ರಾಷ್ಟ್ರೀಯ ಪೌರತ್ವ ನೋಂದಣಿಗೂ ಕರೊನಾ ಆತಂಕ

NRC 8 JUne 20
Published on

ನವದೆಹಲಿ: ಕೋವಿಡ್-19 ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಜನಗಣತಿ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಪಿಆರ್) ಪ್ರಕ್ರಿಯೆಯನ್ನು ಮುಂದೂಡುವ ಸಾಧ್ಯತೆ ದಟ್ಟವಾಗಿದೆ. ಇದೇ ವರ್ಷ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಈ ಪ್ರಕ್ರಿಯೆಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಮೂರು ತಿಂಗಳು ಕಾಲಾವಕಾಶದಲ್ಲಿ ಪ್ರಕ್ರಿಯೆ ಮುಗಿಸಲು ಸಾಧ್ಯವೇ? ಹತ್ತು ವರ್ಷಕ್ಕೊಮ್ಮೆ ನಡೆಯುವ ಗಣತಿ ಮೊದಲ ಹಂತ ಆರಂಭಿಸಿ ಮುಗಿಸಲು ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಕಷ್ಟು ಕಾಲಾವಕಾಶ ಸಿಗಲಿದೆಯೇ ಎನ್ನುವುದನ್ನು ಇನ್ನಷ್ಟೇ ಅಂದಾಜು ಮಾಡಬೇಕಿದೆ. ಇಡೀ ಪ್ರಕ್ರಿಯೆಯನ್ನು ಮುಂದಿನ ವರ್ಷ ಏಪ್ರಿಲ್​ನಲ್ಲಿ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ.

2021ರ ಗಣತಿಯನ್ನು ಈಗಿನ ವೇಳಾಪಟ್ಟಿ ಪ್ರಕಾರ ಎರಡು ಹಂತಗಳಲ್ಲಿ ನಡೆಸಬೇಕಿದೆ. ಮೊದಲ ಹಂತದಲ್ಲಿ ಈ ವರ್ಷ ಏಪ್ರಿಲ್-ಸೆಪ್ಟಂಬರ್ ನಡುವೆ, ಎನ್​ಪಿಆರ್ ಜೊತೆಯಲ್ಲಿ ಮನೆಗಳ ಪಟ್ಟಿ ಮಾಡುವುದು. ಅದರ ನಂತರ, 2021ರ ಫೆಬ್ರವರಿ 9 ಮತ್ತು 28ರ ನಡುವೆ ಜನಗಣತಿ ನಡೆಸುವುದು. ಗಣತಿಗೆ 2021 ಮಾರ್ಚ್ 21ನ್ನು ರೆಫರೆನ್ಸ್ ದಿನವಾಗಿಟ್ಟುಕೊಳ್ಳುವ ಉದ್ದೇಶವಿದೆ.

ಈ ಎಲ್ಲ ಪ್ರಕ್ರಿಯೆಗಳ ವೇಳಾಪಟ್ಟಿ ಪರಿಷ್ಕರಿಸುವ ದಿಸೆಯಲ್ಲಿ ಸರ್ಕಾರ ಅಧ್ಯಯನ ಮಾಡುತ್ತಿದೆ. ಆದರೆ ವೇಳಾಪಟ್ಟಿ ಪರಿಷ್ಕರಿಸುವುದು ಅನಿವಾರ್ಯವಾಗಬಹುದು ಎಂಬುದು ಮಾಜಿ ಭಾರತೀಯ ಮಹಾ ರಿಜಿಸ್ಟ್ರಾರ್ (ಆರ್​ಜಿಐ) ಮತ್ತು ಜನಗಣತಿ ಕಮಿಷನರ್​ಗಳಾದ ಎ.ಆರ್. ನಂದಾ ಜೆ.ಕೆ. ಬಾಂತಿಯಾ ಅವರ ಅಭಿಪ್ರಾಯವಾಗಿದೆ.

ಕರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳು ಗಣತಿ ಕಾರ್ಯವನ್ನು ಸ್ಥಗಿತಗೊಳಿಸಿವೆ ಅಥವಾ ವಿಳಂಬಗೊಳಿಸಿವೆ ಅಥವಾ ಆನ್​ಲೈನ್ ವಿಧಾನಕ್ಕೆ ಬದಲಾಯಿಸಿವೆ. ನಿರ್ದಿಷ್ಟ ಪ್ರದೇಶಗಳಲ್ಲಿನ ವ್ಯಾಧಿ ಸ್ಥಿತಿ ನೋಡಿ ಸುರಕ್ಷತೆ ಕ್ರಮಗಳ್ನು ನೋಡಿಕೊಂಡು ಹಂತಹಂತವಾಗಿ ಕೆಲಸ ಮುಗಿಸಲು ಯೋಜಿಸಿವೆ.

ಮುಂಗಾರು ಮಳೆ, ಕೃಷಿ ಚಟುವಟಿಕೆಗಳು, ಕೋವಿಡ್-19 ನಿಭಾಯಿಸುವಲ್ಲಿ ರಾಜ್ಯ-ಕೇಂದ್ರಾಡಳಿತ ಪ್ರದೇಶಗಳು ವ್ಯಸ್ತವಾಗಿರುವುದು, ಅಸ್ತವ್ಯಸ್ತಗೊಂಡ ಶೈಕ್ಷಣಿಕ ಚಟುವಟಿಕೆಗಳ ಸಮತೋಲ ಕಾಪಾಡಲು ಶಿಕ್ಷಕರು ಹೆಚ್ಚು ಕಾರ್ಯನಿರತವಾಗುವುದರಿಂದ ಶಿಕ್ಷಕರ ಅಲಭ್ಯತೆ ಸಾಧ್ಯತೆ, ಕಾರ್ಯಕ್ಷೇತ್ರದ ವೇಳೆ ಗಣತಿದಾರರು ಎದುರಿಸಬೇಕಾದ ಆರೋಗ್ಯ ಸುರಕ್ಷತೆ ಮೊದಲಾದವುಗಳ ಆಧಾರದಲ್ಲಿ ಸರ್ಕಾರ ಗಣತಿ ಹಾಗೂ ಎನ್​ಪಿಆರ್ ವೇಳಾಪಟ್ಟಿ ಪರಿಷ್ಕರಿಸುವ ಸಾಧ್ಯತೆ ಇದೆ.

ಆರ್ಥಿಕ ಚಟುವಟಿಕೆಗಳಲ್ಲಿನ ಅಸ್ತವ್ಯಸ್ತತೆ ಮತ್ತು ಸಾಂಕ್ರಾಮಿಕತೆಯಿಂದಾಗಿ ವಲಸೆ ಕಾರ್ವಿುಕರು ತಮ್ಮೂರುಗಳಿಗೆ ಮರಳಿರುವುದು ಮೊದಲಾದ ಅಂಶಗಳು ಕೂಡ ಅಂಕಿ-ಅಂಶಗಳ ಗುಣಮಟ್ಟ ಹಾಗೂ ಹೋಲಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಾರ್ಚ್ ನಂತರ ಇದುವರೆಗಿನ ಸ್ಥಿತಿ ಹಾಗೂ ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕಾರ್ಯಾಚರಣೆ ಪಾವಿತ್ರ್ಯ ಹಾಗೂ ಅನುಕೂಲ ಕಾಪಾಡುವುದು ಅಗತ್ಯವಾದ್ದರಿಂದ ಗಣತಿ ದಿನಾಂಕಗಳನ್ನು ಪರಿಷ್ಕರಿಸುವುದು ಅಗತ್ಯ.

ಒಂದೇ ಬಾರಿ ವಿಳಂಬ

ಈ ಹಿಂದೆ ಒಂದು ಬಾರಿ ಗಣತಿ ರೆಫರೆನ್ಸ್ ದಿನಾಂಕವನ್ನು ರಾಷ್ಟ್ರೀಯವಾಗಿ 1 ತಿಂಗಳು ಮುಂದೂಡ ಲಾಗಿತ್ತು. ಬಾಂಗ್ಲಾದೇಶ ಯುದ್ಧ ಹಾಗೂ ಚುನಾವಣೆ ಅದಕ್ಕೆ ಕಾರಣವಾಗಿತ್ತು. ಪ್ರಾದೇಶಿಕ ವ್ಯತ್ಯಾಸವೂ ಆಗಿತ್ತು. ಅಂದರೆ ಕೆಲವು ಭಾಗಗಳಲ್ಲಿ ವಿಭಿನ್ನ ಅವಧಿಯಲ್ಲಿ ಗಣತಿ ನಡೆಸಲಾಗಿತ್ತು. 1991ರಲ್ಲಿ ಜಮ್ಮು- ಕಾಶ್ಮೀರದಲ್ಲಿ ಗಣತಿ ನಡೆಸಲು ಆಗಿರಲಿಲ್ಲ. ಆದರೆ ಡೇಟಾ ಹೋಲಿಕೆಗಾಗಿ ಜನಸಂಖ್ಯೆಯನ್ನು ಬೇರೆ ವಿಧಾನಗಳಿಂದ ಅಂದಾಜು ಮಾಡಲಾಗಿತ್ತು. ಕೆಲವು ಗಣತಿಗಳಲ್ಲಿ ದೇಶದ ಕೆಲವು ಭಾಗಗಳ ರೆಫರೆನ್ಸ್ ದಿನಾಂಕಗಳಲ್ಲಿ ಬದಲಾವಣೆ ಯಿರುತ್ತದೆ. ಆದರೆ, ಭಾರತದ ಜನಗಣತಿ ಚರಿತ್ರೆಯಲ್ಲೇ ಇಡೀ ದೇಶದ ರೆಫರೆನ್ಸ್ ದಿನಾಂಕ ಮರುಪರಿಶೀಲಿಸುವುದು ಅದರಲ್ಲೂ ಗಣನೀಯ ಅವಧಿಗಾಗಿ ಬದಲಾಯಿಸುವ ಸಂದರ್ಭ ಬಂದಿರುವುದು ಇದೇ ಮೊದಲ ಸಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net