ಕರೊನಾ ಸಹಾಯಧ ಅರ್ಜಿ ಸಲ್ಲಿಕೆಗೆ ಇಂದು ಚಾಲನೆ; ಸೇವಾಸಿಂಧು ವೆಬ್ ಪೋರ್ಟಲ್ನಲ್ಲಿ ಅವಕಾಶ

money
Published on

ಬೆಂಗಳೂರು; ಕರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಲಾಕ್ಡೌನ್ನಿಂದ ಸಮಸ್ಯೆ ಅನುಭವಿಸುತ್ತಿರುವ ಚಾಲಕರಿಗೆ ಸರ್ಕಾರ ನೀಡುವ ಸಹಾಯಧನಕ್ಕೆ ಗುರುವಾರದಿಂದ ಸೇವಾಸಿಂಧು ವೆಬ್ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.

ಲಾಕ್ಡೌನ್ನಿಂದಾಗಿ ಸಮಸ್ಯೆಗೆ ಒಳಗಾಗಿರುವ ವಿವಿಧ ವರ್ಗದ ಜನರಿಗೆ ಸಹಾಯಧನ ನೀಡಲಾಗುತ್ತಿದೆ. ಅದರಲ್ಲಿ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರು ಸೇರಿದ್ದಾರೆ. ಅದರಂತೆ ಚಾಲಕರಿಗೆ ತಲಾ 3 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಈ ಸಹಾಯಧನ ಪಡೆಯುವ ಸಂಬಂಧ ಸೇವಾಸಿಂಧು ವೆಬ್ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸುವಂತೆ ಸಾರಿಗೆ ಇಲಾಖೆ ತಿಳಿಸಿತ್ತು. ಅದರಂತೆ ಗುರುವಾರ ಬೆಳಗ್ಗೆ 11 ಗಂಟೆಯೊಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಿಸಲಾಗುತ್ತಿದೆ. ಅರ್ಹ ಚಾಲಕರು ಅರ್ಜಿ ಸಲ್ಲಿಸಿ ಸರ್ಕಾರದ ಪರಿಹಾರ ಪಡೆಯುವಂತೆ ಸೂಚಿಸಲಾಗಿದೆ.

2.46 ಲಕ್ಷ ಚಾಲಕರು:

ಕಳೆದ ವರ್ಷ ಮಾಡಲಾದ ಲಾಕ್ಡೌನ್ ಸಂದರ್ಭದಲ್ಲಿ ಆಟೋ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ತಲಾ 5 ಸಾವಿರ ರೂ. ಸಹಾಯಧನ ನೀಡಲಾಗಿತ್ತು. ಅದರಂತೆ ಕಳೆದ ವರ್ಷ 2,45,852 ಅರ್ಜಿಗಳು ಸಲ್ಲಿಕೆಯಾಗಿದ್ದವು. ಅದರಲ್ಲಿ 2,507 ಅರ್ಜಿಗಳು ತಿರಸತಗೊಂಡಿದ್ದವು. ಉಳಿದಂತೆ 27,733 ಜನರ ಅರ್ಜಿ ಜತೆಗಿನ ದಾಖಲೆ ಸಮರ್ಪಕವಾಗಿರಲಿಲ್ಲ.

ಕಳೆದ ಬಾರಿ ಚಾಲಕರಿಗೆ 117.5 ಕೋಟಿ ರೂ.ಗೂ ಹೆಚ್ಚಿನ ಹಣವನ್ನು ಸಹಾಯಧನದ ರೂಪದಲ್ಲಿ ವಿತರಿಸಲಾಗಿತ್ತು. ಅದರಂತೆ ಈ ಬಾರಿಯೂ 2.45 ಲಕ್ಷ ಚಾಲಕರು ಅರ್ಜಿ ಸಲ್ಲಿಸಲಿದ್ದಾರೆ.

ನೇರ ಖಾತೆಗೆ ಹಣ ವರ್ಗಾವಣೆ:

ಸೇವಾಸಿಂಧು ವೆಬ್ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸುವ ಚಾಲಕರ ಅರ್ಜಿ ಪರಿಶೀಲಿಸಿದ ನಂತರ ಅವರ ಖಾತೆಗೆ ನೇರವಾಗಿ ಸಹಾಯಧನ ವರ್ಗಾಯಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಅಲ್ಲದೆ, ಸೇವಾ ಸಿಂಧು ಪೋರ್ಟಲ್ ಹೊರತುಪಡಿಸಿ ಬೇರೆ ಯಾವುದೇ ರೂಪದಲ್ಲೂ ಅರ್ಜಿ ಸಲ್ಲಿಸುವಂತಿಲ್ಲ ಎಂದು ಇಲಾಖೆ ಚಾಲಕರಿಗೆ ತಿಳಿಸಿದೆ. ಜತೆಗೆ ಸಹಾಯಧನ ಕೊಡಿಸುತ್ತೇವೆ ಎಂದು ವಂಚಿಸುವವರ ವಿರುದ್ಧವೂ ಎಚ್ಚರವಹಿಸುವಂತೆ ಮನವಿ ಮಾಡಿದೆ.

ಅರ್ಜಿ ಜತೆ ಸಲ್ಲಿಸಬೇಕಿರುವ ದಾಖಲೆ:

* 2021ರ ಏಪ್ರಿಲ್ 24ರವರೆಗೆ ಚಾಲ್ತಿಯಲ್ಲಿರುವ ಚಾಲನಾ ಪರವಾನಗಿ (ಡಿಎಲ್)

* ಒಂದು ವಾಹನಕ್ಕೆ ಒಬ್ಬ ಚಾಲಕರು ಮಾತ್ರ ಅರ್ಜಿ ಸಲ್ಲಿಸಬೇಕು

* ಅರ್ಜಿ ಜತೆ ಆಧಾರ್ ಕಾರ್ಡ್, ವಾಹನ ನೋಂದಣಿ ಸಂಖ್ಯೆ, ಚಾಲನಾ ಪರವಾನಗಿ ಸಲ್ಲಿಸಬೇಕು

* ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ವಿವರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net