

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ಅವಕಾಶಗಳನ್ನು ತೆರೆದಿಟ್ಟ ಕರೊನಾ!
ಆರೋಗ್ಯ ಕ್ಷೇತ್ರದ ಕೊರತೆಗಳನ್ನು ಕರೊನಾ ಎತ್ತಿ ತೋರಿಸಿತು. ನಾವು ಏನೆಲ್ಲ ಉತ್ಪಾದನೆ ಮಾಡುತ್ತೇವೆ, ಯಾವುದಕ್ಕೆಲ್ಲ ನೆರೆ ದೇಶಗಳನ್ನು ನೆಚ್ಚಿಕೊಂಡಿದ್ದೇವೆ ಎಂಬುದು ಸ್ಟಷ್ಟವಾಗಿದೆ. ಹೀಗಾಗಿ ನಮ್ಮ ಯುವಕರು ಇಲ್ಲಿನ ಸಂಪನ್ಮೂಲ ಬಳಸಿಕೊಂಡು ಆರೋಗ್ಯ ಕ್ಷೇತ್ರದ ಅಗತ್ಯಗಳ ಬಗ್ಗೆ ಹುಡುಕಾಡಿ ಉದ್ಯಮ ಆರಂಭಿಸಬಹುದಾಗಿದೆ. ಪಿಪಿಇ ಕಿಟ್ಗಾಗಿ ಇಷ್ಟು ವರ್ಷ ನಾವು ಚೀನಾವನ್ನೇ ಅವಲಂಬಿಸಿದ್ದೆವು. ಅದನ್ನು ನಮ್ಮಲ್ಲೇ ಉತ್ಪಾದಿಸಲು ಅವಕಾಶವಿದ್ದು, ಅದರಿಂದ ಉದ್ಯೋಗ ಸೃಷ್ಟಿಯೂ ಸಾಧ್ಯ. ಕರೊನಾ ಬಳಿಕ ಶುಚಿತ್ವದ ಬಗ್ಗೆ ಜನರಿಗೆ ಜಾಗೃತಿ ಹೆಚ್ಚಿದ್ದು, ಮಾಸ್ಕ್, ಸ್ಯಾನಿಟೈಸರ್, ಕೈಗವಸು, ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್ ಮುಂತಾದವುಗಳಿಗೆ ಬೇಡಿಕೆ ಹೆಚ್ಚಿದೆ. ಸಣ್ಣ ಉದ್ಯಮ ನಡೆಸುವವರು ಇವುಗಳ ಉತ್ಪಾದನೆ ಆರಂಭಿಸಿ ಲಾಭ ಗಳಿಸಬಹುದು. ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಪ್ರಧಾನಿ ಮೋದಿ ಪ್ರತಿಪಾದಿಸಿದ್ದಾರೆ. ಅದಲ್ಲದೇ ಹೆಲ್ತ್ ಪಾರ್ಕ್ಗಳನ್ನು ದೇಶದ ವಿವಿಧೆಡೆ ಆರಂಭಿಸಲಾಗುತ್ತಿದೆ. ಮುದ್ರಾ ಯೋಜನೆಯಡಿ, 2020-21ನೇ ಸಾಲಿನಲ್ಲಿ 98,916 ಕೋಟಿ ರೂ. ಮೊತ್ತದ 1.54 ಕೋಟಿ ಸಾಲಗಳು ಮಂಜೂರಾಗಿವೆ. ಇಂತಹ ಸರ್ಕಾರಿ ಸೌಲಭ್ಯ ಬಳಸಿಕೊಂಡು ಉದ್ಯಮ ಆರಂಭಿಸಬಹುದು.
| ಡಾ. ಕೆ. ಸುಧಾಕರ್ ಆರೋಗ್ಯ ಸಚಿವ