

ರಾಮನಗರ : ಕರೊನಾ ನಿಯಮ ಪಾಲನೆ ಕೇವಲ ಕಾಗದಕ್ಕೆ ಸೀಮಿತವಾಗಿದ್ದು, ರಾಮನಗರ ಮತ್ತು ಚನ್ನಪಟ್ಟಣ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಇದು ಅನ್ವಯ ಆಗುತ್ತಿಲ್ಲ.ಕೇವಲ 5 ಮಂದಿ, ಪರಸ್ಪರ ಅಂತರ ಕಾಯ್ದುಕೊಂಡು ಪ್ರಚಾರ ಮಾಡಬೇಕು ಎನ್ನುವ ನಿಯಮವಿದ್ದರೂ ಇದನ್ನು ಲೆಕ್ಕಕ್ಕೆ ಹಾಕಿಕೊಳ್ಳದ ಬಹುತೇಕ ಮಂದಿ ತಮಗೂ ನಿಯಮಕ್ಕೂ ಸಂಬಂಧ ಇಲ್ಲವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಆದರೆ ವೈಫಲ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಸಹ ಕೈಕಟ್ಟಿ ಕುಳಿತಂತೆ ಕಾಣುತ್ತಿದೆ.
ಏ.27ಕ್ಕೆ ಮತದಾನ ನಿಗದಿಯಾಗಿದ್ದು, ಬಹುತೇಕ ಎಲ್ಲೂ ಜನಸಂದಣಿ ಸೇರುವ ಬಹಿರಂಗ ಪ್ರಚಾರ ಇಲ್ಲವಾದರೂ ಸ್ಥಳೀಯ ಮಟ್ಟದಲ್ಲಿಯೇ ನಡೆಯುತ್ತಿರುವ ಮನೆ ಮನೆ ಪ್ರಚಾರದಲ್ಲಿ ಕನಿಷ್ಠ 50 ಮಂದಿ ಗುಂಪು ಕಟ್ಟಿಕೊಂಡು ಹೋಗಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿರುವುದು ಸೋಂಕು ಉಲ್ಬಣಗೊಳ್ಳಲು ಕಾರಣವಾಗುತ್ತಿದೆ.
ಮತ ಬೇಟೆಗೆ ಕರೊನಾ ಮರೆತರು: ಪ್ರಚಾರಕ್ಕೆ ಚುನಾವಣಾ ಆಯೋಗವೇ ನಿಯಮಗಳನ್ನು ರೂಪಿಸಿದೆ. ಇದರಂತೆ 5 ಮಂದಿ ಮಾತ್ರ ಪ್ರಚಾರ ಮಾಡಬೇಕಿದೆ. ಆದರೆ, ಇದನ್ನು ಜಾರಿಗೆ ತರಲು ಅಭ್ಯರ್ಥಿಗೆ ಸಾಧ್ಯವಾಗುತ್ತಿಲ್ಲ. ಪ್ರಚಾರಕ್ಕೆ ಯಾರೇ ಒಬ್ಬ ಮುಖಂಡರನ್ನು ಕರೆಯದೆ ನಿರ್ಲಕ್ಷೃ ಮಾಡಿದರೆ ತಮಗೆ ಮತ ತಪ್ಪಬಹುದು ಎನ್ನುವ ಆತಂಕ ಕಾಡುತ್ತಿರುವುದರಿಂದ ಎಲ್ಲರನ್ನೂ ಗುಂಪು ಕಟ್ಟಿಕೊಂಡು ಹೋಗಲೇಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಅಭ್ಯರ್ಥಿಗಳು. ಇದರಿಂದ ಕರೊನಾಗಿಂತ ಮುಖ್ಯವಾಗಿ ಪ್ರಚಾರಕ್ಕೆ ಪ್ರಾಮುಖ್ಯತೆ ಕೊಡುತ್ತಿರುವುದು ಅವಳಿ ನಗರಗಳಲ್ಲಿ ಸಾಮಾನ್ಯವಾಗಿದೆ.
ಸೋಂಕು ಹರಡುವಿಕೆ ಆತಂಕ: ನಿಮಯಗಳನ್ನು ಗಾಳಿಗೆ ತೂರಿ ನಡೆಯುತ್ತಿರುವ ಪ್ರಚಾರ ಕಾರ್ಯದಿಂದ ಕರೊನಾ ಸೋಂಕು ಹರಡುವ ವೇಗ ಹೆಚ್ಚಾಗುವ ಆತಂಕವಿದೆ. ಹೆಚ್ಚಿನ ಕಡೆಗಳಲ್ಲಿ ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೇ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಜಿಲ್ಲಾ ಕೇಂದ್ರ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಹೆಚ್ಚಿನ ಸೋಂಕಿನ ಪ್ರಕರಣಗಳು
ಕಂಡು ಬರುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಆದೇಶ ಉಲ್ಲಂಸಿದ್ರೆ ಕಠಿಣ ಕ್ರಮ
ರಾಮನಗರ: ಜಿಲ್ಲೆಯಾದ್ಯಂತ ಕರೊನಾ ನಿಯಂತ್ರಣ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಂದ ಸಿ.ಆರ್.ಪಿ.ಸಿ ಸೆಕ್ಷನ್ 144 ರ ಅಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮೇ.4 ರವರೆಗೆ ಸರ್ಕಾರದ ಆದೇಶಗಳಲ್ಲಿ ವಿವರಿಸಿರುವಂತೆ ಪೂರ್ವಾನುಮತಿ ಪಡೆದ ಮದುವೆ ಕಾರ್ಯಕ್ರಮ ಸಂದರ್ಭಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ 4ಕ್ಕಿಂತ ಅಧಿಕ ಮಂದಿ ಗುಂಪು ಗುಂಪಾಗಿರುವುದನ್ನು ಮತ್ತು ಓಡಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಯಾವುದೇ ವ್ಯಕ್ತಿ ಈ ಆದೇಶವನ್ನು ಉ್ಲಂಸಿದಲ್ಲಿ ಅಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 51ರಿಂದ 60ರ ಜತೆಗೆ ಭಾರತಿಯ ದಂಡ ಸಂಹಿತೆಯ ಕಲಂ 188ರ ರೀತ್ಯಾ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳೇ ಇತ್ತ ಗಮನ ಹರಿಸಿ : ಕರೊನಾ ನಿಯಮಗಳನ್ನು ಮೀರಿ ಪ್ರಚಾರ ಕಾರ್ಯ ನಡೆಯುತ್ತಿದ್ದರೂ ತಾಲೂಕು ಆಡಳಿತ ಇದಕ್ಕೆ ಬ್ರೇಕ್ ಹಾಕದೇ ಇರುವ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕಿದೆ. ಈ ಬಗ್ಗೆ ಖಡಕ್ ಸಂದೇಶವನ್ನು ತಾಲೂಕು ಆಡಳಿತಕ್ಕೆ ನೀಡಿ ಬಾಕಿ ಇರುವ ಪ್ರಚಾರದ ದಿನಗಳಲ್ಲಾದರೂ ನಿಯಮಗಳು ಜಾರಿಯಾಗುವಂತೆ ಕ್ರಮವಹಿಸಬೇಕಿದೆ.
ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಹರಿಸಬೇಕು.
--------------------------------------------------------