

ಬೀಜಿಂಗ್: ಚೀನಾಕ್ಕೆ ಭಾರತ ವೈದ್ಯಕೀಯ ಪರಿಹಾರ ಸಾಮಗ್ರಿಗಳನ್ನು ವಿಶೇಷ ವಿಮಾನದಲ್ಲಿ ಕಳಿಸುತ್ತಿದ್ದು ಅದು ವಾಪಸಾಗುವಾಗ ವುಹಾನ್ನಿಂದ ಅದರಲ್ಲಿ ಬರಲಿಚ್ಛಿಸುವ ಭಾರತೀಯರು ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂರ್ಪಸುವಂತೆ ಸೂಚಿಸಲಾಗಿದೆ.
ಕೊರೊನಾ ಶಂಕಿತರು ಮನೆಗೆ: ಚೀನಾದ ವುಹಾನ್ನಿಂದ ಭಾರತಕ್ಕೆ ಕರೆತರಲಾಗಿದ್ದ 650 ಜನರಿಗೆ ಕೊರೊನಾ ವೈರಸ್ ಸೋಂಕು ಇಲ್ಲ ಎಂದು ಪ್ರಯೋಗಾಲಯ ವರದಿ ಬಂದಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ಮನೆಗೆ ಕಳುಹಿಸಲಾಗುತ್ತಿದೆ ಎಂದು ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 650 ಮಂದಿಯಲ್ಲಿ 14 ಜನರು ಕರ್ನಾಟಕದವರಾಗಿದ್ದಾರೆ.
ಪ್ರಾಣಿಗಳಿಗೂ ಮಾಸ್ಕ್: ಕೊರೊನಾದಿಂದ ಆತಂಕಗೊಂಡಿರುವ ಚೀನಿಯರು ಇದೀಗ ಬೆಕ್ಕುಗಳಿಗೂ ಮುಖಗವಸು ತೊಡಿಸಲು ಆರಂಭಿಸಿದ್ದಾರೆ. ಈ ಚಿತ್ರಗಳು ಈಗ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಸಾಮಾನ್ಯವಾಗಿ ಬಳಸುವ ವೈದ್ಯಕೀಯ ಮುಖಗವಸುಗಳಲ್ಲೇ ತೂತು ಮಾಡಿ ಅದು ಕಣ್ಣಿನ ಭಾಗಕ್ಕೆ ಬರುವಂತೆ ಹಾಗೂ ಇಡೀ ಮುಖ ಮರೆಯಾಗುವಂತೆ ಬೆಕ್ಕುಗಳಿಗೆ ತೊಡಿಸುತ್ತಿದ್ದಾರೆ. ನಾಯಿಗಳು ಮತ್ತು ಬೆಕ್ಕಿನಂಥ ಸಾಕುಪ್ರಾಣಿಗಳಿಗೂ ವೈರಸ್ ಬಾಧಿಸಬಹುದು ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಎಚ್ಚರಿಸಿದೆ.