

ನವದೆಹಲಿ: ಚೀನಾದಲ್ಲಿ ಮೊದಲು ಪತ್ತೆಯಾದ ಕರೊನಾ ವೈರಸ್ ಪೂರ್ತಿ ಪ್ರಪಂಚವನ್ನೇ ಆವರಿಸುತ್ತಿದೆ. ದೇಶದಲ್ಲಿಯೂ ಸಹ ಕರೊನಾ ಪರಿಣಾಮ ಹೆಚ್ಚಾಗಿಯೇ ಆಗುತ್ತಿದ್ದು ಸೋಂಕನ್ನು ತಡೆಗಟ್ಟುವುದಕ್ಕಾಗಿ ಅನೇಕ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಾಗಿದ್ದರೂ ಸೋಂಕಿತರ ಸಂಖ್ಯೆಯಲ್ಲಿ ಮಾತ್ರ ಇಳಿಮುಖ ಕಾಣದೆ ಏರಿಕೆಯೇ ಕಾಣುತ್ತಿದೆ. ಇಂದು ಬೆಳಗ್ಗೆ 93ರಲ್ಲಿದ್ದ ಸೋಂಕಿತರ ಸಂಖ್ಯೆ ಮಧ್ಯಾಹ್ನದ ಹೊತ್ತಿಗೆ 107ಕ್ಕೆ ತಲುಪಿದೆ.
ಮಹಾರಾಷ್ಟರದಲ್ಲಿ ಕರೊನಾ ದುಷ್ಪರಿಣಾಮ ಹೆಚ್ಚಾಗಿದ್ದು 31 ಜನರಲ್ಲಿ ಸೋಂಕಿರುವುದು ಧೃಡವಾಗಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕಿತರಿರುವ ರಾಜ್ಯಗಳ ಪಟ್ಟಿಯಲ್ಲಿ 22 ಸೋಂಕಿತರೊಂದಿಗೆ ಕೇರಳ ಎರಡನೇ ಸ್ಥಾನ, 11 ಸೋಂಕಿತರೊಂದಿಗೆ ಉತ್ತರ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಆರು ಜನರಲ್ಲಿ ಸೋಂಕಿರುವುದು ಧೃಡವಾಗಿದೆ. ಭಾರತದಲ್ಲಿ ಸೋಂಕಿತರೆಂದು ಗುರುತಿಸಲಾಗಿರುವವರಲ್ಲಿ 17 ಜನರು ವಿದೇಶಿಗರಾಗಿದ್ದಾರೆ ಎಂದು ವೈದ್ಯಕೀಯ ಇಲಾಖೆ ತಿಳಿಸಿದೆ.
ಪ್ರಪಂಚದಾದ್ಯಂತ 1.5 ಲಕ್ಷದಷ್ಟು ಜನರಲ್ಲಿ ಕರೊನಾ ವೈರಸ್ ಕಾಣಿಸಿಕೊಂಡಿದ್ದು, ಈವರೆಗೆ ಸುಮಾರು 5,300 ಜನರು ಈ ಮಹಾಮಾರಿಯಿಂದಾಗಿ ಮೃತರಾಗಿದ್ದಾರೆ. 135 ದೇಶಗಳಿಗೆ ಹರಡಿರುವ ಈ ರೋಗಕ್ಕೆ ಭಾರತದಲ್ಲಿ ಎರಡು ಬಲಿಯಾಗಿದೆ. ಕರ್ನಾಟಕದ ಕಲಬುರಗಿಯಲ್ಲಿ ಮೊದಲ ಮತ್ತು ದೆಹಲಿಯಲ್ಲಿ ಎರಡನೆಯ ಸಾವು ಸಂಭವಿಸಿದೆ. (ಏಜೆನ್ಸೀಸ್)