

ಕೊಯಮತ್ತೂರು: ಕರೊನಾ ಹಾವಳಿಗೆ ಸಂಬಂಧಿಸಿದಂತೆ ಲಾಕ್‌ಡೌನ್‌ನಲ್ಲಿ ನಿರತರಾಗಿದ್ದ ಹಲವಾರು ಪೊಲೀಸರಿಗೆ ಮಾನವೀಯತೆ ದೃಷ್ಟಿಯಿಂದ ಆಹಾರದ ಪೊಟ್ಟಣಗಳನ್ನು ವಿತರಿಸಿದ್ದ 61 ವರ್ಷದ ವ್ಯಕ್ತಿಯೇ ಈಗ ಕರೊನಾ ಸೋಂಕು ಹೊಂದಿರುವುದು ದೃಢಪಟ್ಟಿದ್ದು, ಆರೋಗ್ಯ ಇಲಾಖೆಗೆ ಮತ್ತು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಸ್ಥಳೀಯ ರಾಜಕಾರಣಿಯೊಬ್ಬರಿಗೆ ಅತ್ಯಂತ ನಿಕಟವರ್ತಿಯಾಗಿರುವ ಈ ವ್ಯಕ್ತಿ ಮಾರ್ಚ್ 23ರಂದು ದೆಹಲಿ ಪ್ರವಾಸದಿಂದ ವಾಪಸ್ ಬಂದಿದ್ದ. ಈತನ ಜತೆ ದೆಹಲಿಯಿಂದ ರೈಲಿನಲ್ಲಿ ಬಂದಿದ್ದ ಕೆಲವು ಸಹಪ್ರಯಾಣಿಕರು ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಭಾಗವಹಿಸಿದವರಾದ್ದರಿಂದ ಈತನಿಗೂ ಹೋಮ್ ಕ್ವಾರಂಟೈನ್‌ಗೆ ಸೂಚಿಸಲಾಗಿತ್ತು. ಆದರೆ ಈತ ಮನೆಯಲ್ಲಿ ಇರದೇ ಹೊರಗೆ ಮುಕ್ತವಾಗಿ ಓಡಾಡುತ್ತಿದ್ದ ಎನ್ನಲಾಗಿದೆ. ಈತನನ್ನು ಪುನಃ ಪರೀಕ್ಷೆಗೆ ಒಳಪಡಿಸಿದಾಗ ಕರೊನಾ ಪಾಸಿಟಿವ್ ಇರುವುದು ಏಪ್ರಿಲ್ 9ರಂದು ಬೆಳಕಿಗೆ ಬಂದಿದೆ.
ಇದರಿಂದಾಗಿ ಆರೋಗ್ಯ ಇಲಾಖೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದು, ಈತನ ಸಂಪರ್ಕಕ್ಕೆ ಬಂದ ಪೊಲೀಸರು ಮತ್ತು ಇತರರಿಗಾಗಿ ಹುಡುಕಾಡತೊಡಗಿದೆ. ‘‘ಈಗಾಗಲೇ ಕೆಲವರು ಸಿಕ್ಕಿದ್ದು ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ’’ ಎಂದು ಆರೋಗ್ಯ ಇಲಾಖೆ ಉಪನಿರ್ದೇಶಕ ಡಾ. ಜಿ. ರಮೇಶ್‌ಕುಮಾರ್ ತಿಳಿಸಿದ್ದಾರೆ.