಲೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ 52 ಜನರ ವರದಿ ನೆಗೆಟಿವ್ ಬಂದಿದೆ. ಇದೀಗ ತೀವ್ರ ಉಸಿರಾಟದ ತೊಂದರೆ ಮತ್ತು ಜ್ವರ, ಶೀತದ ಲಕ್ಷಣ ಇರುವವರನ್ನು ಪತ್ತೆಹಚ್ಚಿ ಪರೀಕ್ಷೆಗೊಳಪಡಿಸಲಾಗುತ್ತಿದೆ. ಪ್ರಸ್ತುತ ಇಂತಹ ಇಬ್ಬರ ವರದಿಯೂ ನೆಗೆಟಿವ್ ಬಂದಿದೆ. ಕ್ವಾರಂಟೈನ್​ನಲ್ಲಿದ್ದ ಇಬ್ಬರು ಶಂಕಿತರನ್ನೂ ಸೋಮವಾರ ಮನೆಗೆ ಕಳುಹಿಸಲಾಗಿದೆ.

ಕೇರಳದಲ್ಲಿ ಶಂಕಿತರೊಬ್ಬರು ಆಸ್ಪತ್ರೆಗೆ ದಾಖಲಾದ ಸುದ್ದಿ ಹೊರಬೀಳುತ್ತಿದ್ದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಯಿತು. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗುಂಡ್ಲುಪೇಟೆಯ ಮೂಲೆಹೊಳೆ ಮತ್ತು ತಮಿಳುನಾಡಿನ ಕೆಕ್ಕನಹಳ್ಳ ಚೆಕ್​ಪೋಸ್ಟ್​ನಲ್ಲಿ ಆಗಮಿಸುವ ಮತ್ತು ನಿರ್ಗಮಿಸುವವರ ಆರೋಗ್ಯ ತಪಾಸಣೆ ಮಾಡಲಾಯಿತು. ಹೊರ ರಾಜ್ಯಗಳಿಂದ ಬರುವ ಸಾರ್ವಜನಿಕರನ್ನು ಬಸ್ ನಿಲ್ದಾಣಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಸ್ಕ್ರೀನಿಂಗ್ ಮಾಡಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಿತು. ಬೆಳಗಾಗುವುದರೊಳಗೆ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕರೊನಾ ವಿಶೇಷ ವಾರ್ಡ್​ಗಳು ಸ್ಥಾಪನೆಯಾದವು. ಕ್ವಾರಂಟೈನ್ ಕೇಂದ್ರವೂ ಸಿದ್ಧವಾದವು. ಶಂಕಿತರು ಕ್ವಾರಂಟೈನ್ ಕೇಂದ್ರಕ್ಕೆ ಬರಲು ಒಪ್ಪದಿದ್ದರೆ ಪೊಲೀಸರನ್ನು ಬಳಸಿ ಕರೆತರುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಖಡಕ್ ಸೂಚನೆ ನೀಡಿ ಕಾರ್ಯ ಸಾಧಿಸಿದರು. ಹೀಗಾಗಿ ಹೋಂ ಕ್ವಾರಂಟೈನ್​ನಲ್ಲಿದ್ದವರು ಸಾರ್ವಜನಿಕವಾಗಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದರೆನ್ನುವ ಯಾವುದೇ ಪ್ರಕರಣಗಳು ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿಲ್ಲ.

ಡಿಸಿ, ಎಸ್​ಪಿ ಕಟ್ಟೆಚ್ಚರ

ಕರೊನಾ ಪ್ರಕರಣಗಳು ಧೃಡಪಟ್ಟಿರುವ ರಾಜ್ಯ ಮತ್ತು ಜಿಲ್ಲೆಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಯಿತು. ಅಗತ್ಯ ಮತ್ತು ಕೃಷಿ ಸಂಬಂಧಿತ ವಸ್ತುಗಳ ಸರಬರಾಜಿಗೆ ಅವಕಾಶ ನೀಡಲಾಯಿತು. ಅಂತಾರಾಜ್ಯದಲ್ಲಿ 6, ಅಂತರ ಜಿಲ್ಲೆಗಳಲ್ಲಿ 6 ಚೆಕ್​ಪೋಸ್ಟ್​ಗಳನ್ನು ನಿರ್ವಿುಸಲಾಗಿದೆ. ಜಿಲ್ಲೆಯೊಳಗೆ ಅನಗತ್ಯ ಸಂಚಾರ ತಡೆಯಲು 14 ಕಡೆ ನಾಕಾಬಂಧಿ ಹಾಕಲಾಗಿದೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದ್​ಕುಮಾರ್ ತಡ ರಾತ್ರಿಗಳಲ್ಲಿ ಚೆಕ್​ಪೋಸ್ಟ್​ಗಳಿಗೆ ತೆರಳಿ ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಕಟ್ಟೆಚ್ಚರ ವಹಿಸಲು ಸೂಚನೆ ನೀಡಿದ್ದಾರೆ. ಇನ್ನು ಜಿಲ್ಲೆಯ ಜನರೂ ಕರೊನಾ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಹಳ್ಳಿಗಳಲ್ಲಿ ಸ್ವಯಂ ದಿಗ್ಬಂಧನ ವಿಧಿಸುವ ಮೂಲಕ ಹೊರಗಿನವರ ಪ್ರವೇಶಕ್ಕೆ ಅವಕಾಶ ನೀಡದಿರುವುದು, ನೆರೆಯ ಜಿಲ್ಲೆಗಳಿಂದ ಗ್ರಾಮಕ್ಕೆ ಬಂದವರ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಜಾಗ್ರತೆ ವಹಿಸಿದ್ದಾರೆ.

ಜಿಲ್ಲೆಯಲ್ಲಿ ಚೆಕ್​ಪೋಸ್ಟ್​ಗಳ ರಚನೆ, ಲಾಕ್​ಡೌನ್ ನಿರ್ದೇಶನದ ಸಂಪೂರ್ಣ ಪಾಲನೆ, ಮುಗ್ಧ ಜನರು ಕರೊನಾ ವಿರುದ್ಧ ಹೋರಾಡಲು ತೋರಿದ ಪ್ರಬುದ್ಧತೆ, ಆರೋಗ್ಯ ಇಲಾಖೆ ಸೇರಿ ಇತರ ಇಲಾಖೆಗಳ ಸಿಬ್ಬಂದಿ ಶ್ರಮ, ಜಿಲ್ಲಾಡಳಿತ ತೆಗೆದುಕೊಂಡ ಸಮಯೋಚಿತ ನಿರ್ಧಾರಗಳು ಚಾಮರಾಜನಗರವನ್ನು ಕರೊನಾ ಮುಕ್ತವನ್ನಾಗಿ ಉಳಿಸಿದೆ.

| ಡಾ.ಎಂ.ಆರ್.ರವಿ ಜಿಲ್ಲಾಧಿಕಾರಿ, ಚಾಮರಾಜನಗರ

ಕಿರಣ್ ಮಾದರಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net