ಕರೊನಾ ಗೆದ್ದ ಶರತ್​ ಬಚ್ಚೇಗೌಡ ಜನರಿಗೆ ಹೇಳಿದ್ದೇನು?

sharath bachegowda
Published on

ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಮತ್ತು ಪತ್ನಿ ಪ್ರತಿಭಾ ಶರತ್ ಅವರು ಕೋವಿಡ್​ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಶರತ್ ಬಚ್ಚೇಗೌಡ ದಂಪತಿಗೆ ಜು.8ರಂದು ಸೋಂಕು ದೃಢಪಟ್ಟಿತ್ತು. ವೈದ್ಯರ ಸಲಹೆ ಮೇರೆಗೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರು ಮನೆಯಲ್ಲೇ ಕ್ವಾರಂಟೈನ್​ಗೆ ಒಳಪಟ್ಟಿದ್ದರು. ಮತ್ತೊಮ್ಮೆ ಕರೊನಾ ಟೆಸ್ಟ್ ಮಾಡಿಸಿಕೊಂಡಿದ್ದು, ಇಂದು(ಶನಿವಾರ) ಬಂದ ವರದಿಯಲ್ಲಿ ನೆಗೆಟಿವ್​ ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಶರತ್ ಬಚ್ಚೇಗೌಡ, 'ನಾನು ಹಾಗೂ ನನ್ನ ಧರ್ಮಪತ್ನಿ ಕರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದೇವೆ. ಇಂದು ಕರೊನಾ ಪರೀಕ್ಷೆಯ ಫಲಿತಾಂಶದಲ್ಲಿ ನೆಗಟಿವ್ ಬಂದಿದೆ. ನಾವು ಗುಣಮುಖರಾಗಲೆಂದು ಆಶೀರ್ವಾದಕ್ಕೆ ಮಾಡಿದವರಿಗೆಲ್ಲ ನಾವು ಮತ್ತು ನಮ್ಮ ಕುಟುಂಬ ಸದಾ ಚಿರಋಣಿಯಾಗಿರಲಿದೆ' ಎಂದಿದ್ದಾರೆ.

'ಸೋಂಕಿತರನ್ನ ಅಪರಾಧಿಗಳ ರೀತಿ ಕಾಣುವುದು, ಸಾಮಾಜದ ನಿಂದನೆಗೆ ಗುರಿ ಮಾಡುವುದು ಸರಿಯಲ್ಲ. ಇದು ಒಂದು ಯುದ್ಧ, ಈ ಸಾಂಕ್ರಾಮಿಕ ರೋಗದ ವಿರುದ್ಧ ಎಲ್ಲರೂ ಧೈರ್ಯದಿಂದ ಒಗ್ಗಟ್ಟಾಗಿ ಹೋರಾಡೋಣ, ಯಾರೂ ತಾಳ್ಮೆ ಕಳೆದುಕೊಂಡು ಧೃತಿಗೆಡಬಾರದು' ಎಂದು ಶಾಸಕರು ಮನವಿ ಮಾಡಿದ್ದಾರೆ.

'ಸೋಂಕಿತರು ಕ್ವಾರಂಟೈನ್ ಅವಧಿ ಮತ್ತು ಸರ್ಕಾರದ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಹಾಗೂ ಅದು ನಮ್ಮ ಜವಾಬ್ದಾರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸುವುದನ್ನ ಮರಿಯಬೇಡಿ' ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net