ಹಾಲಿನ ಪುಡಿ, ಬೆಣ್ಣೆ ವಿಲೇವಾರಿಗೂ ಕರೊನಾ ಕಾಟ: ಕೋಚಿಮುಲ್‌ನಲ್ಲಿ ಮಾರಾಟವಾಗದೆ ಗೋದಾಮಿನಲ್ಲಿ ಉಳಿದಿರುವ 60 ಕೋಟಿ ರೂ. ಮೌಲ್ಯದ ಸರಕು

3-klr-1 altrnative
Published on

ಕೋಲಾರ: ಅವಳಿ ಜಿಲ್ಲೆಯ ಹಾಲು ಉತ್ಪಾದಕರ ಜೀವನಾಡಿಯಾಗಿರುವ ಹಾಲು ಒಕ್ಕೂಟದಲ್ಲಿ ಉತ್ಪಾದನೆಗೊಳ್ಳುವ ಹಾಲಿನ ಪುಡಿ ಮತ್ತು ಬೆಣ್ಣೆ ಮಾರಾಟಕ್ಕೆ ಕೋವಿಡ್ ಅಡ್ಡಗಾಲಾಗಿರುವುದರಿಂದ ಸುಮಾರು 60 ಕೋಟಿ ರೂ. ಮೌಲ್ಯದ ಸರಕು ಗೋದಾಮಿನಲ್ಲಿ ಕೊಳೆಯುವಂತಾಗಿದೆ.

ಒಕ್ಕೂಟಕ್ಕೆ ಪ್ರಸ್ತುತ 9 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದ್ದು, 3.50 ಲಕ್ಷ ಲೀಟರ್ ಸ್ಯಾಚೆಟ್ ಹಾಲು, 4 ಲಕ್ಷ ಗುಡ್‌ಲ್ೈ ಹಾಲು ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತಿದೆ. ಇನ್ನುಳಿದ 1.5 ಲೀಟರ್ ಹಾಲಿನಿಂದ ಬೆಣ್ಣೆ ಮತ್ತು ಹಾಲಿನ ಪುಡಿ ತಯಾರಿಸಲಾಗುತ್ತಿದೆ.

ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಹಾಲಿನ ಪುಡಿ ಮತ್ತು ಬೆಣ್ಣೆ ಮಾರಾಟ ಕುಂಠಿತಗೊಂಡಿರುವುದರಿಂದ ಒಕ್ಕೂಟದಲ್ಲಿ ಪ್ರಸ್ತುತ 1 ಸಾವಿರ ಟನ್ ಹಾಲಿನ ಪುಡಿ, 900 ಟನ್ ಬೆಣ್ಣೆ ವಿಲೇವಾರಿಯಾಗದೆ ಗೋದಾಮು ಸೇರಿದ್ದು, ಒಕ್ಕೂಟಕ್ಕೆ 60 ಕೋಟಿ ರೂ.ಆರ್ಥಿಕ ಹೊರೆ ಉಂಟಾಗಿದೆ.

ಈ ಪರಿಸ್ಥಿತಿ ಕೇವಲ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಮಾತ್ರವಲ್ಲದೆ ರಾಜ್ಯದ 14 ಒಕ್ಕೂಟಗಳಿಗೂ ಉಂಟಾಗಿದೆ. ಹಾಲಿನ ಪುಡಿ ಮತ್ತು ಬೆಣ್ಣೆಯನ್ನು ಹೆಚ್ಚು ದಿನ ದಾಸ್ತಾನು ಮಾಡುವುದರಿಂದ ಕೊಳೆಯುವ ಸಾಧ್ಯತೆ ಇರುವುದರಿಂದ ಎಂಆರ್‌ಪಿ ದರ ಕಡಿಮೆ ಮಾಡಿ ಮಾರಾಟ ಮಾಡಲು ಒಕ್ಕೂಟಗಳು ಸರ್ಕಾರ ಮತ್ತು ಕೆಎಂಎಫ್‌ಗೆ ಮನವಿ ಮಾಡಿದ್ದು ಇನ್ನೂ ಒಪ್ಪಿಗೆ ಸಿಕ್ಕಿಲ್ಲ.

ಒಂದು ಕೆಜಿ ಹಾಲಿನ ಪುಡಿ ತಯಾರಿಸಲು 212 ರೂ., ಬೆಣ್ಣೆಗೆ 250 ರೂ. ಖರ್ಚು ಬೀಳುತ್ತದೆ. ಆದರೆ ಎಂಆರ್‌ಪಿ ದರ ಹಾಲಿನ ಪುಡಿಗೆ 300 ರೂ. ಬೆಣ್ಣೆಗೆ 320 ರೂ. ನಿಗದಿಯಾಗಿರುವುದರಿಂದ ಗ್ರಾಹಕರು ಖರೀದಿ ಮಾಡಲು ಹಿಂದೇಟು ಹಾಕುತ್ತಿರುವುದೂ ನಷ್ಟಕ್ಕೆ ಕಾರಣ ಎನ್ನಲಾಗಿದೆ.

ಕರೊನಾದಿಂದ ಕಳೆದ ವರ್ಷ ಶಾಲೆಗಳು ಬಂದ್ ಆಗಿದ್ದರಿಂದ ಹಾಲಿನ ಪುಡಿ ಖಾಲಿ ಮಾಡಲು ಸಾಧ್ಯವಾಗಲಿಲ್ಲ, ಈಗ ಶಾಲೆ ಪ್ರಾರಂಭವಾಗಿದ್ದು ನ.2ರಿಂದ ಹಾಲು ನೀಡಲಾಗುತ್ತಿದೆ. ಜತೆಗೆ ಹಾಲಿನ ಪುಡಿ ನೀಡಿದಲ್ಲಿ ಒಕ್ಕೂಟದಲ್ಲಿ ಹಾಲಿನ ಪುಡಿ ಕೊಳೆಯುವುದನ್ನು ತಪ್ಪಿಸಬಹುದು.

ನೆರವಿಗೆ ಬರಲು ಒಕ್ಕೂಟಗಳು ಮಾಡಿರುವ ಮನವಿಗೆ ಸರ್ಕಾರ ಗ್ರೀನ್‌ಸಿಗ್ನಲ್ ನೀಡಿದಲ್ಲಿ ಕೋಲಾರ ಸೇರಿ 14 ಒಕ್ಕೂಟಗಳಿಗೆ ನೂರಾರು ಕೋಟಿ ರೂ. ನಷ್ಟ ತಪ್ಪುತ್ತದೆ. ಜತೆಗೆ ಜಿಲ್ಲೆಯ 223582 ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಿದಂತಾಗುತ್ತದೆ.

ಸರ್ಕಾರ ಶಾಲಾ ಮಕ್ಕಳಿಗೆ ಹಾಲು ಒದಗಿಸಲು ಇನ್ನೂ ಆದೇಶ ಹೊರಡಿಸದಿರುವುದು ಹಾಗೂ ಎಂಆರ್‌ಪಿ ದರಕ್ಕಿಂತ ಕಡಿಮೆ ದರಕ್ಕೆ ಹಾಲು ಮತ್ತು ಬೆಣ್ಣೆ ಮಾರಾಟ ಮಾಡಲು ಅವಕಾಶ ನೀಡದಿರುವುದರಿಂದ ಒಕ್ಕೂಟಕ್ಕೆ ನಷ್ಟ ಉಂಟಾಗುತ್ತಿದೆ. ಮುಖ್ಯಮಂತ್ರಿ ಹಾಗೂ ಕೆಎಂಎಫ್ ಅಧ್ಯಕ್ಷರ ಗಮನಕ್ಕೆ ತಂದಿರುವೆ, ಶಾಲಾ ಮಕ್ಕಳಿಗೆ ಹಾಲಿನ ಜತೆಗೆ ಹಾಲಿನ ಪುಡಿ ಕೊಟ್ಟರೆ ಅಪೌಷ್ಟಿಕ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಒಕ್ಕೂಟಕ್ಕೆ ಹಾಗೂ ಹಾಲು ಉತ್ಪಾದಕರಿಗೆ ಅನುಕೂಲವಾಗುತ್ತದೆ. ಕೆ.ವೈ.ನಂಜೇಗೌಡ, ಅಧ್ಯಕ್ಷ, ಜಿಲ್ಲಾ ಹಾಲು ಒಕ್ಕೂಟ ಹಾಗೂ ಶಾಸಕ, ಮಾಲೂರು ಶಾಲಾ ಮಕ್ಕಳಿಗೆ ನ.2ರಿಂದ ಹಾಲು ನೀಡಲಾಗುತ್ತಿದೆ, ಇದರಿಂದ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ, ಹಾಲಿನ ಪೌಡರನ್ನು ಮಕ್ಕಳಿಗೆ ನೀಡುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ, ಶಿಕ್ಷಣ ಇಲಾಖೆಯಿಂದ ಏನು ಆದೇಶ ಬರುತ್ತದೋ ನೋಡಬೇಕು. ಜಿಲ್ಲೆಯ 2 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಪ್ರಯೋಜನವಾಗುತ್ತದೆ. ರೇವಣ ಸಿದ್ದಪ್ಪ, ಡಿಡಿಪಿಐ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net