

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಬಿ.ಜಿ. ಅಜಯಕುಮಾರ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ನಾಲ್ಕೈದು ದಿನಗಳಿಂದ ಸುಸ್ತು, ಬೆನ್ನು ನೋವಿನಿಂದ ಬಳಲುತ್ತಿದ್ದ ಅವರು ಶನಿವಾರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಅವರ ಪತ್ನಿ ಹಾಗೂ ಮಗನಿಗೂ ಸೋಂಕು ತಗುಲಿದೆ. ಮಗಳಿಗೆ ನೆಗೆಟಿವ್ ಬಂದಿದೆ.
ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೇಯರ್ ಅಜಯಕುಮಾರ್ ಕುಟುಂಬ ಹೋಂ ಐಸೋಲೇಶನ್ಗೆ ಒಳಪಟ್ಟಿದೆ.
ಜನಪ್ರತಿನಿಧಿಯಾಗಿ ವಾರ್ಡ್ಗಳಿಗೆ ಹೋಗಿರುತ್ತೇವೆ. ಯಾರೇ ಕರೆದರೂ ಅವರ ಅಹವಾಲು ಆಲಿಸುತ್ತೇವೆ. ಅಂಥ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೋಂಕು ಬಂದಿರಬಹುದು. ಆದರೆ, ಹೆದರುವ ಅಗತ್ಯವಿಲ್ಲ ಎಂದು ಮೇಯರ್ ಹೇಳಿದರು.
ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಕಡಿಮೆ. ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ಎಚ್ಚರ ವಹಿಸಬೇಕು. ಬೇರೆ ಕೆಲವು ಜಿಲ್ಲೆಗಳಿಗೆ ಹೋಲಿಸಿದಾಗ ದಾವಣಗೆರೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಕಡಿಮೆ. ಇದು ಹೆಚ್ಚಾಗಲು ಆಸ್ಪದ ನೀಡಬಾರದು. ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಉತ್ತಮ ಗುಣಮಟ್ಟದ ಆಹಾರ ಸೇವಿಸಬೇಕು ಎಂದು ಮೇಯರ್ ಸಲಹೆ ನೀಡಿದರು.