

ಬೆಂಗಳೂರು: ವಿಶ್ವವನ್ನೇ ಬೆಚ್ಚಿಬೀಳಿಸಿರುವ ಮಹಾಮಾರಿ ಕರೊನಾ ವೈರಸ್ ಬಾವಲಿಗಳಿಂದ ಹರಡುವುದಿಲ್ಲ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಂಶೋಧನೆಯಿಂದ ತಿಳಿದುಬಂದಿದೆ.
ಕೆಲವು ಸುದ್ದಿವಾಹಿನಿಗಳಲ್ಲಿ ಬಾವಲಿಗಳಿಂದ ಕರೊನಾ ವೈರಸ್ ಹರಡುತ್ತದೆ ಎಂಬ ಸುದ್ದಿ ವ್ಯಾಪಕವಾಗಿ ಹರಡಿದ್ದು, ಬಾವಲಿಗಳು ವಾಸಿಸುವ ತಾಣಗಳನ್ನು ನಾಶ ಮಾಡಲು ಮುಂದಾಗುತ್ತಿದ್ದಾರೆ. ಚೀನಾದಲ್ಲಿ ಬಾವಲಿಗಳಿಂದ ಹಂದಿ, ಹಾವು ಹಾಗೂ ಚಿಪು್ಪ ಹಂದಿಗೆ ವೈರಸ್ ಹರಡಿ ಅದು ಮಾನವನಿಗೆ ಅಂಟಿಕೊಂಡಿದೆ ಎಂಬ ಊಹೆ ವ್ಯಕ್ತಪಡಿಸಿದೆ. ಆದರೆ ಬಾವಲಿಗಳಿಂದಲೇ ಮನುಷ್ಯನಿಗೆ ಕರೊನಾ ವೈರಸ್ ಹರಡುತ್ತದೆ ಎಂದು ಯಾವುದೇ ಸಂಶೋಧನೆಗಳಿಂದ ಸಾಬೀತಾಗಿಲ್ಲ. ಹೀಗಾಗಿ ಬಾವಲಿಗಳಿಂದ ಮನುಷ್ಯನಿಗೆ ಕರೊನಾ ವೈರಸ್ ಹರಡುವುದಿಲ್ಲ ಎಂದು ಐಸಿಎಂಆರ್ ತಿಳಿಸಿದೆ.
ಬಾವಲಿಗಳಲ್ಲಿ ಕರೊನಾ ವೈರಸ್?: ಬಾವಲಿ ಸೇರಿ ಬಹಳಷ್ಟು ಪ್ರಾಣಿ-ಪಕ್ಷಿಗಳಲ್ಲಿ ಕರೊನಾ ವೈರಸ್ ಇರುವುದು ನಿಜ. ಆದರೆ ಕರೊನಾ ವೈರಸ್ನಲ್ಲಿ ಹಲವು ಪ್ರಬೇಧಗಳಿದ್ದು, ಕೆಲವು ವೈರಸ್ಗಳಿಂದ ಮಾನವನಿಗೆ ತೊಂದರೆಯಾಗುವುದಿಲ್ಲ ಎಂದು ಪುಣೆಯ ನ್ಯಾಷನಲ್ ಇನ್ಸ್ಟಿಟೂಟ್ ಆಫ್ ವೈರಾಲಜಿ ನಡೆಸಿದ ಸಂಶೋಧನೆ ತಿಳಿಸಿದೆ. ಅದೇ ರೀತಿ ಭಾರತೀಯ ಬಾವಲಿಗಳಲ್ಲಿರುವ ಕರೊನಾ ವೈರಸ್ನಿಂದ ಮಾನವನಿಗೆ ಹಾನಿಯಾಗುವುದಿಲ್ಲ ಎಂಬುದನ್ನು ಐಸಿಎಂಆರ್ ಸಾಬೀತು ಮಾಡಿದೆ.
ಬಾವಲಿಗಳ ತಾಣಕ್ಕೆ ಹಾನಿ: ಬಾವಲಿಗಳಲ್ಲಿ ನೂರಾರು ಪ್ರಬೇಧಗಳಿದ್ದು, ಮೆಗಾಬ್ಯಾಟ್(ದೊಡ್ಡ ಗಾತ್ರ) ಮೈಕ್ರೋಬ್ಯಾಟ್ (ಸಣ್ಣ ಗಾತ್ರ) ಮುಖ್ಯವಾಗಿವೆ. ಇವುಗಳು ಮುಖ್ಯವಾಗಿ ಮರ, ಗುಹೆ, ಪಾಳು ಬಿದ್ದಿರುವ ಬಾವಿ, ಕಟ್ಟಡ, ಕಲ್ಲು ಸಂದಿ, ಮರದ ಪೊಟರೆ, ದೇವಾಲಯದ ಗೋಪುರಗಳು ಹಾಗೂ ಮನೆಗಳ ಹಂಚುಗಳಲ್ಲಿ ವಾಸಿಸುತ್ತವೆ. ಇವುಗಳಿಂದ ಕರೊನಾ ಸೇರಿ ಮಾರಕ ಕಾಯಿಲೆಗಳು ಬರುತ್ತವೆ ಎಂದು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಕೇರಳ, ಕರ್ನಾಟಕಗಳ ಕೆಲವು ಗ್ರಾಮೀಣ ಭಾಗಗಳು ಹಾಗೂ ಬೆಂಗಳೂರಿನ ಜೆ.ಪಿ. ನಗರಗಳಲ್ಲಿ ಮರಗಳನ್ನು ಕತ್ತರಿಸುವ ಹಾಗೂ ಪಾಳು ಬಾವಿಗಳಿಗೆ ಬೆಂಕಿ ಹಚ್ಚುವ ಪ್ರಯತ್ನಗಳು ನಡೆದಿವೆ.
ಹಣ್ಣು ತಿನ್ನದಿರುವುದು ಒಳಿತು: ನಮ್ಮ ಒಡನಾಡಿಗಳಾಗಿರುವ ಹಸು, ಎಮ್ಮೆ, ಕುರಿ, ಇಲಿ, ನಾಯಿ, ಕೋಳಿ ಹಾಗೂ ಬೆಕ್ಕುಗಳಲ್ಲಿಯೂ ವೈರಸ್ಗಳಿದ್ದು, ಅವುಗಳಿಂದ ಮನುಷ್ಯನಿಗೆ ಹಾನಿಯಾಗುವುದಿಲ್ಲ. ಅಂದಾಜಿನ ಪ್ರಕಾರ ಬಾವಲಿಗಳಿಗಿಂತ ನಾಯಿ, ಬೆಕ್ಕುಗಳಿಂದಲೇ ತೊಂದರೆ ಹೆಚ್ಚಾಗಿದೆ. ಕೆಲವು ಬಾವಲಿಗಳಿಂದ ನಿಫಾ, ಎಬೋಲಾದಂಥ ರೋಗ ಗಳು ಹರಡುವ ಸಾಧ್ಯತೆಯಿದ್ದು ಬಾವಲಿಗಳು ತಿಂದ ಹಣ್ಣುಗಳನ್ನು ತಿನ್ನದಿರುವುದು ಒಳ್ಳೆಯದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಬಾವಲಿಗಳಿಂದ ಆರೋಗ್ಯ ವೃದ್ಧಿ: ಒಂದು ಬಾವಲಿ ಗಂಟೆಗೆ 2 ಸಾವಿರ ಸೊಳ್ಳೆ ಅಥವಾ ನೊಣಗಳನ್ನು ತಿನ್ನುತ್ತದೆ. ಸೊಳ್ಳೆ, ನೊಣಗಳಿಂದ ಬರುವ ಮಲೇರಿಯಾ, ಕಾಲರಾ, ಡೆಂಗ್ಯೂ, ಚಿಕನ್ಗುನ್ಯಾ ಬರುವುದನ್ನು ತಡೆಯುತ್ತವೆ. ಪರಿಸರದಲ್ಲಿ ಬಾವಲಿಗಳು ಹೂವುಗಳ ಪರಾಗಸ್ಪರ್ಶ, ಹಣ್ಣುಗಳನ್ನು ತಿಂದು ಬೀಜಗಳನ್ನು ಬೇರೆಡೆ ಬೀಳಿಸುತ್ತವೆ. ಜತೆಗೆ ರಾತ್ರಿ ವೇಳೆ ಮಿಡತೆ, ಚಿಟ್ಟೆ, ಕಾಂಡಕೊರಕ, ಕಂಬಳಿ ಹುಳುಗಳನ್ನು ತಿನ್ನುವ ಮೂಲಕ ಬೆಳೆಗಳನ್ನು ರಕ್ಷಿಸುತ್ತವೆ ಎಂದು ಬ್ಯಾಟ್ ಕನ್ಸರ್ವೇಷನ್ ಇಂಡಿಯಾ ಟ್ರಸ್ಟ್ ಸಂಸ್ಥಾಪಕ ರಾಜೇಶ್ ಪುಟ್ಟಸ್ವಾಮಯ್ಯ ವಿಜಯವಾಣಿಗೆ ತಿಳಿಸಿದ್ದಾರೆ.
ಬಾವಲಿಗಳಿಂದ ಕರೊನಾ ವೈರಸ್ ಹರಡುವುದಿಲ್ಲ ಎಂದು ಐಸಿಎಂಆರ್ ಮಾಹಿತಿ ನೀಡಿದೆ. ಹೀಗಾಗಿ ರಾಜ್ಯದ ಎಲ್ಲ ಅರಣ್ಯಾಧಿಕಾರಿಗಳಿಗೆ ಬಾವಲಿಗಳ ತಾಣಗಳನ್ನು ರೈತರು ಅಥವಾ ಸಾರ್ವಜನಿಕರು ನಾಶಪಡಿಸದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜನರು ಪರಿಸರಸ್ನೇಹಿ ಬಾವಲಿಗಳ ತಾಣಗಳನ್ನು ನಾಶ ಮಾಡಬಾರದು. | ಸಂಜಯ್ ಮೋಹನ್ ರಾಜ್ಯ ಪ್ರಧಾನ ಅರಣ್ಯ ಸಂರಕ್ಷಣಾ ಅಧಿಕಾರಿ