ಸಿಎಂ ಯಡಿಯೂರಪ್ಪಗೆ ಮತ್ತೆ ಕರೊನಾ ಪಾಸಿಟಿವ್​! ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್​ಗೆ ಶಿಫ್ಟ್

BSY
Published on

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆಯಿಂದ ಸಿಎಂ ಜ್ವರದಿಂದ ಬಳಲುತ್ತಿದ್ದರು. ಜನರಲ್​ ಚೆಕಪ್‌ಗಾಗಿ ಇಂದು ಬೆಳಗ್ಗೆ ಎಂ.ಎಸ್​.ರಾಮಯ್ಯ ಆಸ್ಪತ್ರೆಗೆ ಸಿಎಂ ಹೋಗಿದ್ದರು. ಯಡಿಯೂರಪ್ಪ ಅವರ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಅಡ್ಮಿಟ್​ ಆಗುವಂತೆ ಹೇಳಿದ್ದರು.

ರಾಮಯ್ಯ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್​ಗೆ ಒಳಗಾದ ಸಿಎಂ ವರದಿ ಪಾಸಿಟಿವ್​ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಯಡಿಯೂರಪ್ಪಗೆ 2ನೇ ಬಾರಿ ಕರೊನಾ ಸೋಂಕು ಪಾಸಿಟಿವ್​ ಬಂದಿದೆ. ಕಳೆದ ವರ್ಷ ಸೋಂಕು ತಗುಲಿ ಗುಣಮುಖರಾಗಿದ್ದರು. ಮಾ.18ರಂದು ಸಿಎಂ ಕರೊನಾ ವ್ಯಾಕ್ಸಿನ್​ ಪಡೆದಿದ್ದರು. ಆದರೂ ಕರೊನಾ ಸೋಂಕು ಮತ್ತೆ ತಗುಲಿದೆ.

ಸಿಎಂ ಯಡಿಯೂರುಪ್ಪ ಅವರು ಆಸ್ಪತ್ರೆಗೆ ಬರುವ ಮುನ್ನಾ ಅಂದರೆ ಇಂದು ಬೆಳಗ್ಗೆ ಆರೋಗ್ಯ ಸಚಿವರೊಂದಿಗೆ ಕರೊನಾ ಎಮರ್ಜೆನ್ಸಿ ಮೀಟಿಂಗ್​ ಮಾಡಿದ್ದರು. ರಾಜ್ಯದಲ್ಲಿ ಕರೊನಾ ನಿಯಂತ್ರಿಸಲು ತುರ್ತಾಗಿ ಕೈಗೊಳ್ಳಬೇಕಾದ ಕ್ರಮಗಳ ಜಾರಿ ಕುರಿತು ಚರ್ಚಿಸಿದ್ದರು. ಸಿಎಂ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ನಿನ್ನೆ ಬೆಳಗಾವಿ ಲೋಕಸಭಾ ಉಪ ಚುನಾವಣೆ ಹಿನ್ನೆಲೆ ರೋಡ್​ ಶೋ ಮತ್ತು ಬಹಿರಂಗ ಸಭೆಯಲ್ಲೂ ಪಾಲ್ಗೊಂಡು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರವಾಗಿ ಮತಯಾಚಿಸಿದ್ದರು.

ಕರೊನಾ ಸೋಂಕು ತಗುಲಿರುವ ಬಗ್ಗೆ ಸ್ವತಃ ಸಿಎಂ ಅವರೇ ಟ್ವೀಟ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಜ್ವರದ ಹಿನ್ನೆಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗಲಕ್ಷಣ ಇರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್​ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net