

ನವದೆಹಲಿ: ಭಾರತದಲ್ಲಿ ಮುಂದಿನ ಕೆಲವೇ ವಾರಗಳಲ್ಲಿ ಕೋವಿಡ್ ಲಸಿಕೆ ಸಿದ್ಧವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಜ್ಞಾನಿಗಳು ಹಸಿರು ನಿಶಾನೆ ತೋರಿಸುತ್ತಿದ್ದಂತೆ ರಾಷ್ಟ್ರವ್ಯಾಪಿ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸಲಾಗುತ್ತದೆ ಎಂದು ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಅವರು ಹೇಳಿದರು. ಕರೊನಾ ಸೋಂಕು ಆರಂಭವಾದ ನಂತರ ನಡೆದ ಎರಡನೇ ಸರ್ವಪಕ್ಷ ಸಭೆ ಇದಾಗಿದೆ. ಕೋವಿಡ್-19 ಲಸಿಕೆ ಕಂಡು ಹಿಡಿಯುವ ವಿಶ್ವಾಸ ನಮ್ಮ ವಿಜ್ಞಾನಿಗಳಿಗಿದೆ. ಅಗ್ಗದ ಹಾಗೂ ಸುರಕ್ಷಿತ ಲಸಿಕೆಗಾಗಿ ಇಡೀ ಜಗತ್ತು ಎದುರು ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು. ಪ್ರಮುಖ ಪಕ್ಷಗಳ 12 ಮುಖಂಡರು ಈ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು.
ದೊಡ್ಡ ಪ್ರಮಾಣದಲ್ಲಿ ಲಸಿಕೆ ತಯಾರಿಸುವ ಮೂಲಸೌಕರ್ಯ ಭಾರತದಲ್ಲಿದೆ. ದೇಶದಲ್ಲಿ ಸುಮಾರು ಎಂಟು ಲಸಿಕೆಗಳು ಪ್ರಯೋಗದ ಹಂತದಲ್ಲಿವೆ. ಅವುಗಳನ್ನು ದೇಶದಲ್ಲೇ ತಯಾರಿಸಲಾಗುತ್ತದೆ. ಭಾರತದ್ದೇ ಮೂರು ಲಸಿಕೆಗಳ ಪ್ರಯೋಗ ಕೂಡ ನಡೆಯುತ್ತಿದೆ. ಭಾರತದ ಸಿದ್ಧತೆ ಇತರ ಅನೇಕ ದೇಶಗಳಿಗಿಂತ ತುಂಬಾ ಉತ್ತಮವಾಗಿದೆ. ಲಸಿಕೆ ವಿತರಣೆ ಮತ್ತು ಜನರಿಗೆ ಲಸಿಕೆ ಹಾಕುವ ಕಾರ್ಯವನ್ನು ರಾಷ್ಟ್ರೀಯ ತಜ್ಞರ ತಂಡವೊಂದಕ್ಕೆ ವಹಿಸಿಕೊಡಲಾಗಿದೆ. ಅವರಿಂದ ಕ್ಷಣಕ್ಷಣದ ಸಲಹೆಗಳನ್ನು ಪಡೆಯಲಾಗುತ್ತಿದೆ ಎಂದರು. ಲಸಿಕೆ ಸಿದ್ಧತೆ ಸಂಬಂಧ ಪ್ರಧಾನಿ ಮೋದಿ ಕಳೆದ ಎರಡು ವಾರಗಳಲ್ಲಿ ನಾಲ್ಕು ಮಹತ್ವದ ಸಭೆಗಳನ್ನು ನಡೆಸಿದ್ದಾರೆ. ಕಳೆದ ವಾರ ದೇಶದ ಪ್ರಮುಖ ಲಸಿಕೆ ತಯಾರಿಕೆ ಕೇಂದ್ರಗಳಾದ ಅಹಮದಾಬಾದ್, ಪುಣೆ ಮತ್ತು ಹೈದರಾಬಾದ್ಗೆ ಭೇಟಿ ನೀಡಿ ಲಸಿಕೆ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲಿಸಿದ್ದರು.
ರಕ್ಷಣಾ ಸಚಿವ ರಾಜನಾಥ ಸಿಂಗ್, ಗೃಹ ಸಚಿವ ಅಮಿತ್ ಷಾ, ಆರೋಗ್ಯ ಸಚಿವ ಹರ್ಷವರ್ಧನ್, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಷಿ, ಕೇಂದ್ರದ ಹಲವು ಸಚಿವರು, ಗುಲಾಂ ನಬಿ ಆಜಾದ್ (ಕಾಂಗ್ರೆಸ್), ಸುದೀಪ್ ಬಂಡೋಪಾಧ್ಯಾಯ (ತೃಣಮೂಲ ಕಾಂಗ್ರೆಸ್), ಶರದ್ ಪವಾರ್ (ಎನ್ಸಿಪಿ), ಎಚ್.ಡಿ. ದೇವೇಗೌಡ (ಜೆಡಿಎಸ್) ಇನ್ನಿತರ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ರಾಜ್ಯಗಳೊಂದಿಗೆ ಚರ್ಚೆ: ಲಸಿಕೆಯ ಬೆಲೆ ವಿಚಾರದಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಚರ್ಚೆ ನಡೆಸುತ್ತಿದೆ. ಸಾರ್ವಜನಿಕ ಆರೋಗ್ಯವನ್ನು ಆದ್ಯತೆಯಾಗಿರಿಸಿಕೊಂಡು ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಧಾನಿ ತಿಳಿಸಿದರು. ಮುಂಚೂಣಿ ಆರೋಗ್ಯ ಕಾರ್ಯಕರ್ತರು, ವೃದ್ಧರು ಮತ್ತು ಪ್ರಾಣಾಪಾಯ ಎದುರಿಸುತ್ತಿರುವ, ಕೋವಿಡ್ ಲಕ್ಷಣ ಹಾಗೂ ವ್ಯಾಧಿಯಿಂದ ಬಳಲುತ್ತಿರುವವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದರು.
ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ: ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳ ಸುಮಾರು ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುವುದು. ನಂತರ ಕೋವಿಡ್ ವಿರುದ್ಧ ಹೋರಾಡುತ್ತಿರುವ ಎರಡು ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ವಿವರಿಸಿದರು. ಪೊಲೀಸರು, ಸಶಸ್ತ್ರ ಪಡೆಗಳ ಸಿಬ್ಬಂದಿ, ಪೌರ ಕಾರ್ವಿುಕರು ಮೊದಲಾದವರು ಮುಂಚೂಣಿ ಕಾರ್ಯಕರ್ತರಲ್ಲಿ ಒಳಗೊಂಡಿದ್ದಾರೆ.
ಅಮೆರಿಕದಲ್ಲಿ ಕರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ರಚಿಸಿರುವ ತಂಡಕ್ಕೆ ಕರ್ನಾಟಕ ಮೂಲದ ವಿವೇಕ್ ಮೂರ್ತಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಮೂರ್ತಿ ಅವರು ಸರ್ಜನ್ ಜನರಲ್ ಆಗಿ ಮರಳಲಿದ್ದಾರೆ. ಬರಾಕ್ ಒಬಾಮ ಆಡಳಿತದಲ್ಲೂ ವಿವೇಕ್ ಮೂರ್ತಿ ಪ್ರಮುಖ ಹುದ್ದೆಯನ್ನು ನಿರ್ವಹಿಸಿದ್ದರು. ಜೆಫ್ ಜಿಯೆಂಟ್ಸ್ ಅವರನ್ನು ಶ್ವೇತ ಭವನದ ಕರೊನಾ ವೈರಸ್ ಸಂಯೋಜಕರಾಗಿ ಬೈಡೆನ್ ನೇಮಕ ಮಾಡಿದ್ದಾರೆ.
ಚೀನಾ ಲಸಿಕೆ ಪ್ರಗತಿ: ಚೀನಾದ ಕ್ಲೋವರ್ ಬಯೋಫಾರ್ವಸ್ಯೂಟಿಕಲ್ಸ್ ಅಭಿವೃದ್ಧಿಪಡಿಸಿರುವ ಎರಡು ಲಸಿಕೆಗಳು ಉತ್ತಮ ರೋಗನಿರೋಧಕ ಸಾಮರ್ಥ್ಯ ಸಾಬೀತುಪಡಿಸಿದ್ದು ಕೋವಿಡ್ ಗುಣಪಡಿಸುವಲ್ಲಿ ಪರಿಣಾಮಕಾರಿ ಹಾಗೂ ಸುರಕ್ಷಿತವಾಗಿದೆ ಎಂದು ಕಂಪನಿ ಶುಕ್ರವಾರ ಪ್ರಕಟಿಸಿದೆ. ಮಾನವರ ಮೇಲಿನ ಪ್ರಯೋಗಗಳಲ್ಲಿ ಎರಡೂ ಲಸಿಕೆಗಳು ಉತ್ತಮ ಫಲಿತಾಂಶ ತೋರಿಸಿವೆ ಎಂದು ಕ್ಲೋವರ್ ಹೇಳಿದೆ.
ಕೋವಿಡ್ ಲಸಿಕೆಯ 1.6 ಬಿಲಿಯನ್ ಡೋಸ್ ಪಡೆಯುವ ಆರ್ಡರ್ಗಳನ್ನು ಭಾರತ ದೃಢಪಡಿಸಿದ್ದು ಇಷ್ಟೊಂದು ಪ್ರಮಾಣದಲ್ಲಿ ಲಸಿಕೆ ಪಡೆಯಲು ಒಪ್ಪಂದ ಮಾಡಿಕೊಂಡ ಮುಂಚೂಣಿ ದೇಶವಾಗಿ ಹೊರಹೊಮ್ಮಿದೆ. ವಿವಿಧ ದೇಶಗಳ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಐರೋಪ್ಯ ಒಕ್ಕೂಟ (1.58 ಬಿಲಿಯನ್ ಡೋಸ್) ಮತ್ತು ಅಮೆರಿಕ (1 ಬಿಲಿಯನ್ ಡೋಸ್) ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ.