ಕರೊನಾಗೆ ಮತ್ತೊಬ್ಬ ಶಿಕ್ಷಕ ಬಲಿ, ‘ವಿದ್ಯಾಗಮ’ದ ಮೇಲೆ ಕೋವಿಡ್ ಛಾಯೆ

Corona
Published on

ಹಾವೇರಿ: ಮಹಾಮಾರಿ ಕರೊನಾಗೆ ಈವರೆಗೂ ರಾಜ್ಯದಲ್ಲಿ 193 ಶಿಕ್ಷಕರು, ಉಪನ್ಯಾಸಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಬಲಿಯಾಗಿದ್ದರು. ಇದೀಗ ಮತ್ತೊಬ್ಬ ಶಿಕ್ಷಕರು ಕರೊನಾ ಸೋಂಕಿನಿಂದ ಮೃತಪಟ್ಟಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.

ಹಾವೇರಿ ತಾಲೂಕಿನ ಮರೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 55 ವರ್ಷ ವಯಸ್ಸಿನ ಶಿಕ್ಷಕರೊಬ್ಬರು ಕರೊನಾ ಸೋಂಕಿನಿಂದ ಬಳಲುತ್ತಿದ್ದರು. 14 ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾಕ್ಕೆ ಬಲಿಯಾದ ಶಿಕ್ಷಕರ ಸಂಖ್ಯೆ 18ಕ್ಕೇರಿದೆ.

ಕರೊನಾ ಕಾರಣದಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತರಾಗ ಬಾರದೆಂದು ರಾಜ್ಯ ಸರ್ಕಾರ ರೂಪಿಸಿದ್ದ ‘ವಿದ್ಯಾಗಮ’ ಯೋಜನೆ ಮೇಲೂ ಕೋವಿಡ್-19 ಕರಿಛಾಯೆ ಆವರಿಸಿದೆ. ಈ ಯೋಜನೆಯಡಿ ಹಳ್ಳಿಗೆ ತೆರಳಿ ಮಕ್ಕಳನ್ನು ಒಗ್ಗೂಡಿಸಿ ಪಾಠ ಮಾಡುತ್ತಿದ್ದ ಶಿಕ್ಷಕರ ಜತೆಗೆ ಬೆಳಗಾವಿ, ಕಲಬುರಗಿ ಜಿಲ್ಲೆಯ 36 ವಿದ್ಯಾರ್ಥಿಗಳಿಗೂ ಸೋಂಕು ದೃಢಪಟ್ಟಿರುವುದು ತೀವ್ರ ಆತಂಕ ಸೃಷ್ಟಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಈ ಯೋಜನೆಯನ್ನು ಸ್ಥಗಿತಗೊಳಿಸಬೇಕೆಂಬ ಕೂಗು ಪ್ರತಿಧ್ವನಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ನಡುವೆ ಮತ್ತೊಬ್ಬ ಶಿಕ್ಷಕರು ಕರೊನಾಗೆ ಬಲಿಯಾಗಿರುವುದು ಶಿಕ್ಷಕ-ಪಾಲಕ-ಮಕ್ಕಳ ವಲಯದಲ್ಲಿ ಭಾರೀ ಆತಂಕ ಮೂಡಿಸಿದೆ.

ವಿದ್ಯಾಗಮದಿಂದ ಶಿಕ್ಷಕರಲ್ಲಿ ಕರೊನಾಂತಕ ಹೆಚ್ಚುತ್ತಿದ್ದು, ಕೂಡಲೇ ಇದನ್ನು ಸ್ಥಗಿತಗೊಳಿಸಿ ಶಿಕ್ಷಕರ ಹಾಗೂ ಮಕ್ಕಳ ಜೀವ ಉಳಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net