ಪೊಲೀಸರಿಗೆ ಕಾಡುತ್ತಿರುವ ಕರೊನಾ; ಕಟ್ಟುನಿಟ್ಟಿನ ಕ್ರಮ ಸೂಚಿಸಿದ ಪೊಲೀಸ್​ ಆಯುಕ್ತರು...

bhaskar rao
Published on

ಬೆಂಗಳೂರು: ರಾಜ್ಯದಲ್ಲಿ ಪೊಲೀಸ್​ ಸಿಬ್ಬಂದಿಗೆ ಕರೊನಾ ಕಂಟಕವಾಗಿ ಪರಿಣಮಿಸುತ್ತಿದೆ. ಮೂವರು ಪೊಲೀಸರು ಕೊವಿಡ್​-19ನಿಂದ ಮೃತಪಟ್ಟಿದ್ದಾರೆ. ಹೀಗಿರುವಾಗ ಬೆಂಗಳೂರಿನಲ್ಲಿ ಪೊಲೀಸ್​ ಸಿಬ್ಬಂದಿ ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಪಟ್ಟಂತೆ ಪೊಲೀಸ್​ ಆಯುಕ್ತರು ಒಂದಷ್ಟು ಸೂಚನೆಗಳನ್ನು ನೀಡಿದ್ದಾರೆ.

ಮುಖ್ಯವಾಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 55 ವರ್ಷಗಳ ಮೇಲ್ಪಟ್ಟು ವಯಸ್ಸಾಗಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ವಿಶ್ರಾಂತಿ ನೀಡಬೇಕು. ಅವರು ಮನೆಯಲ್ಲೇ ಇರಬೇಕು. ಹಾಗೇ ಹೊರಗೂ ಹೋಗುವಂತಿಲ್ಲ ಎಂದು ಕಟ್ಟುನಿಟ್ಟಾಗಿ ಆದೇಶಿಸಿದ್ದಾರೆ. 55 ವರ್ಷದ ಮೇಲ್ಪಟ್ಟ ಸಿಬ್ಬಂದಿ ವಿಶ್ರಾಂತಿಗೆ ತೆರಳಿ, ಠಾಣೆಯಲ್ಲಿ ಸಿಬ್ಬಂದಿಯ ಕೊರತೆಯಾದರೆ ಹೋಂಗಾರ್ಡ್​ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅವರ ಸುರಕ್ಷತೆಯನ್ನೂ ನೋಡಿಕೊಂಡು, ಕಾರ್ಯನಿರ್ವಹಿಸಬೇಕು ಎಂದಿದ್ದಾರೆ.

ಇಲ್ಲಿದೆ ನೋಡಿ ಪೊಲೀಸ್ ಕಮಿಷನರ್​ ಅವರು ಹೊರಡಿಸಿದ ಸೂಚನೆಗಳು...

  • ಠಾಣೆಯ ಹೊರಗೇ ಸಾರ್ವಜನಿಕರಿಂದ ದೂರುಗಳನ್ನು ಆಲಿಸಬೇಕು. ಒಳಗೆ ಯಾರೂ ಬಾರದಂತೆ ನೋಡಿಕೊಳ್ಳಬೇಕು. ದೂರು ಕೇಳುವಾಗ ಸಾರ್ವಜನಿಕರಿಂದ ಪೊಲೀಸರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್​, ಕೈಗವಸುಗಳನ್ನು ಧರಿಸಬೇಕು. ಅಗತ್ಯವಿದ್ದಲ್ಲಿ ಪಿಪಿಇ ಕಿಟ್​ಗಳನ್ನೂ ಬಳಸಿಕೊಳ್ಳಬೇಕು.
  • ಹೊಯ್ಸಳ, ಚೀತಾ, ಕೋಬ್ರಾ, ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಠಾಣೆಯ ಹೊರಗೇ ಕರ್ತವ್ಯ ನಿರ್ವಹಿಸಬೇಕು. ಅನವಶ್ಯಕವಾಗಿ ಠಾಣೆಗೆ ಆಗಮಿಸಬಾರದು. ಹೊರಗೆ ಡ್ಯೂಟಿಯಲ್ಲಿದ್ದಾಗ ಮಾಸ್ಕ್​ ಧರಿಸಿರಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್​ ಬಳಕೆ ಮಾಡಬೇಕು.
  • ಅವಶ್ಯಕತೆ ಇಲ್ಲದಿದ್ದರೆ ಅಪರಾಧಿಗಳನ್ನು ಬಂಧಿಸುವ ಪ್ರಕ್ರಿಯೆ ಮಾಡಬಾರದು. ಠಾಣೆಯ ಸರಹದ್ದಿನಲ್ಲಿ 25 ಸಿಬ್ಬಂದಿ ಉಳಿಯಲು ಅನುಕೂಲ ಇರುವ, ಬಿಸಿನೀರು ಸಿಗುವ, ಶೌಚಗೃಹ ವ್ಯವಸ್ಥೆ ಇರುವ ಕಲ್ಯಾಣ ಮಂಟಪದ ವ್ಯವಸ್ಥೆಯನ್ನು ಪಿಐಗಳು ಮಾಡಬೇಕು.
  • ಠಾಣೆಯ ಒಳಭಾಗದಲ್ಲಿ ಕುಡಿಯಲು ಬಿಸಿ ನೀರು, ಕೈಕಾಲು ತೊಳೆಯಲು, ಸ್ನಾನ ಮಾಡಲು ಸಹ ಬಿಸಿ ನೀರು ಸಿಗುವಂತೆ ಅನುವು ಮಾಡಿಕೊಡಬೇಕು. ಠಾಣೆಯಲ್ಲಿ ಯಾವಾಗಲೂ ಸ್ಯಾನಿಟೈಸರ್​, ಮಾಸ್ಕ್​, ಪಿಪಿಇ ಕಿಟ್​ ಇರುವಂತೆ ನಿಗಾ ವಹಿಸಬೇಕು.
  • ಯಾವುದೇ ಠಾಣೆಯ ಪೊಲೀಸ್ ಸಿಬ್ಬಂದಿಯಲ್ಲಿ ಕೊವಿಡ್​-19 ದೃಢಪಟ್ಟರೆ, ಮತ್ಯಾರಾದರೂ ಕ್ವಾರಂಟೈನ್​ಗೆ ಹೋದರೆ ಉಳಿದವರು ಭಯಪಡದೆ, ಆತ್ಮಸ್ಥೈರ್ಯ ಕಳೆದುಕೊಳ್ಳದೆ ಕರ್ತವ್ಯ ನಿರ್ವಹಿಸಬೇಕು. ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನೂ ಕೈಗೊಳ್ಳಬೇಕು.
  • ಎಂಒಬಿ ರಿಕವರಿ ಮಾಡಬೇಕಾದಲ್ಲಿ ಇರುವ ತಂತ್ರಜ್ಞಾನ ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಠಾಣೆಗೆ ಹಂಚಿಕೆಯಾಗಿರುವ ಜೀಪ್​, ದ್ವಿಚಕ್ರವಾಹನ ವಾಹನಗಳಿಗೆ ಪ್ರತಿದಿನ ಸ್ಯಾನಿಟೈಸೇಶನ್​ ಮಾಡಬೇಕು.
  • ನಮ್ಮ ಅಧಿಕಾರಿ ಮತ್ತು ಸಿಬ್ಬಂದಿಗೆ ಕರೊನಾ ಪಾಸಿಟಿವ್​ ಕಂಡುಬಂದರೆ ಅಂಥವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದಲ್ಲಿ, ಅವರ ಆರೋಗ್ಯದ ಬಗ್ಗೆ ಕ್ಷಣಕ್ಷಣದ ಮಾಹಿತಿಯನ್ನೂ ನೀಡಬೇಕು. ಪೊಲೀಸ್​ ಕ್ವಾಟ್ರಸ್​​ಗಳಲ್ಲಿ ವಾಸವಾಗಿರುವ ಅಧಿಕಾರಿ, ಸಿಬ್ಬಂದಿಯ ಹಿತದೃಷ್ಟಿಯಿಂದ ಕ್ವಾಟ್ರಸ್​​​ಗಳಲ್ಲಿ ಸ್ಯಾನಿಟೈಸೇಶನ್​ ಮಾಡಬೇಕು. ಅಲ್ಲಿರುವವರಿಗೆ ಅಗತ್ಯವಾದ ಮಾಸ್ಕ್​, ಸ್ಯಾನಿಟೈಸರ್​ಗಳನ್ನು ಒದಗಿಸಬೇಕು. ಹೊರಗಿನವರು ಯಾರೂ ಕ್ವಾಟ್ರಸ್ ಪ್ರವೇಶ ಮಾಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
  • ಮುಖ್ಯವಾಗಿ ಉತ್ತರ ಕರ್ನಾಟಕದ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ಬೆಂಗಳೂರು ಬಿಟ್ಟು ಹೊರಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net