

ಬೆಂಗಳೂರು: ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರಿಗೂ ಕರೊನಾ ಸೋಂಕು ದೃಢಪಟ್ಟಿದೆ. ಅಧಿವೇಶ ಆರಂಭಕ್ಕೂ ಮುನ್ನವೇ ಕೋವಿಡ್ ಸೋಂಕಿಕ ಜನಪ್ರತಿನಿಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಬಾರಿಯ ಅಧಿವೇಶನದಲ್ಲಿ ಬಹುತೇಕರು ಭಾಗವಹಿಸುವುದು ಅನುಮಾನ.
ಸೆ.16ರಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೂ ಕರೊನಾ ಸೋಂಕು ತುಗುಲಿದ್ದು, ಸದ್ಯ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೀಗ ಡಿಸಿಎಂಗೂ ಕೋವಿಡ್ ಪಾಸಿಟಿವ್ ಬಂದಿದೆ. ಈ ಬಗ್ಗೆ ಸ್ವತಃ ಅಶ್ವಥ್ ನಾರಾಯಣ್ ಅವರೇ ಟ್ವಿಟರ್ನಲ್ಲಿ ದೃಢಪಡಿಸಿದ್ದಾರೆ. ಇದನ್ನೂ ಓದಿರಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಕರೊನಾ ಸೋಂಕು
'ಸೋಮವಾರದಿಂದ ವಿಧಾನಸಭೆಯ ಅಧಿವೇಶನ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ. ವರದಿಯಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಆದರೆ, ನನಗೆ ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ಆರೋಗ್ಯವಾಗಿದ್ದೆ. ವರದಿ ಪಾಸಿಟಿವ್ ಇರುವ ಕಾರಣ ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ' ಎಂದು ಡಿಸಿಎಂ ತಿಳಿಸಿದ್ದಾರೆ. ಅಲ್ಲದೆ 'ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದವರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದ್ದಾರೆ.