

ನವದೆಹಲಿ: ಕರೊನಾ ಲಸಿಕೆಗಳು ಮುಂದಿನ ವರ್ಷ ಏಪ್ರಿಲ್-ಜೂನ್ ಹೊತ್ತಿಗೆ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಆದಾಗ್ಯೂ ಮುಕ್ತ ಮಾರುಕಟ್ಟೆಯಲ್ಲಿ ಲಸಿಕೆಗಳು ಯಾವ ಬೆಲೆಗೆ ಲಭ್ಯವಾಗಲಿವೆ ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ ಎಂದು ಎಂದು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯಗಳಿಂದ ಗುರುತಿಸಲ್ಪಟ್ಟ ಮೊದಲ ಆದ್ಯತೆಯ ಆರೋಗ್ಯ ಕಾರ್ಯಕರ್ತರು ಹಾಗೂ ವಯಸ್ಸಾದವರ ಜತೆಗೆ ಲಸಿಕೆ ಖರೀದಿಸಲು ಬಯಸುವವರಿಗೂ ಇದನ್ನು ವಿತರಿಸಲು ಆಲೋಚಿಸಿದೆ ಎಂದು ತಿಳಿದುಬಂದಿದೆ. ಆಕ್ಸಫರ್ಡ್ ವಿವಿ ಸಹಯೋಗದೊಂದಿಗೆ ಆಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಮುಂದಿನ ವಾರ ಅನುಮೋದನೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿರುವ ಬೆನ್ನಲ್ಲೇ ಈ ವರದಿ ಬಂದಿದೆ. ಇದರ ಜತೆಗೆ ಫೈಜರ್ ಮತ್ತು ಭಾರತ್ ಬಯೋಟೆಕ್ ತಮ್ಮ ಲಸಿಕೆಗಳ ತುರ್ತು ಬಳಕೆಗೆ ಸಲ್ಲಿಸಿರುವ ಅರ್ಜಿಗಳನ್ನೂ ಸಹ ಕೇಂದ್ರದ ತಜ್ಞರು ಪರಿಶೀಲಿಸುತ್ತಿದ್ದಾರೆ.
ಬ್ರಿಟನ್ನಲ್ಲಿ ಪತ್ತೆಯಾಗಿರುವ ರೂಪಾಂತರಿ ವೈರಸ್ ವಿರುದ್ಧ ತಮ್ಮ ಲಸಿಕೆ ರಕ್ಷಣಾತ್ಮಕವಾಗಿ ಕೆಲಸ ನಿರ್ವಹಿಸಲಿದೆ ಎಂದು ಅಮೆರಿಕದ ಮಾಡರ್ನಾ ಇಂಕ್ ತಜ್ಞರು ಹೇಳಿಕೊಂಡಿದ್ದಾರೆ. ಅಮೆರಿಕದಲ್ಲಿ ಮಾಡರ್ನಾ ಲಸಿಕೆಯ ತುರ್ತು ಬಳಕೆ ಈಗಾಗಲೇ ಪ್ರಾರಂಭವಾಗಿದ್ದು, ಅದರ ಡೇಟಾದ ಆಧಾರದ ಮೇಲೆ ತಜ್ಞರು ತಮ್ಮ ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸೈಬರ್ ವಂಚಕರ ಜಾಲ ಈಗ ಕರೊನಾ ಲಸಿಕೆಯ ವಿಷಯವನ್ನಿಟ್ಟುಕೊಂಡೂ ಜನರ ವಂಚನೆಗೆ ಯತ್ನಿಸುತ್ತಿದೆ. ಈ ಕುರಿತು ಸುಮಾರು ಅರ್ಧ ಡಜನ್ಗೂ ಹೆಚ್ಚು ಪ್ರಕರಣಗಳು ಭೋಪಾಲ್ನ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಕರೊನಾ ಲಸಿಕೆಯನ್ನು ಕಾಯ್ದಿರಿಸಿ ಎಂದು ಕರೆ ಮಾಡುವ ವಂಚಕರು ಜನರಿಂದ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಲಸಿಕೆ ಕಾಯ್ದಿರಿಸಿ ಎಂದು ಬರುವ ಯಾವುದೇ ಕರೆಗಳನ್ನು ನಂಬಬೇಡಿ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಇಂತಹ ಕರೆ ಮಾಡುವವರ ಕೋರಿಕೆಯ ಮೇರೆಗೆ ಯಾವುದೇ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಡಿ, ಇಮೇಲ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಕಳುಹಿಸಿದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಬಾರದು ಎಂದೂ ತಿಳಿಸಿದ್ದಾರೆ
ಬ್ರಿಟನ್ನಲ್ಲಿನ ರೂಪಾಂತರಿ ಕರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ ಮುಂದಿನ ವರ್ಷ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಬಹುದು ಹಾಗೂ ಈ ವೈರಸ್ ಹೆಚ್ಚು ಸಾವುಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ಹೇಳಿದೆ. ಲಂಡನ್ ಸ್ಕೂಲ್ ಆಫ್ ಹೈಜೀನ್ ಆಂಡ್ ಟ್ರಾಪಿಕಲ್ ಮೆಡಿಸಿನ್ನಲ್ಲಿನ ಸಾಂಕ್ರಾಮಿಕ ರೋಗಗಳ ಸೆಂಟರ್ ಫಾರ್ ಮ್ಯಾಥಮ್ಯಾಟಿಕಲ್ ಮಾಡೆಲಿಂಗ್ ನಡೆಸಿದ ಅಧ್ಯಯನದ ಪ್ರಕಾರ, ಈ ರೂಪಾಂತರಿ ವೈರಸ್ ಇತರ ತಳಿಗಳಿಗಿಂತ ಶೇಕಡ 56 ಹೆಚ್ಚು ಸಾಂಕ್ರಾಮಿಕ ಎನ್ನಲಾಗಿದೆ. ಜತೆಗೆ ಇತ್ತಿಚೆಗೆ ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಲಸಿಕೆಗಳು ಹಾಗೂ ಕರೊನಾದ ಚಿಕಿತ್ಸಾ ವಿಧಾನ ಈ ವೈರಸ್ ಮೇಲೆ ಕಡಿಮೆ ಪರಿಣಾಮ ಬೀರುವ ಆತಂಕ ಹಲವು ದೇಶಗಳಲ್ಲಿ ಎದುರಾಗಿದೆ ಎಂದು ತಿಳಿದುಬಂದಿದೆ.